ADVERTISEMENT

ಮನೆಗೆ ಮರಳಿದ ವಿದ್ಯಾರ್ಥಿಗಳು; ಆಂತಕಗೊಂಡಿದ್ದ ಪಾಲಕರು ನಿರಾಳ

​ಪ್ರಜಾವಾಣಿ ವಾರ್ತೆ
Published 2 ಮೇ 2020, 16:01 IST
Last Updated 2 ಮೇ 2020, 16:01 IST
ಮಧ್ಯಪ್ರದೇಶದಿಂದ ಬಂದ ಮಕ್ಕಳಿಗೆ ಸಚಿವ ಶಿವರಾಮ ಹೆಬ್ಬಾರ್ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದರು
ಮಧ್ಯಪ್ರದೇಶದಿಂದ ಬಂದ ಮಕ್ಕಳಿಗೆ ಸಚಿವ ಶಿವರಾಮ ಹೆಬ್ಬಾರ್ ಸ್ಯಾನಿಟೈಸರ್, ಮಾಸ್ಕ್ ವಿತರಿಸಿದರು   

ಶಿರಸಿ: ಲಾಕ್‌ಡೌನ್ ಕಾರಣದಿಂದ ಮಧ್ಯಪ್ರದೇಶದ ನವೋದಯ ಶಾಲೆಯಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ 19 ವಿದ್ಯಾರ್ಥಿಗಳು ಶನಿವಾರ ಸುರಕ್ಷಿತವಾಗಿ ಮುಂಡಗೋಡ ತಾಲ್ಲೂಕಿನ ಮಳಗಿ ಜವಾಹರ ನವೋದಯ ಶಾಲೆ ತಲುಪಿದರು.

ಇಲ್ಲಿನ ನವೋದಯ ಶಾಲೆಯಿಂದ 19 ಮಕ್ಕಳು ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಧ್ಯಪ್ರದೇಶದ ಜುನಾಪಾನಿ ನವೋದಯ ಶಾಲೆಯ ಒಂಬತ್ತನೆ ತರಗತಿಗೆ ಪ್ರವೇಶ ಪಡೆದಿದ್ದರು. ಮಾರ್ಚ್ 22ರಂದು ಅವರು ಊರಿಗೆ ಹೊರಡುವಷ್ಟರಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆ ಕಾರಣಕ್ಕೆ ಅವರು ಅಲ್ಲಿನ ಹಾಸ್ಟೆಲ್‌ನಲ್ಲಿಯೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು.

ಈ ವಿಷಯವನ್ನು ಪಾಲಕರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಧ್ಯಪ್ರದೇಶ ಸರ್ಕಾರವನ್ನು ಸಂಪರ್ಕಿಸುವಂತೆ ತಿಳಿಸಿದರು. ಇದರ ಫಲವಾಗಿ, ವಿಶೇಷ ಬಸ್‌ನಲ್ಲಿ ವಿದ್ಯಾರ್ಥಿಗಳು ಊರಿಗೆ ಬಂದರು.

ADVERTISEMENT

ಸಚಿವ ಹೆಬ್ಬಾರ್ ಅವರು, ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ‘ತಾಯಂದಿರ ಕಷ್ಟವನ್ನು ಅರಿತು ಮಕ್ಕಳನ್ನು ಕರೆತರಲು ಕಾಳಜಿ ವಹಿಸಲಾಗಿದೆ. ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಎರಡು ದಿನಗಳ ಬಳಿಕ ಮನೆಗಳಿಗೆ ಕಳುಹಿಸಿಕೊಡಲಾಗುವುದು’ ಎಂದು ತಿಳಿಸಿದರು.

‘ಜುನಾಪಾನಿಯಲ್ಲಿ ಮಕ್ಕಳು ಸುರಕ್ಷಿತವಾಗಿದ್ದರು. ಅಲ್ಲಿನ ಹಾಸ್ಟೆಲ್‌ನಲ್ಲಿ ಅವರಿಗೆ ಎಲ್ಲ ವ್ಯವಸ್ಥೆಯನ್ನೂ ಒದಗಿಸಲಾಗಿತ್ತು. ಆದರೆ, ಮಕ್ಕಳ ಪಾಲಕರು ಆತಂಕಗೊಂಡಿದ್ದರಿಂದ, ವಿಶೇಷ ಮುತುವರ್ಜವಹಿಸಿ, ಕರೆತರಲಾಗಿದೆ’ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದರು. ಸಂಸದ ಅನಂತಕುಮಾರ್ ಹೆಗಡೆ ಕೂಡ ಮಕ್ಕಳನ್ನು ಕರೆತರುವಲ್ಲಿ ಶ್ರಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.