ADVERTISEMENT

ಮುಕ್ತ ವ್ಯಾಪಾರ ಒಪ್ಪಂದ ಪುನರ್ ಪರಿಶೀಲಿಸಿ: ಪ್ರಧಾನಿಗೆ ಪತ್ರ

ಪ್ರಧಾನಿಗೆ ಪತ್ರ ಬರೆದಿರುವ ವಿ.ಎಸ್.ಸೋಂದೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:17 IST
Last Updated 23 ಡಿಸೆಂಬರ್ 2019, 14:17 IST
ವಿ.ಎಸ್.ಸೋಂದೆ
ವಿ.ಎಸ್.ಸೋಂದೆ   

ಶಿರಸಿ: ಏಷಿಯನ್ ದೇಶಗಳೊಡನೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು ಪುನರ್ ಪರಿಶೀಲಿಸಬೇಕು. ಶ್ರೀಲಂಕಾ ಮತ್ತು ನೇಪಾಳ ದೇಶಗಳನ್ನು ಅಡಿಕೆ ಮತ್ತು ಕಾಳುಮೆಣಸು ವ್ಯಾಪಾರ ಒಪ್ಪಂದದಿಂದ ಹೊರಗಿಡಬೇಕು ಎಂದು ಶಿರಸಿ ತೋಟಗಾರಿಕಾ ಸಂಘದ ಅಧ್ಯಕ್ಷ ವಿ.ಎಸ್.ಸೋಂದೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮೋದಿ ಅವರಿಗೆ ಪತ್ರ ಬರೆದಿರುವ ಸೋಂದೆ, ‘ಇವೆರಡು ದೇಶಗಳನ್ನು ಒಪ್ಪಂದದಿಂದ ಹೊರಗಿಡುವ ಮೂಲಕ ಭಾರತದ ಅಡಿಕೆ ಮತ್ತು ಕಾಳುಮೆಣಸು ಕೃಷಿಕರು ಹಾಗೂ ಅವಲಂಬಿತರನ್ನು ಉಳಿಸಬೇಕು’ ಎಂದು ವಿನಂತಿಸಿದ್ದಾರೆ.

ಜಗತ್ತಿನ ಒಟ್ಟು ಅಡಿಕೆ ಮತ್ತು ಕಾಳುಮೆಣಸು ಉತ್ಪಾದನೆಯಲ್ಲಿ ಭಾರತದ ಪಾಲು ಶೇ 50ಕ್ಕೂ ಹೆಚ್ಚಿದೆ. ಕರ್ನಾಟಕದ 19 ಜಿಲ್ಲೆಗಳ 2.61 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 6.06 ಲಕ್ಷ ಟನ್ ಬೆಳೆ ಬೆಳೆಯಲಾಗುತ್ತದೆ. ಹೊರ ದೇಶಗಳಿಂದ ದೇಶೀಯ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಅಡಿಕೆ, ಕಾಳುಮೆಣಸು ಲಗ್ಗೆಯಿಟ್ಟರೆ, ಇಲ್ಲಿನ ಬೆಳೆಗೆ ದರ ಸಿಗದೇ ಗ್ರಾಮೀಣ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಈ ಬೆಳೆ ಅವಲಂಬಿಸಿದ 50 ಲಕ್ಷಕ್ಕೂ ಹೆಚ್ಚು ಕೃಷಿಕರು, ಸಂಬಂಧಿತ ಉದ್ಯೋಗ ಅವಲಂಬಿಸಿರುವವರ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಭಾರತದ ಬೆಳೆಗಾರರು ಕಡಿಮೆ ವೆಚ್ಚದಲ್ಲಿ ಕಾಳುಮೆಣಸು ಉತ್ಪಾದಿಸುವ ಶ್ರೀಲಂಕಾ, ವಿಯೆಟ್ನಾಂ ದೇಶಗಳ ಸ್ಪರ್ಧೆ ಎದುರಿಸಬೇಕಾಗಿದೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಇಲ್ಲಿನ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಕಾಳುಮೆಣಸಿನ ವಾರ್ಷಿಕ ಉತ್ಪಾದನೆ 12ಸಾವಿರ ಟನ್ ಇದ್ದಿದ್ದು, ಪ್ರಸ್ತುತ 30ಸಾವಿರ ಟನ್‌ಗೆ ಏರಿದೆ. ನೇಪಾಳ ಹಾಗೂ ಭಾರತ ನಡುವಿನ ವ್ಯಾಪಾರ ಒಪ್ಪಂದದ ಪ್ರಕಾರ ಭಾರತದ 16 ಬಂದರುಗಳ ಮುಖಾಂತರ ನೇಪಾಳದೊಂದಿಗೆ ಸರಕು ಸಾಗಣೆ ಮಾಡಲು ಅವಕಾಶವಿದೆ. ಈ ಮಾರ್ಗವನ್ನು ವ್ಯಾಪಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಸರಕು ಭಾರತದ ಮಾರುಕಟ್ಟೆಗೆ ನುಸುಳುತ್ತಿದೆ. ಈ ಎಲ್ಲ ದೃಷ್ಟಿಯಿಂದ ಮುಕ್ತ ವ್ಯಾಪಾರವು ಭಾರತದ ಹಿತಾಸಕ್ತಿಗೆ ನಷ್ಟ ತರುತ್ತಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.