ಶಿರಸಿ: ‘ಕೃಷಿ ಯಂತ್ರಧಾರೆ ಯೋಜನೆಯಡಿ ರೈತರಿಗೆ ಅಗತ್ಯ ಸಮಯದಲ್ಲಿ ಯಂತ್ರಗಳು ಲಭ್ಯವಾಗುತ್ತಿಲ್ಲ. ದುಬಾರಿ ದರವಾದರೂ ಖಾಸಗಿ ಯಂತ್ರಗಳನ್ನು ಬಾಡಿಗೆಗೆ ಪಡೆದು ಅನಿವಾರ್ಯವಾಗಿ ಭತ್ತ ಕಟಾವು ಮಾಡಿಸುತ್ತಿದ್ದೇವೆ’ ಎಂದು ತಾಲ್ಲೂಕಿನ ಬನವಾಸಿ ಭಾಗದ ಹಲವು ಕೃಷಿಕರು ಬೇಸರದಿಂದ ಹೇಳುತ್ತಾರೆ.
ಬನವಾಸಿ ಹೋಬಳಿ ಸೇರಿದಂತೆ ಮುಂಡಗೋಡ, ಹಳಿಯಾಳ ಭಾಗದಲ್ಲಿ ಭತ್ತ ಕಟಾವು ಜೋರಾಗಿ ನಡೆಯುತ್ತಿದೆ. ಕೂಲಿ ಕಾರ್ಮಿಕರ ಬದಲು ಯಂತ್ರೋಪಕರಣಗಳು ಗದ್ದೆಗೆ ಇಳಿದಿವೆ. ಬಹುಪಾಲು ಕಡೆಗಳಲ್ಲಿ ಈ ಬಾರಿ ಯಂತ್ರ ಬಳಸಿ ಕಟಾವು ಮಾಡುತ್ತಿರುವುದು ಕಾಣಸಿಗುತ್ತಿದೆ. ಆದರೆ ಇವುಗಳಿಗೆ ನಿಗದಿಯಾಗಿರುವ ಬಾಡಿಗೆ ಮೊತ್ತ ಮಾತ್ರ ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
‘ಯಂತ್ರಧಾರೆ ಕೇಂದ್ರದಲ್ಲಿ ಮೊದಲೇ ಹೆಸರು ನೋಂದಾಯಿಸಿಕೊಂಡಿದ್ದರೂ ಯಂತ್ರ ದೊರೆಯಲು ಸಾಕಷ್ಟು ವಿಳಂಬವಾಗುತ್ತದೆ. ಬಹುತೇಕ ಎಲ್ಲ ರೈತರ ಗದ್ದೆಗಳಲ್ಲಿ ಏಕ ಕಾಲದಲ್ಲಿ ಭತ್ತ ಕಟಾವಿಗೆ ಬಂದಿದ್ದು, ಹೀಗಾಗಿ ಸ್ಥಳೀಯವಾಗಿ ಕಟಾವು ಯಂತ್ರಗಳ ಲಭ್ಯತೆ ಇಲ್ಲದ ಪರಿಣಾಮ ದೂರದ ತಮಿಳುನಾಡಿನಿಂದ ಯಂತ್ರವನ್ನು ತರಿಸಲಾಗಿದೆ. ಹಾರ್ವೆಸ್ಟರ್, ಟ್ರ್ಯಾಕ್ಟರ್ ಮಾದರಿಯ ಯಂತ್ರಗಳು ತಿಂಗಳುಗಟ್ಟಲೆ ಸ್ಥಳೀಯವಾಗಿ ಬೀಡುಬಿಟ್ಟು ಭತ್ತ ಕಟಾವು ಮಾಡುತ್ತವೆ. ಈ ಬಾರಿ ಯಂತ್ರ ಬಳಕೆಗೆ ಪ್ರತಿ ತಾಸಿಗೆ ಸರಾಸರಿ ₹2,500 ಸಾವಿರ, ₹3,000 ದರ ನಿಗದಿಪಡಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರದಲ್ಲಿ ₹400ರಿಂದ ₹600 ಹೆಚ್ಚಾಗಿದೆ’ ಎಂಬುದು ಬಹುತೇಕ ರೈತರ ದೂರು.
