ADVERTISEMENT

ಶಿರಸಿ | ಗೋಪೂಜೆಗೆ ಕೃಷಿಕರ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:05 IST
Last Updated 22 ಅಕ್ಟೋಬರ್ 2025, 7:05 IST
ದೀಪಾವಳಿ ಗೋಪೂಜೆಗೆ ಗ್ರಾಮೀಣ ಭಾಗದ ಮಹಿಳೆಯರು ಸಾಂಪ್ರದಾಯಿಕವಾಗಿ ಸಿದ್ಧಗೊಳಿಸಿರುವ ನಾರಿನ ದಾಬುಗಳನ್ನು ಖರೀದಿಸಿದರು
ದೀಪಾವಳಿ ಗೋಪೂಜೆಗೆ ಗ್ರಾಮೀಣ ಭಾಗದ ಮಹಿಳೆಯರು ಸಾಂಪ್ರದಾಯಿಕವಾಗಿ ಸಿದ್ಧಗೊಳಿಸಿರುವ ನಾರಿನ ದಾಬುಗಳನ್ನು ಖರೀದಿಸಿದರು   

ಶಿರಸಿ: ತಾಲ್ಲೂಕಿನಲ್ಲಿ ದೊಡ್ಡಹಬ್ಬವಾದ ದೀಪಾವಳಿಯ ಅಂಗವಾಗಿ ನರಕ ಚತುರ್ದಶಿಯಂದು ಬಲೀಂದ್ರನ ಪ್ರತಿಷ್ಠಾಪನೆ, ಲಕ್ಷ್ಮಿ ಪೂಜೆಯ ಸಡಗರ ಮುಗಿಸಿ ಬುಧವಾರದ ಬಲಿಪಾಡ್ಯದಂದು ಗೋ ಪೂಜೆಗೆ ಅಣಿಯಾಗಿದ್ದಾರೆ ಕೃಷಿಕರು.

ಕೃಷಿಕರ ದೀಪಾವಳಿಯಲ್ಲಿ ಗೋಪೂಜೆಗೆ ಆದ್ಯತೆ. ಕೊಟ್ಟಿಗೆಯಲ್ಲಿರುವ ಗೋವುಗಳ ಜತೆಗೆ ಆಯುಧ ಪೂಜೆ, ವಾಹನ, ಬೇಟೆ ಬೀರಪ್ಪ, ಜಲತಟದಲ್ಲಿರುವ ಎಲ್ಲ ದೇವರಿಗೆ ಹಳ್ಳಿಗರು ಪೂಜೆ ಸಲ್ಲಿಸುತ್ತಾರೆ.

ದೊಡ್ಡ ಹಬ್ಬದ ಪೂಜೆಗೆ ಅಡಿಕೆ–ವೀಳ್ಯದೆಲೆ, ಸಿಂಗಾರ, ಪಚ್ಚೆತೆನೆ, ಕೌರಿನಾರು ಸೇರಿಸಿ ಪೋಣಿಸಿದ ವಿಶೇಷ ಹಾರ ಪ್ರತಿ ಹಳ್ಳಿ ಮನೆಯಲ್ಲಿಯೂ ಸಿದ್ಧವಾಗಿದೆ. ಮುನ್ನಾದಿನ ಸಂಜೆ ಮನೆಮಂದಿಯೆಲ್ಲ ಸೇರಿ ಇಂತಹ ಹತ್ತಾರು ಹಾರ ಸಿದ್ಧಪಡಿಸಿ ಮರುದಿನ ನಡೆಯುವ ಗೋಪೂಜೆಯಲ್ಲಿ ಗೋವಿನ ಕೊರಳಿಗೆ ಕಟ್ಟುತ್ತಾರೆ. ಅದೇ ರೀತಿ ಮನೆಯಲ್ಲಿ ಬಳಸುವ ಎಲ್ಲ ಆಯುಧಗಳು, ವಾಹನಗಳಿಗೂ ಇದನ್ನು ಕಟ್ಟಿ ಪೂಜಿಸುತ್ತಾರೆ. ಇದರ ಜತೆ ಹಬ್ಬದ ವಿಶೇಷವಾಗಿ ಸಿಹಿ ಖಾದ್ಯಗಳನ್ನು ಮಹಿಳೆಯರು ಮಾಡಿ ಪೂಜೆಯ ನಂತರ ಸವಿಯುತ್ತಾರೆ. ಮಧ್ಯಾಹ್ನದ ನಂತರ ಜಾನುವಾರನ್ನು ಗ್ರಾಮದ ದೇವರ ಮುಂದೆ ಓಡಿಸುವ ದನಬೈಲು ನಡೆಯುತ್ತದೆ. 

ADVERTISEMENT

ಜಾನುವಾರುಗಳ ಸಿಂಗಾರಕ್ಕಾಗಿ ರೈತರು ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಆಲಂಕಾರಿಕ ವಸ್ತುಗಳ ಖರೀದಿ ಮಾಡಿದರು. ದಾಬು, ಕೊರಳ ಹಾರ, ಗಂಟೆ, ಗಜ್ಜೆಹಾರ, ಮೈಮುಚ್ಚುವ ರೇಷ್ಮೆ ಚಾದರ, ಬಣ್ಣಬಣ್ಣದ ಹಗ್ಗ, ಕೋಡುಗಳಿಗೆ ಕಟ್ಟಲು ಬಲೂನುಗಳು, ಚಂಡು ಹೂವುಗಳು, ಹಚ್ಚೆ ಹಾಕಲು ಶೇಡಿ, ಕೆಮ್ಮಣ್ಣನ್ನು ಖರೀದಿಸಿ ಕೊಂಡೊಯ್ದರು. ಹಾಗಾಗಿ ಮಾರುಕಟ್ಟೆಯಲ್ಲಿ ರೈತರ ವ್ಯಾಪಾರ ಜೋರಾಗಿಯೇ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.