ADVERTISEMENT

ಶುಂಠಿ ಧಾರಣೆ ಕುಸಿತ: ಕ್ವಿಂಟಾಲ್‍ಗೆ ಕೇವಲ ₹2 ಸಾವಿರ ದರ

ರಾಜೇಂದ್ರ ಹೆಗಡೆ
Published 27 ಜನವರಿ 2025, 23:35 IST
Last Updated 27 ಜನವರಿ 2025, 23:35 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಮಾರಾಟದ ಉದ್ದೇಶಕ್ಕೆ ಶುಂಠಿ ಕೊಯ್ಲು ನಡೆದಿರುವುದು
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಮಾರಾಟದ ಉದ್ದೇಶಕ್ಕೆ ಶುಂಠಿ ಕೊಯ್ಲು ನಡೆದಿರುವುದು   

ಶಿರಸಿ: ಅತಿವೃಷ್ಟಿ, ರೋಗಬಾಧೆ ತಾಳಿಕೊಂಡು ಬೆಳೆದ ಉತ್ತಮ ಗುಣಮಟ್ಟದ ಶುಂಠಿಗೆ ಮಾರುಕಟ್ಟೆಯಲ್ಲಿ ಸಾಧಾರಣ ಧಾರಣೆಯೂ ಸಿಗುತ್ತಿಲ್ಲ. ಇದರಿಂದ ಬೆಳೆಗಾರರು ಹತಾಶರಾಗಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ ಭಾಗದ 250 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇದರಲ್ಲಿ ಅತಿವೃಷ್ಟಿ ಮತ್ತು ಕೊಳೆ ರೋಗದ ಕಾರಣಕ್ಕೆ ಶೇ 50ರಷ್ಟು ಬೆಳೆ ಬೆಳೆಗಾರರ ಕೈತಪ್ಪಿತ್ತು. ಹೆಚ್ಚುವರಿ ಶಿಲೀಂಧ್ರನಾಶಕ, ರಸಗೊಬ್ಬರ ನೀಡಿ ಉಳಿಸಿಕೊಂಡಿದ್ದ ಬೆಳೆ ಈಗ ಕಟಾವಿನ ಹಂತದಲ್ಲಿದ್ದು, ದರ ಕುಸಿದಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ವಿಂಟಲ್ ಶುಂಠಿಗೆ ₹7 ಸಾವಿರ ದರ ಕುಸಿದಿದೆ. ಪ್ರಸಕ್ತ ವರ್ಷ ಹಸಿ ಶುಂಠಿಗೆ ಕ್ವಿಂಟಲ್‌ಗೆ ₹2 ಸಾವಿರ ಸಿಗುತ್ತಿದೆ. ಇದು ಶುಂಠಿಗೆ ಹಾಕಿದ ಗೊಬ್ಬರದ ಹಣಕ್ಕೂ ಸಮವಿಲ್ಲ’ ಎಂದು ಬೆಳೆಗಾರರು ತಿಳಿಸಿದರು.

ADVERTISEMENT

‘ನಾಟಿ ಮಾಡುವ ಶುಂಠಿಯ ಬೆಲೆ 60 ಕೆ.ಜಿ ಚೀಲಕ್ಕೆ ಸರಾಸರಿ ₹3 ಸಾವಿರ ಇದೆ. ಎಕರೆಗೆ ಕನಿಷ್ಠ 25 ಚೀಲ ಶುಂಠಿ ಬೇಕು. ಬಿತ್ತನೆ ಶುಂಠಿಗೆ ಎಕರೆಗೆ ₹75 ಸಾವಿರ ಖರ್ಚು ಮಾಡಬೇಕು. ಹೊಲಕ್ಕೆ ತುಂತುರು ನೀರಾವರಿ ಸೆಟ್ ಅಳವಡಿಸಬೇಕು. ತಿಂಗಳಿಗೆ ಒಮ್ಮೆ ಕೀಟನಾಶಕ ಸಿಂಪಡಿಸಲು ₹5 ಸಾವಿರ, ಕಳೆ ತೆಗೆಸಲು 25 ರಿಂದ 30 ಕೂಲಿ ಆಳುಗಳು ಬೇಕು. ಒಂದು ಆಳಿಗೆ ₹350 ರಂತೆ ಒಮ್ಮೆ ಕಳೆ ತೆಗೆಸಲು ₹10 ಸಾವಿರ ಖರ್ಚಾಗುತ್ತದೆ. ಬರುವ ಉತ್ಪನ್ನ ಅರ್ಧದಷ್ಟಿದೆ. ಇಂಥ ಸನ್ನಿವೇಶದಲ್ಲಿ ಇಷ್ಟು ಕಡಿಮೆ ದರ ಸಿಕ್ಕಿದರೆ ಹಾಕಿದ ಬಂಡವಾಳವೂ ಕೈಸೇರುವುದಿಲ್ಲ’ ಎಂಬುದು ಬಹುತೇಕ ಬೆಳೆಗಾರರ ಚಿಂತೆ. 

