ADVERTISEMENT

ಕಾರವಾರ| ಬಜೆಟ್‌ನಲ್ಲಿ ಸೂಪರ್ ಷ್ಪೆಷಾಲಿಟಿ ಆಸ್ಪತ್ರೆ ಘೋಷಣೆ: ಮಂಕಾಳ ವೈದ್ಯ ಭರವಸೆ

ರಾಜ್ಯೋತ್ಸವ ಆಚರಣೆ:ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 2:12 IST
Last Updated 2 ನವೆಂಬರ್ 2025, 2:12 IST
ಕಾರವಾರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಪಥಸಂಚಲನ ನಡೆಸುವ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಕಾರವಾರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಪಥಸಂಚಲನ ನಡೆಸುವ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.   

ಕಾರವಾರ: ‘ಮುಂಬರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಕ್ರಿಮ್ಸ್‌ನಲ್ಲಿ ಸೌಲಭ್ಯ ಮೇಲ್ದರ್ಜೆಗೇರಿಸಿ ಸೂಪರ್ ಸ್ಪೆಷಾಲಿಟಿ ಸೌಲಭ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆ ಘೋಷಿಸುವ ವಿಶ್ವಾಸವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕ್ರಿಮ್ಸ್‌ನಲ್ಲಿ 450 ಹಾಸಿಗೆಯ ಹೊಸ ಕಟ್ಟಡ ಆರಂಭವಾಗಿದೆ. ಅಲ್ಲಿಯೇ ಕ್ಯಾನ್ಸರ್ ಚಿಕಿತ್ಸಾ ಘಟಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅನುದಾನ ಒದಗಿಸಲಾಗುತ್ತಿದೆ’ ಎಂದರು.

ADVERTISEMENT

‘ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬಾಳು ಬೆಳಗುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ಜಿಲ್ಲೆಯ 3.36 ಲಕ್ಷ ಮಹಿಳೆಯರಿಗೆ 1,300 ಕೋಟಿ ಮೊತ್ತ ನೀಡಲಾಗಿದೆ. ಜಿಲ್ಲೆಯಲ್ಲಿ ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ₹2,500 ಕೋಟಿ ಮೊತ್ತದಷ್ಟು ಸೌಲಭ್ಯ ಜನಸಾಮಾನ್ಯರಿಗೆ ಸಿಕ್ಕಿದೆ. ಭಟ್ಕಳದಲ್ಲಿ ಕಾರ್ಮಿಕರ ಮಕ್ಕಳಿಗೆ ₹55 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು’ ಎಂದರು.

16 ತಂಡಗಳು ಪಥಸಂಚಲನ ನಡೆಸಿದವು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಲಕ್ಷ್ಮಣ ಪಟಗಾರ, ರೋಹನ ದೊಡ್ಮನಿ, ಪ್ರಿನ್ಸಿಟಾ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ್, ಉಪಾಧ್ಯಕ್ಷೆ ಪ್ರೀತಿ ಜೋಶಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಇದ್ದರು.

ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಪೊಲೀಸ್ ಪರೇಡ್ ಮೈದಾನದವರೆಗೆ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಕೃಷಿ, ಮೀನುಗಾರಿಕೆ, ಅರಣ್ಯ ಇಲಾಖೆ, ಜಲಸಾರಿಗೆ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ನಗರಸಭೆಯ ಸ್ತಬ್ಧ ಚಿತ್ರಗಳು ಇದ್ದವು. ಸುಗ್ಗಿ ಕುಣಿತ ತಂಡ ಮೆರಗು ಹೆಚ್ಚಿಸಿತ್ತು.

ಕಾರವಾರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶಿಸಿದರು.

‘ಕನ್ನಡ ಬಳಕೆ ಪರಿಪಾಠ ವಿಸ್ತರಿಸಲಿ’

ಶಿರಸಿ: ‘ಕನ್ನಡ ಭಾಷೆ ಆಳವಾದ ಇತಿಹಾಸ ಹೊಂದಿದೆ. ಇಂಥ ಸಮೃದ್ಧ ಭಾಷೆಯ ಬಳಕೆ ಪರಿಪಾಠ ಪ್ರತಿ ಕ್ಷೇತ್ರದಲ್ಲಿ ಬೆಳೆಯುವ ಅಗತ್ಯವಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ನಗರದ ಮಾರಿಕಾಂಬಾ ಪ್ರೌಢಶಾಲೆ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಸರ್ಕಾರಿ ಶಾಲೆಗಳಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ನೀಡಲಾಗಿದೆ. ಖಾಸಗಿ ಶಾಲೆಗಳು ಹೆಚ್ಚಾಗಿ ಇಂಗ್ಲಿಷ್ ಮಾಧ್ಯಮದ ತವರಾಗುತ್ತಿವೆ. ಇದು ಅಪಾಯವಲ್ಲದಿದ್ದರೂ ಕನ್ನಡದ ಅಗ್ರತೆಗೆ ತೊಡಕಾಗುತ್ತದೆ. ಸರ್ಕಾರ ಸಾರ್ವಜನಿಕರು ಕನ್ನಡಕ್ಕೆ ಇನ್ನಷ್ಟು ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು. ರಾಜ್ಯೋತ್ಸವ ತಾಲ್ಲೂಕು ಮಟ್ಟದ ಪ್ರಶಸ್ತಿಯನ್ನು ಅನುರಾಧಾ ಹೆಗಡೆ ಜಿ.ಎಂ.ಬೊಮ್ನಳ್ಳಿ ಗಣಪತಿ ಭಟ್ ಕರ್ಜಗಿ ಶಿರಸಿ ರತ್ನಾಕರ ಮಧುಕೇಶ್ವರ ನಾಯ್ಕ ಅವರಿಗೆ ನೀಡಲಾಯಿತು. ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಡಿಎಸ್‌ಪಿ ಗೀತಾ ಪಾಟೀಲ ಶಿರಸಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಡಿ.ಆರ್.ನಾಯ್ಕ ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಉಗ್ರಾಣಕರ ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ ಗೀತಾ ಶೆಟ್ಟಿ ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಬಿಇಒ ನಾಗರಾಜ ನಾಯ್ಕ ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಇತರರಿದ್ದರು. ತಹಶೀಲ್ದಾರ ಪಟ್ಟರಾಜ ಗೌಡ ಸ್ವಾಗತಿಸಿದರು. ಶ್ರೀಧರ ಹೆಗಡೆ ನಿರೂಪಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹಲವು ರೂಪಕಗಳು ಮೆರವಣಿಯುದ್ದಕ್ಕೂ ಸಾಗಿದವು.