ಶಿರಸಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ವಿಫಲವಾಗುವ ಜೊತೆ ಭ್ರಷ್ಟತೆಯಿಂದ ತುಂಬಿದೆ ಎಂದು ಆರೋಪಿಸಿ ಇಲ್ಲಿನ ಬಿಜೆಪಿ ಗ್ರಾಮೀಣ ಮಂಡಳದ ಕಾರ್ಯಕರ್ತರು ತಾಲ್ಲೂಕಿನ ಹೆಗಡೆಕಟ್ಟಾ ಗ್ರಾಮ ಪಂಚಾಯಿತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆರ್.ಡಿ.ಹೆಗಡೆ ಜಾನ್ಮನೆ ಮಾತನಾಡಿ, ‘ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಲಿ ಕಾರ್ಮಿಕರು, ಹಿಂದುಳಿದ ವರ್ಗದವರು, ದಲಿತರು, ಬಡವರು ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನರ ಧ್ವನಿಯಾಗಿ ಬಿಜೆಪಿ ಬೀದಿಗಿಳಿದು ಹೋರಾಟ ಆರಂಭಿಸಿದೆ’ ಎಂದರು.
‘ಇಷ್ಟೊಂದು ಭ್ರಷ್ಟಾಚಾರ ರಾಜ್ಯದ ಇತಿಹಾಸದಲ್ಲಿ ನಡೆದಿರಲಿಲ್ಲ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿದೆ. ರಾಜ್ಯದಲ್ಲಿ ವಸತಿ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರದ ಕುರಿತಾಗಿ ಕಾಂಗ್ರೆಸ್ ಶಾಸಕರೇ ಇದೀಗ ಧ್ವನಿ ಎತ್ತಿದ್ದಾರೆ. ಇದೀಗ ಕಾಂಗ್ರೆಸಿನವರೇ ತಮ್ಮ ವರಿಷ್ಠರ ಬಳಿ ಭ್ರಷ್ಟಾಚಾರದ ಮಾತು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.
ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ತಲುಪಿಲ್ಲ. ಶಕ್ತಿ ಯೋಜನೆಗಳಿಂದ ಬಸ್ಳ ವ್ಯವಸ್ಥೆ ಅವಸ್ಯವಸ್ಥೆಯ ಆಗರವಾಗಿದೆ. ದಲಿತರ ಹಿಂದುಳಿದ ವರ್ಗದವರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಅದನ್ನೂ ಸರಿಯಾಗಿ ಜನರಿಗೆ ತಲುಪಿಸುತ್ತಿಲ್ಲ.ಆರ್.ಡಿ.ಹೆಗಡೆ ಜಾನ್ಮನೆ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪ್ರಭಾವತಿ ಗೌಡ ಮಾತನಾಡಿ, ‘ಈಗಿನ ಕಾಂಗ್ರೆಸ್ ಸರ್ಕಾರ ಜನರ ಕಿಸೆ ಕಳ್ಳರಾಗಿದ್ದಾರೆ. ಅಲ್ಪ ಸಂಖ್ಯಾತರನ್ನು ಓಲೈಸುವ ಕಾರಣಕ್ಕೆ ಹಿಂದು ಮುಖಂಡರನ್ನು ಜೈಲಿಗೆ ತಳ್ಳುವ ಕೆಲಸ ಪೊಲೀಸ್ ಇಲಾಖೆ ಮೂಲಕ ಮಾಡುತ್ತಿದೆ’ ಎಂದರು.
ಗ್ರಾಮ ಪಂಚಾಯಿತಿ ಪಿಡಿಒ ರಾಮಮೂರ್ತಿ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು. ಶಿವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹರಿಜನ, ಮಂಜುಗುಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ ಭಟ್, ಪ್ರಮುಖರಾದ ಪಿ.ವಿ ಹೆಗಡೆ, ಪ್ರಸನ್ನ ಹೆಗಡೆಕಟ್ಟಾ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.