ADVERTISEMENT

ಉತ್ತರ ಕನ್ನಡ | 2 ದಿನದಲ್ಲಿ 990 ಮನೆಗಳ ಸಮೀಕ್ಷೆ

ಯುಎಚ್‌ಐಡಿ ಸಂಖ್ಯೆಯೇ ಅದಲು ಬದಲು:ಸಮೀಕ್ಷೆಗಿಳಿಯದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:14 IST
Last Updated 24 ಸೆಪ್ಟೆಂಬರ್ 2025, 4:14 IST
ಹಿಂದುಳಿದ ವರ್ಗಗಳ ಕಲ್ಯಾಣ ಇಲಅಕೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ, ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ಅವರು ಕಾರವಾರದ ಕಾಜುಬಾಗದಲ್ಲಿ ಸಮೀಕ್ಷೆದಾರರೊಂದಿಗೆ ತೆರಳಿ ಸಮೀಕ್ಷೆ ಪ್ರಕ್ರಿಯೆ ಪರಿಶೀಲಿಸಿದರು
ಹಿಂದುಳಿದ ವರ್ಗಗಳ ಕಲ್ಯಾಣ ಇಲಅಕೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ, ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ ಅವರು ಕಾರವಾರದ ಕಾಜುಬಾಗದಲ್ಲಿ ಸಮೀಕ್ಷೆದಾರರೊಂದಿಗೆ ತೆರಳಿ ಸಮೀಕ್ಷೆ ಪ್ರಕ್ರಿಯೆ ಪರಿಶೀಲಿಸಿದರು   

ಕಾರವಾರ: ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎರಡನೇ ದಿನವೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ತಾಂತ್ರಿಕ ಸಮಸ್ಯೆ, ಗೊಂದಲದ ಕಾರಣ ನೀಡಿ ಅರ್ಧದಷ್ಟು ಸಮೀಕ್ಷೆದಾರರು ಮಂಗಳವಾರ ಸಮೀಕ್ಷೆಯನ್ನೇ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆ ಆರಂಭಗೊಂಡು ಎರಡು ದಿನ ಕಳೆದಿದ್ದು, 4.31 ಲಕ್ಷ ಮನೆಗಳ ಪೈಕಿ ಕೇವಲ 990 ಮನೆಗಳ ಸಮೀಕ್ಷೆಯಷ್ಟೇ ಪೂರ್ಣಗೊಂಡಿವೆ. ಮೊದಲ ದಿನ 156 ಮನೆಗಳ ಸಮೀಕ್ಷೆ ನಡೆದಿತ್ತು. ಎರಡನೇ ದಿನ 834 ಮನೆಗಳ ಸಮೀಕ್ಷೆ ನಡೆಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಸಮೀಕ್ಷೆಗೆ ನಿಯೋಜನೆಯಾದ 3,923 ಸಮೀಕ್ಷೆದಾರರ ಪೈಕಿ ಮಂಗಳವಾರ 1,522 ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ತಂತ್ರಾಂಶದ ಮೂಲಕ ತಿಳಿದುಬಂತು’ ಎಂದೂ ಹೇಳಿದರು.

ADVERTISEMENT

‘ಸಮೀಕ್ಷೆದಾರರ ಮೊಬೈಲ್ ಸಂಖ್ಯೆ ಜೋಡಣೆಯಾದ ಆ್ಯಪ್‌ನಲ್ಲಿ ನಮೂದಾದ ಯುಎಚ್‌ಐಡಿ ಸಂಖ್ಯೆಗಳಿಗೂ, ಅವರಿಗೆ ಗುರುತಿಸಿದ ಪ್ರದೇಶದಲ್ಲಿನ ಮನೆಗಳ ಸಂಖ್ಯೆಗಳಿಗೂ ವ್ಯತ್ಯಾಸಗಳಿವೆ. ಅಲ್ಲದೇ, ನೆಟ್‌ವರ್ಕ್ ಸಮಸ್ಯೆಯಿಂದ ಆ್ಯಪ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. 60 ಪ್ರಶ್ನೆಗಳಿಗೆ ಉತ್ತರ ಪಡೆದು ಭರ್ತಿ ಮಾಡಲು ವಿಳಂಬ ಆಗುತ್ತಿದೆ. ದಿನವೊಂದಕ್ಕೆ ಕನಿಷ್ಠ 5 ಮನೆಯ ಸಮೀಕ್ಷೆ ಪೂರ್ಣಗೊಳಿಸಲೂ ಆಗುತ್ತಿಲ್ಲ’ ಎಂದು ಸಮೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕರು ದೂರುತ್ತಿದ್ದಾರೆ.

‘ಸಮೀಕ್ಷೆಯ ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸ್ವಲ್ಪ ವಿಳಂಬ ಆಗಿರಬಹುದು. ಆದರೆ, ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯಕ್ಕೆ ಜನರು ಸ್ಪಂದಿಸುತ್ತಿದ್ದಾರೆ. ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಣ್ಣಪುಟ್ಟ ಗೊಂದಲಗಳಿದ್ದರೆ ನಿವಾರಿಸಲಾಗುತ್ತಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ ಪ್ರತಿಕ್ರಿಯಿಸಿದರು.

