
ಮುಂಡಗೋಡ: ‘ರಸ್ತೆ ಗುಂಡಿಗಳ ಸಮಸ್ಯೆ ರಾಜ್ಯದೆಲ್ಲೆಡೆ ವ್ಯಾಪಕವಾಗಿವೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರಕ್ಕೆ ಅಧಿಕಾರ ಮುಖ್ಯವಾಗಿದೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.
ಇಲ್ಲಿಯ ಅಂಬೇಡ್ಕರ್ ಕಾಲೊನಿಯಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಶನಿವಾರ ಮಾಲಾರ್ಪಣೆ ಮಾಡಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಧಿಕಾರ ಉಳಿಸಿಕೊಳ್ಳಲು ಔತಣ ಕೂಟ ಏರ್ಪಡಿಸುವ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆ ಪರಿಹರಿಸಲು ಒಂದು ದಿನವೂ ಕುಳಿತು ಮಾತನಾಡಿಲ್ಲ’ ಎಂದು ಹರಿಹಾಯ್ದರು.
ಜನರಿಗೆ ಗ್ಯಾರಂಟಿ ಯೋಜನೆ ನೀಡಿದರಾಯಿತು ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಭಾವಿಸಿದೆ. ಆದರೆ, ರಾಜ್ಯದ ಜನರು ಬಡತನವಿದ್ದರೂ ಸ್ವಾಭಿಮಾನ ಜೀವನ ನಡೆಸುತ್ತಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ’ ಎಂದರು.
‘ಆಡಳಿತ ನಡೆಸುವುದು ಜನರ ಸಮಸ್ಯೆಗೆ ಸ್ಪಂದಿಸುವುದಕ್ಕೆ ಎಂಬುದನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅರಿಯಬೇಕಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರೈತರ ಬೆಳೆಗೆ ಹಾನಿಯಾಗಿದೆ. ಕಬ್ಬು ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆಲ್ಲ ತಲೆಕೆಡಸಿಕೊಳ್ಳದ ಕಾಂಗ್ರೆಸ್ ಸರ್ಕಾರ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ’ ಎಂದು ಆರೋಪಿಸಿದರು.
ದಲಿತರ ಅಭಿವೃದ್ಧಿಗೆ ₹42 ಸಾವಿರ ಕೋಟಿ ಅನುದಾನ ಇರಿಸಲಾಗಿದೆ ಎಂದು ಹೇಳುವ ಕಾಂಗ್ರೆಸ್ ಪಕ್ಷ ಇದುವರೆಗೂ ಮೂರು ಕಾಸೂ ಸಹ ನೀಡಿಲ್ಲ. ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣ ಸೇರಿದಂತೆ ವಿವಿಧ ಚಟುವಟಿಕೆಗಳು ಸ್ಥಗಿತಗೊಂಡಿವೆ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಪರುಶುರಾಮ ಚಲವಾದಿ, ಚಿದಾನಂದ ಹರಿಜನ, ಪರಮೇಶ ಧಾರವಾಡ, ಸುರೇಶ ಕಲ್ಲೋಳ್ಳಿ, ನಾಗರಾಜ ಬೆಣ್ಣಿ, ವಿನಾಯಕ ರಾಯ್ಕರ, ಮೈಲಾರಿ, ಎಸ್.ಎಸ್. ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.