ADVERTISEMENT

ಭಟ್ಕಳ: ಸ್ವಾಮೀಜಿ ಪುರಪ್ರವೇಶಕ್ಕೆ ಅದ್ಧೂರಿ ಸ್ವಾಗತ

ಹಳೆಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 15:40 IST
Last Updated 13 ಏಪ್ರಿಲ್ 2022, 15:40 IST
ಭಟ್ಕಳಕ್ಕೆ ಬುಧವಾರ ಭೇಟಿ ನೀಡಿದ ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು
ಭಟ್ಕಳಕ್ಕೆ ಬುಧವಾರ ಭೇಟಿ ನೀಡಿದ ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು   

ಭಟ್ಕಳ: ತಾಲ್ಲೂಕಿನ ಶಾರದಹೊಳೆ ಹಳೆಕೋಟೆಯ ಶ್ರೀಕ್ಷೇತ್ರ, ಹನುಮಂತ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಬುಧವಾರ ಆರಂಭವಾಯಿತು. ಮೊದಲ ದಿನದ ಕಾರ್ಯಕ್ರಮದಲ್ಲಿ ನಾಮಧಾರಿ ಕುಲಗುರು,ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಅದ್ಧೂರಿ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆದುಕೊಂಡು ಬರಲಾಯಿತು.

ಗೋರ್ಟೆ ಕ್ರಾಸ್‌ ಬಳಿ ಬಂದ ಸ್ವಾಮೀಜಿ ಅವರಿಗೆ ಸ್ಥಳದಲ್ಲಿ ಪಾದ ಪೂಜೆ ನಡೆಸಿದ ದೇಗುಲ ಆಡಳಿತ ಸಮಿತಿ ಸದಸ್ಯರು, ತೆರೆದ ವಾಹನದಲ್ಲಿ ವೆಂಕಟಾಪುರಕ್ಕೆ ಬರಮಾಡಿಕೊಂಡರು. ಬೈಕ್ ರ‍್ಯಾಲಿಯೂ ಆಕರ್ಷಿಸಿತು.

ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಶಿರಾಲಿಯಿಂದ ಮಾವಿನಕಟ್ಟೆ ತನಕ ತೆರಳಿದರು. ಅಲ್ಲಿಂದ ಪುನಃ ತಿರುಗಿ ಬಂದು ದೇಗುಲಕ್ಕೆ ಸ್ವಾಗತಿಸಲಾಯಿತು. ಚೆಂಡೆ ಕುಣಿತ, ಗೊಂಬೆ ವೇಷಧಾರಿಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಸಾವಿರಾರು ಮಂದಿ ಬಿಳಿ ವಸ್ತ್ರಧಾರಿಗಳಾಗಿ ಬೈಕ್‌ನಲ್ಲಿ ಸವಾರಿ ಮಾಡುತ್ತ ‘ಜೈ ಶ್ರೀರಾಮ್’ ಘೋಷಣೆ ಕೂಗಿದರು.

ADVERTISEMENT

ಏ.19ರ ತನಕ ನಡೆಯುವ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಡಳಿತ ಸಮಿತಿ ಅಚ್ಚುಕಟ್ಟಾದ ಸಿದ್ಧತೆ ಮಾಡಿಕೊಂಡಿದೆ. 15ರಿಂದ 20 ಸಾವಿರ ಜನರು ಪ್ರತಿ ದಿನ ದೇಗುಲಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ನಿತ್ಯವೂ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿವೆ.

ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ರಾಯ ನಾಯ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಆಸರಕೇರಿ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ ಸೇರಿದಂತೆ ವಿವಿಧ ಮುಖಂಡರು ಮೆರವಣಿಗೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.