ADVERTISEMENT

ಬರಹದಲ್ಲಿ ರಾಷ್ಟ್ರ ಚಿಂತನೆ ಅಗತ್ಯ: ಹರಿಪ್ರಕಾಶ ಕೋಣೆಮನೆ

ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 13:41 IST
Last Updated 3 ಸೆಪ್ಟೆಂಬರ್ 2023, 13:41 IST
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಮ್ಮಿಕೊಂಡ ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿಯಲ್ಲಿ ಹರಿಪ್ರಕಾಶ ಕೋಣೆಮನೆ ಮಾತನಾಡಿದರು
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಮ್ಮಿಕೊಂಡ ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿಯಲ್ಲಿ ಹರಿಪ್ರಕಾಶ ಕೋಣೆಮನೆ ಮಾತನಾಡಿದರು   

ಶಿರಸಿ: ‘ಬ್ರಿಟಿಷ್ ಮನಸ್ಥಿತಿ ಇರುವವರು ಜಾತಿ, ವೈಚಾರಿಕತೆ, ಶಿಕ್ಷಣ, ಧರ್ಮದ ಹೆಸರಿನಲ್ಲಿ ಇಂದಿಗೂ ಒಡೆದಾಳುವ ಯತ್ನ ನಡೆಸಿದ್ದಾರೆ. ಸುರಾಜ್ಯದ ಕಲ್ಪನೆಯನ್ನು ಜನರಲ್ಲಿ ಬಿತ್ತುವ ಮೂಲಕ ಒಂದಾಗಿ ಸಾಗುವ ಅಗತ್ಯವಿದೆ‘ ಎಂದು ಅಖಿಲ ಸಾಹಿತ್ಯ ಪರಿಷದ್ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸ್ವರಾಜ್ಯ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 

‘ಬರೆದಿದ್ದೆಲ್ಲ ಕವಿತೆಗಳಾಗಲು ಸಾಧ್ಯವಿಲ್ಲ. ಆ ಬರವಣಿಗೆಯಲ್ಲಿ ದೇಶದ ಕುರಿತಾದ ಚಿಂತನೆ, ಮೌಲ್ಯ ಇದ್ದಾಗ ಮಾತ್ರ ಉತ್ತಮ ಕವನವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದೇಶದಾದ್ಯಂ ತನ್ನನ್ನು ತೊಡಗಿಸಿಕೊಂಡಿದೆ. ನಮ್ಮ ಸಾಹಿತ್ಯ ನಿತ್ಯ ನೂತನವಾಗಿರಬೇಕು. ಅಂತಹ ಬರಹಗಳನ್ನು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ಮಾಡಬೇಕಾದ ಸಂದರ್ಭ ಇದೆ. ನಮ್ಮ ಹಿರಿಯರು ಆ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬೇಕಾಗಿದೆ’ ಎಂದರು.

ADVERTISEMENT

ಉಪನ್ಯಾಸಕ ರಾಘವೇಂದ್ರ ರಾವ್ ಉಡುಪಿ ಮಾತನಾಡಿ, ’ಅಧ್ಯಯಶೀಲರಾಗಿ ಕಾವ್ಯಗಳಲ್ಲಿ ಹೊಸ ಶಕ್ತಿ, ಹೊಸ ಸತ್ವಗಳನ್ನು ತೋರಿಸಬೇಕಾಗಿದೆ. ಅಧ್ಯಯನ ಜತೆ ಹೊಸ ಪದಗಳ ಪ್ರತ್ಯೇಕ ಜೋಡಿಸುವುದನ್ನು ರೂಢಿಸಿಕೊಳ್ಳಬೇಕು. ಸಾಮಾನ್ಯ ಜನರಿಂದ ಸುತ್ತಮುತ್ತಲಿನ ಪರಿಸರದಲ್ಲಿರುವ ಸೂಕ್ಷ್ಮತೆಯನ್ನು ಅವಲೋಕಿಸಿ, ಕವಿತೆಗಳನ್ನು ರಚಿಸಬೇಕು. ರಚಿಸುವ ಕವಿತೆಗಳಲ್ಲಿ ಕೆಡುಕನ್ನು ದೂರಮಾಡಿ ಮಂಗಲಕರವಾದದ್ದನ್ನು ಅಪ್ಪಿಕೊಳ್ಳಬೇಕು. ಅಧ್ಯಯನವಿಲ್ಲದ ಬರಹ ವಿಫಲವಾಗುತ್ತದೆ. ನಾನು ಎಂಬುದನ್ನು ಬಿಟ್ಟು ನಾವು ಎಂಬುದನ್ನು ಸ್ವೀಕರಿಸಿದಾಗ ಸುರಾಜ್ಯ ಸಿದ್ಧಿಯಾಗುತ್ತದೆ’ ಎಂದು ಹೇಳಿದರು.

ನಂತರ ನಡೆದ ಸ್ವರಾಜ್ಯ-ಸುರಾಜ್ಯ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದ 21 ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ಪರಿಷದ್ ರಾಜ್ಯ ಕಾರ್ಯದರ್ಶಿ ರಘುನಂದನ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಿಂಧೂರಾ ಹೆಗಡೆ, ಶ್ರಾವಣಿ, ಪ್ರೇರಣಾ, ಪ್ರತೀಕ ಭಟ್ ಪ್ರಾರ್ಥಿಸಿದರು. ರಾಜ್ಯ ಕಾರ್ಯಕಾರಿ ಸದಸ್ಯ ಜಗದೀಶ ಭಂಡಾರಿ ಸ್ವಾಗತಿಸಿದರು. ಜನಮೇಜಯ ಉಮರ್ಜಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.