‘ಒಡಿಶಾ ಭಾಗದಲ್ಲಿ ವ್ಯಾಪಕವಾಗಿ ಶುಂಠಿ ಬೆಳೆಯಲಾಗಿದೆ. 2ನೇ ಹಾಗೂ 3ನೇ ದರ್ಜೆಯ ಶುಂಠಿ ಕ್ವಿಂಟಲ್ ಒಂದಕ್ಕೆ ₹1,800ರಿಂದ ₹2,300 ದರಕ್ಕೆ ರಾಜ್ಯ ಮತ್ತು ಉತ್ತರ ಭಾರತದ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಈ ಭಾಗದ ಗುಣಮಟ್ಟದ ಶುಂಠಿಯ ದರವನ್ನು ಇಳಿಸಿ ವ್ಯಾಪಾರಿಗಳು ಖರೀದಿಸುತ್ತಾರೆ. ಇದರಿಂದ ಬೆಳೆಗಾರರಿಗೆ ಆರ್ಥಿಕ ನಷ್ಟವಾಗುತ್ತಿದೆ’ ಎಂದು ವ್ಯಾಪಾರಿ ಬಸವರಾಜ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಈ ಹಿಂದೆ ಶುಂಠಿ ಕ್ಷೇತ್ರ ಕಡಿಮೆಯಿತ್ತು. ಎರಡು ವರ್ಷಗಳಲ್ಲಿ ದ್ವಿಗುಣವಾಗಿದ್ದು, ಉತ್ಪಾದನೆ ಹೆಚ್ಚಿರುವ ಕಾರಣಕ್ಕೂ ದರ ಇಳಿದಿರುವ ಸಾಧ್ಯತೆಯಿದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮುಂಬೈ ದೆಹಲಿ ಭಾಗದ ಮಾರುಕಟ್ಟೆಯಲ್ಲಿ ನಮ್ಮ ಭಾಗದ ಶುಂಠಿಗೆ ಬೇಡಿಕೆ ಸದಾ ಇದೆ. ಆದರೆ ಮಧ್ಯವರ್ತಿಗಳು ಒಡಿಶಾದ ಶುಂಠಿ ಮುನ್ನೆಲೆಗೆ ತಂದು ಉಳಿದ ಕಡೆಯ ಶುಂಠಿಯ ದರ ಇಳಿಸುತ್ತಿದ್ದಾರೆ
ಸಂತೋಷ ನಾಯ್ಕ ಶುಂಠಿ ಬೆಳೆಗಾರ

ಕಳೆದ ವರ್ಷದ ದರ ಬಾರದು ಭತ್ತದ ಬೆಳೆಗಾರರಿಂದ ಭೂಮಿ ಬಾಡಿಗೆ ಪಡೆದು ಶುಂಠಿ ಕೃಷಿ ಮಾಡಿದ್ದ ಹಲವು ಬೆಳೆಗಾರರು ದರ ಕುಸಿತದಿಂದ ಕಂಗೆಟ್ಟಿದ್ದಾರೆ. ಭೂಮಾಲೀಕರಿಗೆ ಇಂತಿಷ್ಟು ಹಣ ನೀಡುವ ಜತೆ ಶುಂಠಿ ಬೆಳೆಗೆ ಹಾಕಿದ ಹಣದ ಕಾಲು ಪಾಲು ಈ ಬೆಳೆಗಾರರಿಗೆ ಸಿಕ್ಕಿಲ್ಲ. ‘ದರ ಅಲ್ಪಸ್ವಲ್ಪ ಏರಿಕೆಯಾದರೂ ಕಳೆದ ವರ್ಷದಷ್ಟು ಬರಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ಮಾರುಕಟ್ಟೆ ತಜ್ಞರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.