ADVERTISEMENT

ಶಿರಸಿಯ ಅರಣ್ಯ ಕಾಲೇಜಿಗೆ ದೇಶದ ಅತ್ಯುತ್ತಮ ಅರಣ್ಯ ಸಂಶೋಧನಾ ಸಂಸ್ಥೆ ಪ್ರಶಸ್ತಿ

ಗೌರವಕ್ಕೆ ಭಾಜನವಾದ ದಕ್ಷಿಣ ಭಾರತದ ಮೊದಲ ಅರಣ್ಯ ವಿದ್ಯಾಲಯವೆಂಬ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 19:30 IST
Last Updated 16 ಆಗಸ್ಟ್ 2020, 19:30 IST
ಶಿರಸಿಯ ಅರಣ್ಯ ಮಹಾವಿದ್ಯಾಲಯ
ಶಿರಸಿಯ ಅರಣ್ಯ ಮಹಾವಿದ್ಯಾಲಯ   

ಶಿರಸಿ: ಇಲ್ಲಿನ ಅರಣ್ಯ ಮಹಾವಿದ್ಯಾಲಯ 2019– 20ನೇ ಸಾಲಿನಲ್ಲಿ ‘ದೇಶದ ಅತ್ಯುತ್ತಮ ಅರಣ್ಯ ಸಂಶೋಧನಾ ಸಂಸ್ಥೆ’ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತು (ಐ.ಸಿ.ಎಫ್‍.ಆರ್.ಇ) ಈ ಪ್ರಶಸ್ತಿ ನೀಡುತ್ತದೆ. ಇದರ ಕಚೇರಿಯು ಡೆಹ್ರಾಡೂನ್‍ನಲ್ಲಿದ್ದು, ಜುಲೈ 23ರಂದು ಪ್ರಶಸ್ತಿ ಪ್ರಕಟಿಸಿದೆ.

ದೇಶದಲ್ಲಿರುವ ಸುಮಾರು 30 ಅರಣ್ಯ ಕಾಲೇಜುಗಳು, ಅರಣ್ಯ ಸಂಶೋಧನಾ ಕೇಂದ್ರಗಳ ವಿವಿಧ ಚಟುವಟಿಕೆಗಳನ್ನು ಆಧರಿಸಿ ಈ ಗೌರವ ನೀಡಲಾಗುತ್ತದೆ. ಪ್ರಶಸ್ತಿಯು ₹ 25 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ADVERTISEMENT

ಮಾನದಂಡವೇನು?:

ದೇಶದ ವಿವಿಧ ಸಂಶೋಧನಾ ಸಂಸ್ಥೆಗಳ ಜೊತೆಗೂಡಿ ಕೈಗೊಂಡ ಸಂಶೋಧನೆಗಳು, ಕಾಲೇಜಿನ ವಿದ್ಯಾರ್ಥಿಗಳು ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯಗಳಲ್ಲಿ ಕೈಗೊಂಡ ಚಟುವಟಿಕೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಕಾಲೇಜಿನ ಸಿಬ್ಬಂದಿ ವರ್ಗದವರು ಬಾಹ್ಯ ಅನುದಾನದಿಂದ ನಡೆಸಿರುವ ಸಂಶೋಧನೆಗಳು, ಪ್ರಕಟಗೊಂಡ ಸಂಶೋಧನಾ ಲೇಖನಗಳನ್ನೂ ಮಾನದಂಡವಾಗಿ ಪರಿಗಣಿಸಲಾಗುತ್ತದೆ.

‘ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತು ಅತ್ಯುತ್ತಮ ಸಂಶೋಧನಾ ಸಂಸ್ಥೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿತ್ತು. ನಾವು ಕೂಡ ಸಂಸ್ಥೆಯ ಸಾಧನೆಗಳು, ಕೈಗೊಂಡ ಸಂಶೋಧನೆಗಳ ವಿವರಗಳನ್ನು ದಾಖಲೆ ಸಮೇತ ಅರ್ಜಿಯೊಂದಿಗೆ ಸಲ್ಲಿಸಿದ್ದೆವು. ನಮ್ಮ ಸಂಸ್ಥೆಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ’ ಎಂದು ಶಿರಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಎಚ್.ಶಿವಣ್ಣ ಪ್ರತಿಕ್ರಿಯಿಸಿದರು.