ಸಮೀಕ್ಷೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಮುಂಡಗೋಡ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ತಹಶೀಲ್ದಾರ್‌ ಶಂಕರ ಗೌಡಿ ಅವರಿಗೆ ಮನವಿ ನೀಡಿದರು

ನೆಟ್‌ವರ್ಕ್‌ ಸಮಸ್ಯೆ: ಕಾಯಬೇಕಾದ ಗಣತಿದಾರರು

ಮುಂಡಗೋಡ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕರು ನೆಟ್‌ವರ್ಕ್‌ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕುಟುಂಬದ ಸದಸ್ಯರು ಸಮೀಕ್ಷೆದಾರರ ಜೊತೆ ಮೂರು ಗಂಟೆಗಳ ಕಾಲ ಮನೆಯ ಚಾವಣಿಯಲ್ಲಿ ಸಹನೆ ಕಳೆದುಕೊಂಡು ಮಾಹಿತಿ ಅಪಲೋಡ್‌ ಆಗುವರೆಗೆ ಕಾಯಬೇಕಾಗಿದೆ. ‘ವಿದ್ಯುತ್‌ ಪರಿವರ್ತಕದ ಮಾರ್ಗದಲ್ಲಿ ಬರುವ ಮನೆಗಳು ಒಂದೂರಿನಿಂದ ಮತ್ತೊಂದು ಊರಿಗೆ ಹೋಗಿವೆ. ಒಬ್ಬೊಬ್ಬ ಶಿಕ್ಷಕರು ನಾಲ್ಕೈದು ಊರುಗಳಲ್ಲಿ ಸಂಚರಿಸಿ ಮನೆ ಗಣತಿ ಮಾಡಬೇಕಾಗಿದೆ. ಮಹಿಳಾ ಸಮೀಕ್ಷೆದಾರರು ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು ಸಾರಿಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಂಗಳವಾರ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಬಹುತೇಕರು ಒಂದು ಅಥವಾ ಎರಡು ಮನೆಗಳ ಮಾಹಿತಿಯನ್ನು ಮಾತ್ರ ಅಪಲೋಡ್‌ ಮಾಡಲು ಸಾಧ್ಯವಾಗಿದೆ’ ಎಂದು ಶಿಕ್ಷಕಿಯೊಬ್ಬರು ದೂರಿದರು. ಸಮೀಕ್ಷೆಯಲ್ಲಿನ ಗೊಂದಲ ನಿವಾರಿಸಬೇಕು. ಸಮೀಕ್ಷೆಯ ಪ್ರದೇಶ ನಿಖರವಾಗಿ ನಿಗದಿಯಾಗಿಲ್ಲ. ನಿಗದಿತ ಪ್ರದೇಶದ ನಕ್ಷೆ ಲಭ್ಯ ಇಲ್ಲ. ಸಮೀಕ್ಷೆದಾರರ ಕುಟುಂಬಗಳ ಪಟ್ಟಿ ನಕ್ಷೆಯ ಪ್ರತಿ ನೀಡಬೇಕು. ಎರಡನೇ ಹಂತದ ಸಮೀಕ್ಷೆಯ ಪಟ್ಟಿಯಲ್ಲಿ ಇನ್ನೂ ಕೆಲವು ವಯಸ್ಸಾದ ಅನಾರೋಗ್ಯದಿಂದ ಬಳಲುತ್ತಿರುವ ತಂತ್ರಜ್ಞಾನದ ಕೊರತೆ ಇರುವ ಶಿಕ್ಷಕರಿದ್ದಾರೆ. ಅವರನ್ನು ಸಮೀಕ್ಷೆಯ ಕಾರ್ಯದಿಂದ ವಿನಾಯಿತಿ ನೀಡಿ ಬದಲಿ ಶಿಕ್ಷಕರನ್ನು ನೇಮಕ ಮಾಡಿ ಆದೇಶಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದವರು ತಹಶೀಲ್ದಾರ್‌ ಶಂಕರ ಗೌಡಿ ಅವರಿಗೆ ಮನವಿ ನೀಡಿದರು. ‘ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಸಲು 215ಗಣತಿದಾರರು 20 ಮೇಲ್ವಿಚಾರಕರು ಸೇರಿದಂತೆ ಒಟ್ಟು 235 ಶಿಕ್ಷಕರನ್ನು ನಿಯೋಜಿಸಲಾಗಿದೆ. 70 ಶಿಕ್ಷಕರು ಅನಾರೋಗ್ಯದ ಸಮಸ್ಯೆಯಿಂದ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ಪಡೆದುಕೊಂಡಿದ್ದಾರೆ’ ಎಂದು ಬಿಇಒ ಸುಮಾ ಜಿ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.