ADVERTISEMENT

ಶಾಲೆಗೆ ಬರಲು ಅಡ್ಡಿಯಾದ ಹಳ್ಳ

ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಕೋವೆಯಲ್ಲಿ ಸಮಸ್ಯೆ

ಸದಾಶಿವ ಎಂ.ಎಸ್‌.
Published 11 ಜುಲೈ 2019, 12:48 IST
Last Updated 11 ಜುಲೈ 2019, 12:48 IST
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಕೋವೆ ಹಳ್ಳದಲ್ಲಿ ನೀರು ಉಕ್ಕಿ ಹರಿಯುವುದನ್ನು ಮಕ್ಕಳು ಮತ್ತು ಪಾಲಕರು ನೋಡುತ್ತಿರುವುದು.
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಕೋವೆ ಹಳ್ಳದಲ್ಲಿ ನೀರು ಉಕ್ಕಿ ಹರಿಯುವುದನ್ನು ಮಕ್ಕಳು ಮತ್ತು ಪಾಲಕರು ನೋಡುತ್ತಿರುವುದು.   

ಕಾರವಾರ: ಆ ಹಳ್ಳದ ಒಂದು ಭಾಗದಲ್ಲಿ ಶಾಲೆ, ಮತ್ತೊಂದು ಕಡೆ ಮನೆಗಳು. ಹಳ್ಳದಲ್ಲಿ ನೀರು ಜೋರಾಗಿ ಹರಿದರೆ ಪುಟ್ಟ ಪುಟ್ಟ ಮಕ್ಕಳನ್ನು ಪಾಲಕರು ದೂರದ ದಾರಿಯಿಂದ ಶಾಲೆಗೆ ಕರೆದುಕೊಂಡು ಬರಬೇಕಾದ ಅನಿವಾರ್ಯತೆ. ಈ ಕೆಲಸಕ್ಕಾಗಿ ಇಡೀ ದಿನ ಮೀಸಲಿಡಬೇಕಾದ ಬೇಸರ.

ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ಕೋವೆಯ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳು ಬರಲು ಇಲ್ಲಿನ ಹಳ್ಳ ತಡೆಯಾಗಿದೆ. ಸುಮಾರು 50 ಮೀಟರ್ ಅಗಲದ ಈ ಹಳ್ಳದಲ್ಲಿ ಬೆಟ್ಟದ ಮೇಲಿನ ನೀರು ರಭಸವಾಗಿ ಹರಿಯುತ್ತದೆ. ಮಳೆಗಾಲಪೂರ್ತಿ ಮೈದುಂಬಿರುತ್ತದೆ. ಹೀಗಾಗಿ ಸಮೀಪದಲ್ಲೇ ಮನೆ ಹಾಗೂ ಶಾಲೆಯಿದ್ದರೂ ಮಕ್ಕಳು ಸುಮಾರು ಮೂರು ಕಿಲೋಮೀಟರ್ಸುತ್ತಿಬಳಸಿ ಬರಬೇಕಾಗಿದೆ.

‘ದೂರದ ದಾರಿಯಲ್ಲಿ ಒಂದು ಸೇತುವೆಯಿದೆ. ಅದೇ ರೀತಿ ಶಾಲೆಯ ಸಮೀಪದಲ್ಲೇ ಒಂದು ಕಾಲುಸಂಕ ನಿರ್ಮಿಸಿದರೆ ಮಕ್ಕಳಿಗೆ ತುಂಬ ಅನುಕೂಲವಾಗುತ್ತದೆ. ಗ್ರಾಮದಲ್ಲಿ ಇರುವವರೆಲ್ಲ ಬಡವರು. ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಮತ್ತು ಪುನಃ ಮನೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಮಳೆ ಬೀಳುವಾಗ ಬೇಸಾಯ ಮಾಡಬೇಕು. ಆದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೇ ಇಡೀ ದಿನ ವ್ಯರ್ಥವಾಗುತ್ತಿದೆ’ ಎಂದು ಪಾಲಕ ಕೃಷ್ಣಾನಂದ ನಾಯ್ಕ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈ ದಾರಿಯಲ್ಲಿ ಸುಮಾರು 10 ಮನೆಗಳಿವೆ. ಅಲ್ಲಿನ ಮಕ್ಕಳೆಲ್ಲರೂ ಇದೇ ಶಾಲೆಗೆ ಬರುತ್ತಾರೆ. ಅವರಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆಮೂಲ ಸೌಕರ್ಯ ಒದಗಿಸಬೇಕಾದುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಜವಾಬ್ದಾರಿಯಲ್ಲವೇ? ದಯವಿಟ್ಟು ಈ ಬಗ್ಗೆ ಗಮನ ಹರಿಸಬೇಕು’ ಎಂದು ಅವರು ಮನವಿ ಮಾಡಿದರು.

‘ಜಮೀನು ಸಮಸ್ಯೆಯಿಲ್ಲ’:‘ಕಾಲುಸಂಕ ನಿರ್ಮಾಣ ಮಾಡಲು ಜಾಗ ಬಿಟ್ಟುಕೊಡಲು ನಾನು ಸಿದ್ಧನಿದ್ದೇನೆ. ಮತ್ತೊಂದು ಬದಿಯಲ್ಲಿ ಇರುವ ಜಮೀನು ಮಾಲೀಕರನ್ನೂ ಮನ ಒಲಿಸಬಹುದು. ಜಾಗದ ಕೊರತೆಯ ಸಮಸ್ಯೆಯೇ ಇಲ್ಲ. ಹೆಚ್ಚು ವೆಚ್ಚದಾಯಕ ಕಾಮಗಾರಿಯೂ ಬೇಕಾಗಿಲ್ಲ. ಆದ್ದರಿಂದ‌ತಾಲ್ಲೂಕು ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು’ ಎಂಬುದು ಕೃಷ್ಣಾನಂದ ನಾಯ್ಕ ಅವರ ಒತ್ತಾಯವಾಗಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೋಭಾ ಗೌಡ ಮಾತನಾಡಿ, ‘1977ರಲ್ಲಿ ಸ್ಥಾಪನೆಯಾದ ಈ ಶಾಲೆ ಸುಂದರವಾದ ಪರಿಸರದಲ್ಲಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರ್ಷ 45 ವಿದ್ಯಾರ್ಥಿಗಳಿದ್ದಾರೆ.ಹಳ್ಳದ ಮತ್ತೊಂದು ಬದಿಯಲ್ಲಿ ಕೃಷಿಕರೇ ಅಧಿಕವಿದ್ದಾರೆ. ಇಲ್ಲಿ ಕಾಲುಸಂಕ ನಿರ್ಮಾಣವಾದರೆ ಊರಿನ ಜನರಿಗೂ ಅನುಕೂಲವಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.