ADVERTISEMENT

ಶಿರಸಿ | ಪೈಪ್ ಕಳವು: ನಗರಸಭೆ ಅಧಿಕಾರಿಗಳು, ಸದಸ್ಯರು ಶಾಮೀಲು

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:32 IST
Last Updated 8 ಜುಲೈ 2025, 4:32 IST
   

ಶಿರಸಿ: ‘ನಗರಸಭೆಗೆ ಸೇರಿದ್ದ ಕಾಸ್ಟ್ ಐರನ್ ಪೈಪ್‍ಗಳ ಕಳವು ಪ್ರಕರಣದಲ್ಲಿ ನಗರಸಭೆಯ ಮೂವರು ಅಧಿಕಾರಿಗಳು ಮತ್ತು ಮೂವರು ಸದಸ್ಯರು ಭಾಗಿಯಾಗಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

‘ಪ್ರಕರಣದ ಪ್ರಮುಖ ಆರೋಪಿಯಾದ ಶಿಕಾರಿಪುರದ ಗುಜರಿ ಗುತ್ತಿಗೆದಾರ ಸೈಯ್ಯದ್ ಜಕ್ರಿಯಾನನ್ನು ಹಿಂದಿನ ತನಿಖಾಧಿಕಾರಿ ಸೀತಾರಾಮ ಪಿ. ವಿಚಾರಣೆ ನಡೆಸಿ, ಕಳವಾದ ಪೈಪುಗಳನ್ನು ಮಾರಾಟ ಮಾಡಿ ಗಳಿಸಿದ್ದ ₹7.02 ಲಕ್ಷ ವಶಪಡಿಸಿಕೊಂಡಿದ್ದಾರೆ’ ಎಂದು ಅವರು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

‘ಒಟ್ಟೂ 3 ಜೆಸಿಬಿ, ಕ್ರೇನ್ ಮತ್ತು 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೈಪುಗಳನ್ನು ಪುಡಿಮಾಡಿ ಮಾರಾಟ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಕಳುವಾದ 116 ಪೈಪ್‌ಗಳ ಈಗಿನ ಮಾರುಕಟ್ಟೆ ಮೌಲ್ಯ ₹21.18 ಲಕ್ಷ ಎಂದು ವರದಿ ಪಡೆಯಲಾಗಿದೆ’ ಎಂದು ಹೇಳಿದರು.

ADVERTISEMENT

‘ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಪೌರಾಯುಕ್ತ ಎಚ್.ಕಾಂತರಾಜ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪ್ರಶಾಂತ ವೇರ್ಣೇಕರ್, ಕಿರಿಯ ಎಂಜಿನಿಯರ್ (ಜೆಇ) ಸುಫಿಯಾನ್ ಬ್ಯಾರಿ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ ಬೋರ್ಕರ್, ಯಶವಂತ ಮರಾಠಿ ಅವರ ಸಹಕಾರ ಮತ್ತು ಅನುಮತಿಯಿಂದ ಪೈಪು ಒಯ್ದಿರುವುದಾಗಿ ತಿಳಿಸಿದ. ಆಗ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು’ ಎಂದರು.

‘ಹಾಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಮಂಜುನಾಥ ಗೌಡ ತನಿಖೆ ಮುಂದುವರೆಸಿದ್ದು, ಪರಿಚಯವಿದ್ದ ಈ ಆರು ಜನರೊಂದಿಗೆ ಜಕ್ರಿಯಾ ಪಿತೂರಿ ಮಾಡಿ ಫೆಬ್ರುವರಿ ತಿಂಗಳಿನಲ್ಲಿ ಈ ಅಪರಾಧ ಕೃತ್ಯವೆಸಗಿರುವುದು ಸಾಬೀತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.