ADVERTISEMENT

ಕಾಗೇರಿ ಗಾಡ್‍ಫಾದರ್ ಇಲ್ಲದ ರಾಜಕಾರಣಿ: ಬೊಮ್ಮಾಯಿ ಬಣ್ಣನೆ

ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 14:54 IST
Last Updated 15 ಜನವರಿ 2023, 14:54 IST
ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು
ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು   

ಶಿರಸಿ: ‘ರಾಜ್ಯ ರಾಜಕಾರಣದಲ್ಲಿ ಗಾಡ್‍ಫಾದರ್ ಇಲ್ಲದೆ ಉನ್ನತ ಹುದ್ದೆ ಅಲಂಕರಿಸಿದ ಅಪರೂಪದ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿ ವತಿಯಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿಧಾನಸಭಾಧ್ಯಕ್ಷ ಹುದ್ದೆಗೆ ಮೌಲ್ಯ ತಂದು ಕೊಟ್ಟಿದ್ದಾರೆ. ಚುನಾವಣಾ ವ್ಯವಸ್ಥೆ ಸುಧಾರಣೆಗೆ ರಾಜ್ಯ ವ್ಯಾಪಿ ನಿರಂತರ ಜಾಗೃತಿ, ಚರ್ಚೆ ಕಾರ್ಯಕ್ರಮ ರೂಪಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ’ ಎಂದರು.

ADVERTISEMENT

‘ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಶೀಘ್ರವೆ ಭೂಮಿಪೂಜೆ ನೆರವೇರಿಸುತ್ತೇನೆ’ ಎಂದು ಇದೇ ವೇಳೆ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ‘ವಿಧಾನಸಭೆ ಮುನ್ನಡೆಸುವುದು ತಂತಿಯ ಮೇಲಿನ ನಡಿಗೆಯಂತೆ. ಹುದ್ದೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ಕಾಗೇರಿ ಸಾಧನೆ’ ಎಂದರು.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ‘ವಿಧಾನಸಭೆ ವ್ಯವಸ್ಥೆಯಲ್ಲಿ ಅಧ್ಯಯನ ನಡೆಸಿ ಸುಧಾರಣೆ ತರಲು ಕೆಲಸ ಮಾಡಿದ್ದಾರೆ’ ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ‘ಪ್ರಜಾಪ್ರಭುತ್ವ ವ್ಯವಸ್ಥೆಯ ಕಳಂಕ ತೊಡೆಯಲು ಕಾರ್ಯಸೂಚಿಗಳನ್ನು ಕಾಗೇರಿ ಜಾರಿಗೆ ತರಲು ಮುಂದಾಗಿದ್ದು ಶ್ಲಾಘನೀಯ’ ಎಂದರು.

ಅಭಿನಂದನೆ ಸ್ವೀಕರಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಪ್ರತಿ ವ್ಯಕ್ತಿ ಅಭಿನಂದನೆಗೆ ಅರ್ಹನಾಗುತ್ತಾನೆ. ಶಾಸಕನಾಗಿ ನೋಡದೆ ಮನೆ ಮಗನಂತೆ ಕಂಡ ಜಿಲ್ಲೆಯ ಜನರ ಋಣಭಾರ ಸದಾ ನನ್ನ ಮೇಲಿರಲಿದೆ’ ಎಂದು ಭಾವುಕವಾಗಿ ನುಡಿದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ, ಎಸ್.ವಿ.ಸಂಕನೂರು, ಧಾಮುಲ್ ಅಧ್ಯಕ್ಷ ಶಂಕರ ಮುಗದ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್.ಹೊಸ್ಮನಿ ಇದ್ದರು.

ಸಿ.ಎಂ. ಎದುರು ಬೇಡಿಕೆ ಪಟ್ಟಿ:

‘ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಬೇಕಿದೆ. ಹಾಲಕ್ಕಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಪುನರ್ ಪ್ರಸ್ತಾವ ಸಲ್ಲಿಸಬೇಕು. ಗೌಳಿಗರು, ಕುಣಬಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಬೇಡಿಕೆ ಇಟ್ಟರು.

‘ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಮಾರ್ಗ ಸ್ಥಾಪನೆಗೆ ಸಹಕಾರ ನೀಡಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

‘ಫೆಬ್ರವರಿ ಕೊನೆಯ ವಾರದಲ್ಲಿ ಕದಂಬೋತ್ಸವ ಆಯೋಜಿಸಲಾಗುವುದು. ಮುಖ್ಯಮಂತ್ರಿ ಈ ವೇಳೆ ಪಾಲ್ಗೊಳ್ಳಬೇಕು’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.