ಶಿರಸಿ: ‘ಕನ್ನಡ ನಾಡು, ನುಡಿ ರಕ್ಷಣೆಯ ಜವಾಬ್ದಾರಿ ಕೇವಲ ಸರ್ಕಾರದ್ದಲ್ಲ. ಅದು ಪ್ರತಿಯೊಬ್ಬನ ಕರ್ತವ್ಯ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ನಗರದ ರಂಗಧಾಮದಲ್ಲಿ ಸೋಮವಾರ ಹಮ್ಮಿಕೊಂಡ ಸಮಾರಂಭದಲ್ಲಿ, ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಶೇ 100 ಸಾಧನೆ ಮಾಡಿದ ಮಕ್ಕಳನ್ನು ಪುರಸ್ಕರಿಸಿ ಅವರು ಮಾತನಾಡಿದರು. ಕನ್ನಡ, ಭಾಷೆ, ನೆಲ, ಜಲ ಸಂರಕ್ಷಣೆಗೆ ಎಲ್ಲರೂ ಕಟಿಬದ್ದರಾಗಬೇಕು ಎಂದರು.
‘47 ಪ್ರೌಢಶಾಲೆಗಳಲ್ಲಿ ಕೇವಲ 7 ಪ್ರೌಢಶಾಲೆಗಳು ಮಾತ್ರ ಶೇ 100 ಸಾಧನೆ ಮಾಡಿದೆ. 40 ಶಾಲೆಗಳ ಸ್ಥಿತಿ ಏನಿದೆ ಎಂಬುದೂ ನೋಡಬೇಕಿದೆ. ಇನ್ನೂ ಹೆಚ್ಚಿನ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ‘ಅಂಕ ತೆಗೆಯುವಲ್ಲಿ ಮಾತ್ರ ಭಾಷಾಭಿಮಾನ ಇಟ್ಟುಕೊಳ್ಳದೇ ಬದುಕಿನ ಉದ್ದಕ್ಕೂ ಇಟ್ಟುಕೊಳ್ಳಬೇಕು’ ಎಂದರು.
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ, ಶಿಕ್ಷಣಕ್ಕೆ ಆದ್ಯತೆ ಕೊಡುವ ಶಾಸಕ ಭೀಮಣ್ಣ ನಾಯ್ಕ ಅವರು ಭವಿಷ್ಯದ ಸಮಾಜಕ್ಕೆ ತುಡಿಯುತ್ತಾರೆ’ ಎಂದರು.
ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ, ಡಿಡಿಪಿಐ ಡಿ.ಆರ್.ನಾಯ್ಕ, ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ, ಸ್ಕೊಡ್‍ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಬಿಇಒ ನಾಗರಾಜ ನಾಯ್ಕ, ಪ್ರಮುಖರಾದ ಸುರೇಶ ಪಟಗಾರ, ವಾಸುದೇವ ಶಾನಭಾಗ, ವಿ.ಆರ್.ಹೆಗಡೆ, ಕೃಷ್ಣ ಪದಕಿ ಇದ್ದರು.
ಇದೇ ವೇಳೆ ದಶರೂಪಕಗಳ ದಶಾವತಾರ ಕೃತಿ ಬರೆದು ಯಕ್ಷ ಮಂಗಲ ಪ್ರಶಸ್ತಿ ಪಡೆದ ಪತ್ರಕರ್ತ ಅಶೋಕ ಹಾಸ್ಯಗಾರ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.