‘ಕಳೆದ ವರ್ಷ ಏಕಾಏಕಿ ಭತ್ತ ಕಟಾವು ಬಾಡಿಗೆ ದರ ಹೆಚ್ಚಳವಾಗಿತ್ತು. ಈ ಬಾರಿ ಇನ್ನಷ್ಟು ಹೆಚ್ಚು ಮಾಡಲಾಗಿದೆ. ಪ್ರತಿ ಒಂದೂವರೆ ತಾಸಿಗೆ ಒಂದು ಎಕರೆ ಕೊಯ್ಲು ಮಾಡಲಾಗುತ್ತದೆ. ಅಂದರೆ ಒಂದು ಎಕರೆ ಭತ್ತ ಕಟಾವಿಗೆ ₹3 ಸಾವಿರದಷ್ಟು ವೆಚ್ಚವಾಗುತ್ತಿದೆ. ಕೊಯ್ಲು ಮಾಡಿದ ಹುಲ್ಲು ಕಟ್ಟಲು ಪುನಃ ಕೂಲಿ ವೆಚ್ಚ ನೀಡಬೇಕಾಗುತ್ತದೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಇದು ದುಬಾರಿಯಾಗುತ್ತಿದೆ’ ಎನ್ನುತ್ತಾರೆ ಗುಡ್ನಾಪುರದ ರೈತ ಸತೀಶ ನಾಯ್ಕ.
‘ಅಕ್ಕಪಕ್ಕದ ಗ್ರಾಮಗಳ ಕಾರ್ಮಿಕರು ಉದ್ಯೋಗ ಅರಸಿ ನಗರಕ್ಕೆ, ಕೃಷಿ ಕೂಲಿ ಸಲುವಾಗಿ ದೂರದ ತೋಟದ ಸೀಮೆಗಳಿಗೆ ತೆರಳುತ್ತಿದ್ದಾರೆ. ಗದ್ದೆ ಕೊಯ್ಲು ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ ಯಂತ್ರ ಬಳಕೆ ಅನಿವಾರ್ಯ ಆಗಿದೆ’ ಎಂದು ಸಮಸ್ಯೆ ವಿವರಿಸಿದರು.
‘ಯಂತ್ರಗಳ ನಿರ್ವಹಣೆ ವೆಚ್ಚ, ಸಾಗಾಟ ವೆಚ್ಚ ಹೆಚ್ಚಿದೆ. ಜತೆಗೆ ತೈಲಬೆಲೆಯಲ್ಲೂ ಏರಿಕೆಯಾಗಿರುವ ಕಾರಣ ಬಾಡಿಗೆ ಮೊತ್ತ ಹೆಚ್ಚಿಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ತಾಲ್ಲೂಕಿನ ದಾಸನಕೊಪ್ಪ ಗ್ರಾಮಕ್ಕೆ ಯಂತ್ರ ತಂದಿರುವ ರಾಮಚಂದ್ರ.
ಹೆಚ್ಚು ಬಾಡಿಗೆ ದರ ಪಡೆಯದಂತೆ ಖಾಸಗಿ ಯಂತ್ರಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಆದರೂ ಕೆಲವರು ಹೆಚ್ಚಿನ ಬಾಡಿಗೆ ಮೊತ್ತ ಪಡೆಯುತ್ತಿದ್ದು ರೈತರು ಈ ಬಗ್ಗೆ ಜಾಗೃತರಾಗಬೇಕು.–ಎಚ್.ನಟರಾಜ, ಕೃಷಿ ಇಲಾಖೆ ಉಪನಿರ್ದೇಶಕ
ಕಟಾವು ಯಂತ್ರಗಳಿಗೆ ಬೇಕಾಬಿಟ್ಟಿ ಬಾಡಿಗೆ ವಿಧಿಸುತ್ತಿದ್ದು ಕೃಷಿ ಕಂದಾಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ರೈತರನ್ನು ಸುಲಿಗೆ ಮಾಡದಂತೆ ಎಚ್ಚರಿಸಬೇಕು.–ರಾಘವೇಂದ್ರ ನಾಯ್ಕ, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.