ADVERTISEMENT

ಶಿರಸಿ | ಪೊಲೀಸ್ ಬೀಟ್ ಬಲಗೊಳಿಸಲು ಚಿಂತನೆ: ಐಜಿಪಿ ಸಿಂಗ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 14:17 IST
Last Updated 12 ಜುಲೈ 2024, 14:17 IST
ಅಮಿತ್ ಸಿಂಗ್
ಅಮಿತ್ ಸಿಂಗ್   

ಶಿರಸಿ: ಒಬ್ಬ ಸಿಬ್ಬಂದಿ ಬದಲಿಗೆ ಇಬ್ಬರು ಸಿಬ್ಬಂದಿ ನಿಯೋಜಿಸುವ ಮೂಲಕ ಪೊಲೀಸ್ ಬೀಟ್ ವ್ಯವಸ್ಥೆ ಬಲಪಡಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಹೇಳಿದರು. 

ನಗರದಲ್ಲಿ ಶುಕ್ರವಾರ ಸಿಬ್ಬಂದಿ, ಅಧಿಕಾರಿಗಳ ಸಭೆ ನಡೆಸಿ ನಂತರ ಪತ್ರಕರ್ತರ ಜತೆ ಮಾತನಾಡಿದರು.

ಹಲವು ಪ್ರಕರಣಗಳು ಇತ್ಯರ್ಥವಾಗದೇ ಹಲವು ವರ್ಷಗಳಿಂದ ಬಾಕಿಯುಳಿದಿವೆ. ಅವುಗಳ ತನಿಖೆಯನ್ನು ಸರಿಯಾಗಿ ಫಾಲೋ ಅಪ್ ಮಾಡಲು ಆಗುತ್ತಿಲ್ಲ. ಇದರಿಂದ ಇಲಾಖೆ ಮೇಲೆ ಒತ್ತಡ ಸೃಷ್ಟಿಯಾಗುವ ಜತೆ ಸಾರ್ವಜನಿಕರಿಗೂ ಸಮಸ್ಯೆ ಆಗುತ್ತಿದೆ. ಇದರ ನಿವಾರಣೆಗೆ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂದರು.

ADVERTISEMENT

ಸಿಬ್ಬಂದಿ, ಅಧಿಕಾರಿಗಳ ಸಭೆಯಲ್ಲೂ ಇವುಗಳ ಬಗ್ಗೆ ಚರ್ಚೆ ನಡೆದಿದೆ. ಈ ಹಿನ್ನೆಲೆ ಹೊಸ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಲಾಗಿದೆ. ಈವರೆಗೆ ಒಬ್ಬ ಸಿಬ್ಬಂದಿ ಒಂದು ಬೀಟ್ ನಿರ್ವಹಿಸುತ್ತಿದ್ದು, ಇನ್ನು ಇಬ್ಬರನ್ನು ಒಂದು ಬೀಟ್‌ಗೆ ನಿಯೋಜಿಸಲಾಗುವುದು. ಇದರಿಂದ ಸಾರ್ವಜನಿಕರ ಜತೆ ನಿಕಟ ಸಂಪರ್ಕ ಹೊಂದಲು, ಪ್ರಕರಣಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದರು. 

ಮಾದಕ ದ್ಯವ್ಯಗಳ ಮಾರಾಟದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ನಡೆಯುವ ವಿದ್ಯಮಾನಗಳು ಇಲಾಖೆ ನಿಗಾವಣೆಯಲ್ಲಿ ಇರುತ್ತಿದೆ. ಹೀಗಾಗಿ ಮಾದಕ ದ್ರವ್ಯ ಸೇವನೆ, ಮಾರಾಟ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ ಎಂದ ಅವರು, ಸೈಬರ್ ಕ್ರೈಂ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ‌ 10ರಷ್ಟು ಹೆಚ್ಚಳವಾಗಿದೆ. ನಗರ ಪ್ರದೇಶದಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದ್ದರೂ ಹೆಚ್ಚಿನವರು ನಿಷ್ಕಾಳಜಿಗೆ ಬಲಿಯಾಗುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಬೇಧಿಸಲು ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. 

ಶಿರಸಿಯಲ್ಲಿ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣದ ಕುರಿತು ಕ್ರಮವಹಿಸಲಾಗುವುದು. ಪ್ರಸಕ್ತ ಸಾಲಿನಿಂದ ನಾಗರಿಕ ಬಂದೂಕು ಚಾಲನಾ ತರಬೇತಿಯನ್ನು ಶಿರಸಿಯಲ್ಲಿ ಆಯೋಜಿಸಲಾಗುವುದು. ಟ್ರಾಫಿಕ್ ಪೊಲೀಸ್ ಸ್ಟೇಶನ್ ಶೀಘ್ರದಲ್ಲೇ ಸ್ಥಾಪನೆಗೆ ಸೂಚಿಸಲಾಗುವುದು. ಅನಧಿಕೃತ ನಡೆಯುತ್ತಿರುವ ಇಸ್ಪೀಟ್ ಕ್ಲಬ್ ಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಶಿರಸಿ ಡಿಎಸ್ಪಿ ಗಣೇಶ ಕೆ.ಎಲ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.