ADVERTISEMENT

ಪರಿಶೀಲನಾ ಪಟ್ಟಿ ಸರ್ಕಾರಕ್ಕೆ ರವಾನೆ: ಎಚ್.ಕೆ.ಕೃಷ್ಣಮೂರ್ತಿ

ನಾಗರಿಕ ವಿಮಾನ ನಿಲ್ದಾಣ ಯೋಜನೆ: ಎ.ಡಿ.ಸಿ ಕೃಷ್ಣಮೂರ್ತಿ ನೇತೃತ್ವದಲ್ಲಿ ವಿಶೇಷ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:03 IST
Last Updated 23 ನವೆಂಬರ್ 2020, 16:03 IST
ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿದರು
ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿದರು   

ಅಂಕೋಲಾ: ‘ಅಲಗೇರಿ ನಾಗರಿಕ ವಿಮಾನ ನಿಲ್ದಾಣ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಪಟ್ಟಿ ತಯಾರಿಸಿ ಸರ್ಕಾರಕ್ಕೆ ರವಾನಿಸಲಾಗುವುದು’ ಎಂದು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಆಡಳಿತಾಧಿಕಾರಿಯೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದರು.

ನಾಗರಿಕ ವಿಮಾನ ನಿಲ್ದಾಣ ಯೋಜನೆಯ ಭೂಸ್ವಾಧೀನಕ್ಕೆ ಒಳಪಡುವವರ ಅಹವಾಲು ಆಲಿಕೆಯ ಗ್ರಾಮಸಭೆಯು ಬೇಲೆಕೇರಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ನಡೆಯಿತು.

ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ‘ಸ್ವಾಧೀನವಾಗುವ ಜಮೀನಿನಲ್ಲಿರುವ ಮನೆ, ಮರಗಳು ಮತ್ತು ಇತರ ಆಸ್ತಿಗಳ ಮೌಲ್ಯವನ್ನು ದಾಖಲಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಒಟ್ಟು 84 ಎಕರೆ 14 ಗುಂಟೆ 4 ಆಣೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು. ಬೇಲೆಕೇರಿ ಭಾಗದಲ್ಲಿ 19 ಎಕರೆ 4 ಗುಂಟೆ ಜಮೀನು ಬೇಕು. 14.1 ಎಕರೆ ತರಿ, 4 ಎಕರೆ ಭಾಗೈತ, 1.30 ಎಕರೆ ಖುಷ್ಕಿ ಜಮೀನು ಸೇರಿದೆ. ಬೇಲೆಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 81 ಕುಟುಂಬಗಳು ನಿರಾಶ್ರಿತರಾಗಲಿದ್ದು, 26 ಕುಟುಂಬಗಳು ಎರಡನೇ ಬಾರಿ ಮನೆ ಕಳೆದುಕೊಳ್ಳುತ್ತಿವೆ’ ಎಂದು ತಿಳಿಸಿದರು.

ADVERTISEMENT

ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ ಜಮೀನಿನ ಅಥವಾ ಮನೆಯ ಮಾಲೀಕನ ಹೆಸರು, ವಿಳಾಸ, ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ಪ್ರಮಾಣ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ ಪರಿಶೀಲನಾ ಪಟ್ಟಿ ತಯಾರಿಸಲಾಗುತ್ತದೆ.

ಇದರಲ್ಲಿ ವಸತಿ ಸೌಲಭ್ಯ, ಜಮೀನಿಗೆ ಜಮೀನು, ಅಭಿವೃದ್ಧಿಪಡಿಸಿದ ಜಮೀನಿಗೆ ಪರಿಹಾರ, ವರ್ಷಾಶನ ಅಥವಾ ಉದ್ಯೋಗದ ಆಯ್ಕೆ, ಒಂದು ವರ್ಷಕ್ಕೆ ಜೀವನಾಧಾರ ಭತ್ಯೆ, ಸಾರಿಗೆ ವೆಚ್ಚ, ದನಕರು ಕೊಠಡಿ ಅಥವಾ ಸಣ್ಣ ಅಂಗಡಿ ವೆಚ್ಚದ ಉಲ್ಲೇಖವಿರುತ್ತದೆ.

ಕುಶಲಕರ್ಮಿ ಅಥವಾ ಚಿಕ್ಕ ವ್ಯಾಪಾರಿಗಳಿಗೆ ಒಂದು ಬಾರಿ ಅನುದಾನ, ಮೀನುಗಾರಿಕೆ ಹಕ್ಕು, ಒಂದು ಬಾರಿ ಪುನರ್ವಸತಿ ಭತ್ಯೆ, ಮುದ್ರಾಂಕ, ನೋಂದಣಿ ಶುಲ್ಕ ಹಾಗೂ ಇತರ ಸೌಲಭ್ಯಗಳ ಕುರಿತು ಪರಿಹಾರ ಧನದ ಅಹವಾಲು ಸ್ವೀಕರಿಸಿ ವರದಿ ಸಲ್ಲಿಸಲಾಗುತ್ತದೆ. ಸರ್ಕಾರದ ಅನುಮೋದನೆಯಾದ ಬಳಿಕ ಮಾಲೀಕರ ಖಾತೆಗೆ ಪರಿಹಾರದ ಮೊತ್ತ ಜಮೆಯಾಗುತ್ತದೆ ಎಂದು ತಿಳಿಸಿದರು.‌

ಗ್ರಾಮಸ್ಥರ ಆಕ್ರೋಶ:

‘ವಿಶೇಷ ಗ್ರಾಮಸಭೆಯ ಕುರಿತು ಕೇವಲ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಧಿತ ಕುಟುಂಬಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ’ ಒಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥ ದೇವರಾಯ ಬೊಮ್ಮಯ್ಯ ನಾಯಕ ಮಾತನಾಡಿ, ‘ನಾವು ಎರಡನೇ ಬಾರಿಗೆ ಜಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದೆವು. ಆದರೆ, ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ’ ಎಂದು ದೂರಿದರು.

‘ದೇಶದ ಭದ್ರತೆ ಎಷ್ಟು ಮುಖ್ಯವೋ ಆಹಾರ ಭದ್ರತೆಯೂ ಅಷ್ಟೇ ಮುಖ್ಯವಾಗಿದೆ. ಇಲ್ಲಿಮ ಜಮೀನು ಫಲವತ್ತಾಗಿದ್ದು, ಬೆಳೆ ಬೆಳೆಯಲಾಗುತ್ತಿದೆ. ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಪಡೆಯಲಾಗಿದೆಯೇ’ ಎಂದು ಪ್ರಶ್ನಿಸಿದರು.

‘ದೇಶದ ಭದ್ರತೆ ಹಾಗೂ ಸಾರಿಗೆ ಪ್ರವಾಸೋದ್ಯಮದ ದೃಷ್ಟಿಯಿಂದ ಈ ಯೋಜನೆ ಬಹುಮುಖ್ಯವಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಅಂತಿಮ ತೀರ್ಮಾನವಾಗಿದೆ. ಗ್ರಾಮ ಸಭೆಗೆ ಅಧಿಕೃತ ಮಾಹಿತಿ ನೀಡದಿರುವ ಬಗ್ಗೆ ವಿಚಾರಿಸುತ್ತೇನೆ’ ಎಂದು ಎಚ್.ಕೆ.ಕೃಷ್ಣಮೂರ್ತಿ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅಜಿತ್ ಹಾಗೂ ಇತರ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.