ಸಹಕಾರಿಯಾದ ಅಂಶಗಳು:

‘ಮೂರು ದಶಕಗಳಿಂದ ಪಶ್ಚಿಮಘಟ್ಟದ ಅರಣ್ಯ ಸಂಪನ್ಮೂಲಗಳ ಸಮೀಕ್ಷೆ, ನಕ್ಷೆ ತಯಾರಿ, ಸಂಶೋಧನೆ ಮತ್ತು ಉಪಯೋಗಗಳ ಕುರಿತು ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರೊಫೆಸರ್‌ಗಳು ಸಂಶೋಧನೆ ನಡೆಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಕೆಂಪು ದೇವದಾರಿ ವೃಕ್ಷದಿಂದ ಕ್ಯಾನ್ಸರ್ ನಿರೋಧಕ ಔಷಧಿ ಕಂಡು ಹಿಡಿಯಲಾಗಿತ್ತು. ಅದಕ್ಕಾಗಿ ಅಂತರರಾಷ್ಟ್ರೀಯ ಪೇಟೆಂಟ್ ಕೂಡ ಸಂಸ್ಥೆಗೆ ಸಿಕ್ಕಿತ್ತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಮಾಡಬಹುದಾದ ಬಿದಿರಿನ ಸಂಶೋಧನೆ, ದೂರಸಂವೇದಿ ಮತ್ತು ಜಿ.ಐ.ಎಸ್ ತಂತ್ರಜ್ಞಾನವನ್ನು ಉಪಯೋಗಿಸಿ ಜಿಲ್ಲೆಯ ನಕ್ಷೆ ತಯಾರು ಮಾಡಲಾಗಿದೆ. ಇದರ ಮೂಲಕ ಜಲಸಂಪನ್ಮೂಲಗಳ ಬಗ್ಗೆ ಮತ್ತು ಮಣ್ಣಿನ ಇಂಗಾಲದ ಕುರಿತು ಸಂಶೋಧನೆ ಮಾಡಿದ್ದೇವೆ. ಇಂತಹ ಅನೇಕ ಕಾರ್ಯಗಳು ಅತ್ಯುತ್ತಮ ಸಂಶೋಧನಾ ಸಂಸ್ಥೆ ಪ್ರಶಸ್ತಿ ಪಡೆಯಲು ಸಹಕಾರಿಯಾದವು’ ಎಂದು ಸಂತಸ ಹಂಚಿಕೊಂಡರು.

* ಶಿರಸಿ ಅರಣ್ಯ ಮಹಾವಿದ್ಯಾಲಯ ರೈತರು ಮತ್ತು ಪರಿಸರಕ್ಕೆ ಪೂರಕವಾಗಿ ಅನೇಕ ಸಂಶೋಧನೆ ನಡೆಸಿದೆ. ಸಂಸ್ಥೆಯ ಸಾಧನೆಗಳನ್ನು ಪುರಸ್ಕರಿಸಿ ಪ್ರಶಸ್ತಿ ನೀಡಿದ್ದು ಹೆಮ್ಮೆ ತಂದಿದೆ.

– ಡಾ.ಎಚ್.ಶಿವಣ್ಣ, ಅರಣ್ಯ ಮಹಾವಿದ್ಯಾಲಯದ ವಿದ್ಯಾಧಿಕಾರಿ.

ಅಂಕಿ ಅಂಶ

1984 -ಅರಣ್ಯ ಮಹಾವಿದ್ಯಾಲಯ ಸ್ಥಾಪನೆಯಾದ ವರ್ಷ

350 -ವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ

22 -ಸಂಸ್ಥೆಯಲ್ಲಿರುವ ಪ್ರೊಫೆಸರ್‌ಗಳು

30 -ದೇಶದಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.