ಶಿರಸಿಯ ಮಡಿವಾಳ ಸಮುದಾಯ ಭವನಕ್ಕೆ ತೆರಳುವ ಮಾರ್ಗದಲ್ಲಿ ಪೋಲಾಗುತ್ತಿರುವ ಕುಡಿಯುವ ನೀರು
ಶಿರಸಿ: ನಗರಸಭೆ ವ್ಯಾಪ್ತಿಯಲ್ಲಿ ಅಮೃತ್ 2 ಯೋಜನೆಯ ಪೈಪ್‍ಲೈನ್, ನಗರೋತ್ಥಾನದ ರಸ್ತೆ, ಚರಂಡಿ ಕಾಮಗಾರಿ ನಡೆಯುತ್ತಿದ್ದು, ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಜೀವ ಜಲ ಪೋಲಾಗುತ್ತಿದೆ. ಹೀಗಾಗಿ ನಗರ ನಿವಾಸಿಗಳ ದಾಹ ತೀರಿಸಬೇಕಿದ್ದ ನೀರು ಅನಗತ್ಯವಾಗಿ ಚರಂಡಿಗಳಿಗೆ ಹರಿಯುವಂತಾಗಿದೆ.
ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಕುಡಿಯುವ ನೀರಿನ ನಳ ಸಂಪರ್ಕವಿದ್ದು, ನಿತ್ಯ 30 ಲಕ್ಷ ಲೀಟರ್‌ಗಿಂತಲೂ ಹೆಚ್ಚಿನ ನೀರನ್ನು ನಗರಸಭೆ ಸಾರ್ವಜನಿಕರಿಗೆ ವಿತರಿಸುತ್ತಿದೆ. ಇದಕ್ಕಾಗಿಯೇ ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಮೂಲಕ ನೀರು ತರಲಾಗುತ್ತಿದೆ. ಆದರೆ ನಗರದ ಹಲವೆಡೆ ನೀರು ಪೋಲಾಗುತ್ತಿದ್ದು, ಉದ್ದೇಶಿತ ಕಾರ್ಯ ಈಡೇರದಂತಾಗಿದೆ. ಕೆಲವು ವಾರ್ಡ್‌ಗಳಲ್ಲಿ ಚರಂಡಿಗಳ ಪಕ್ಕದಲ್ಲಿಯೆ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದಲ್ಲಿ ಕುಡಿಯುವ ನೀರು ಚರಂಡಿಗಳಿಗೆ ಸೇರುತ್ತಿದೆ.
ನಗರದ ವಿವಿಧ ಭಾಗಗಳಲ್ಲಿ ರಸ್ತೆ, ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದೆ. ಹೊಸ ಪೈಪ್‍ಲೈನ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ಈ ಹಿಂದೆ ಅಳವಡಿಸಿದ್ದ ಪೈಪ್‍ಲೈನ್ ಮೂಲಕವೇ ನೀರು ನೀಡಲಾಗುತ್ತಿದೆ. ಕಾಮಗಾರಿ ವೇಳೆ ಈ ಪೈಪ್‍ಲೈನ್‍ಗೆ ಧಕ್ಕೆಯಾಗುತ್ತಿದೆ. ಹೀಗಾಗಿ ನೀರು ಪೂರೈಕೆ ಮಾಡುವ ಪೈಪ್‍ಲೈನ್‌ಗಳು ಒಡೆದು ರಸ್ತೆಗೆ ನೀರು ಹರಿಯುತ್ತಿದೆ. ನಿತ್ಯ 10–15 ಭಾಗದಲ್ಲಿ ನೀರು ಸೋರಿಕೆಯ ದೂರುಗಳು ನಗರಸಭೆಗೆ ಬರುತ್ತಿವೆ. ಆದರೂ ತಕ್ಷಣ ಅದನ್ನು ದುರಸ್ತಿಗೊಳಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗದ ಕಾರಣ ರಸ್ತೆಗೆ ನೀರು ವ್ಯರ್ಥವಾಗಿ ಹರಿದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
‘ಕಳೆದ ವರ್ಷಗಳಲ್ಲಿ ವಾರಕ್ಕೊಮ್ಮೆ ನೀರು ನೀಡಲಾಗಿತ್ತು. ಜಲಮೂಲಗಳು ಬರಿದಾಗಿತ್ತು. ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಮಾರ್ಚ್, ಏಪ್ರಿಲ್, ಮೇ ತಿಂಗಳುಗಳಲ್ಲಿ ಹನಿ ನೀರಿಗೂ ಜನ ಪರದಾಡಬೇಕಾಗುತ್ತದೆ. ಆದರೆ ಅಪಾರ ಪ್ರಮಾಣದ ಜೀವಜಲ ಪೈಪ್‌ಗಳ ಮೂಲಕ ಸೋರಿಕೆ ಆಗುತ್ತಿದ್ದರೂ, ಅದನ್ನು ದುರಸ್ತಿಪಡಿಸಬೇಕಾದ ನಗರಸಭೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಜೀವಜಲ ಸೋರಿಕೆಯನ್ನು ಹಾಗೆ ಬಿಟ್ಟಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ನಗರ ನಿವಾಸಿಗಳು ದೂರುತ್ತಾರೆ.
‘ನಗರದಲ್ಲಿ ಕುಡಿಯುವ ನೀರು ಸಂಪರ್ಕ ಜಾಲ ಇರುವ ಕಡೆಗಳಲ್ಲಿ ಪೈಪ್‍ಗಳು ಒಡೆದು ಜೀವಜಲ ಒಂದು ಕಡೆ ಸೋರಿಕೆಯಾದರೆ, ಮತ್ತೊಂದು ಕಡೆ ಜಲ ಶುದ್ಧೀಕರಣ ಘಟಕಗಳ ನಿರ್ವಹಣೆಯಿಲ್ಲದೆ ಕಲುಷಿತ ನೀರು ನೇರವಾಗಿ ಸಾರ್ವಜನಿಕರ ಮನೆಗಳಿಗೆ ಪೂರೈಕೆ ಆಗಿ ಜನರು ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ದುಸ್ಥಿತಿಯನ್ನು ನಗರಸಭೆ ಸೃಷ್ಟಿಸಿದೆ. ಒವರ್ ಹೆಡ್ ಟ್ಯಾಂಕ್‍ಗಳಿಂದ ನಿರಂತರ ನೀರು ಹೊರ ಹರಿಯುತ್ತಿದೆ. ಜಲಮೂಲಗಳು ಹೂಳಿನಿಂದ ಕೂಡಿದ್ದು, ಅವುಗಳನ್ನು ಸಮರ್ಪಕಗೊಳಿಸುವ ಕಾರ್ಯವಾಗಿಲ್ಲ. ಎಲ್ಲೆಂದರಲ್ಲಿ ಕಾಮಗಾರಿ ವೇಳೆ ಪೈಪ್‍ಲೈನ್ ಹಾಳು ಗೆಡವಿ ಹಾಗೆಯೇ ಬಿಡುತ್ತಿರುವ ವಿವಿಧ ಕಾಮಗಾರಿಗಳ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ದುರಸ್ತಿ ಕಾರ್ಯ ಮಾಡುವಂತೆ ಸೂಚಿಸುತ್ತಿಲ್ಲ’ ಎಂಬುದು ಹಲವರ ಆರೋಪವಾಗಿದೆ.
ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು ಪೈಪ್‌ಗಳು ಒಡೆದು ಜೀವಜಲ ವ್ಯರ್ಥವಾಗಿ ರಸ್ತೆಗಳಿಗೆ ಹರಿಯುತ್ತಿದ್ದರೂ ನಗರಸಭೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗಮನಹರಿಸುತ್ತಿಲ್ಲ. ಕೂಡಲೇ ನೀರಿನ ಸೋರಿಕೆ ತಡೆಯಬೇಕುರಘುರಾಮ್, ನಗರದ ನಿವಾಸಿ
ದೂರು ಬಂದ ಕಡೆ ತಕ್ಷಣ ನಗರಸಭೆ ಸಿಬ್ಬಂದಿ ಕಳುಹಿಸಿ ದುರಸ್ತಿ ಕಾರ್ಯ ಮಾಡಿಸಲಾಗುತ್ತಿದೆ. ಕಾಮಗಾರಿ ವೇಳೆ ಹಾಳಾದ ಪೈಪ್‍ಲೈನ್ ದುರಸ್ತಿ ಜವಾಬ್ದಾರಿ ಆಯಾ ಕಾಮಗಾರಿ ಗುತ್ತಿಗೆದಾರರದ್ದು ಎಂಬುದನ್ನೂ ತಿಳಿಸಲಾಗಿದೆ.ಎಚ್.ಕಾಂತರಾಜ್, ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.