ADVERTISEMENT

ಕೃಷಿ ಚಿಂತನೆ ಪುನರ್ ವಿಮರ್ಶೆಯಾಗಲಿ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಸ್ವರ್ಣವಲ್ಲಿಯಲ್ಲಿ ಎರಡು ದಿನಗಳ ಕೃಷಿ ಜಯಂತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 12:50 IST
Last Updated 16 ಮೇ 2019, 12:50 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಕೃಷಿ ಜಯಂತಿಯನ್ನು ಕೊಟ್ಟೂರೇಶ್ವರ ಮಠದ ಸಂಗನಬಸವ ಸ್ವಾಮೀಜಿ ಉದ್ಘಾಟಿಸಿದರು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಕೃಷಿ ಜಯಂತಿಯನ್ನು ಕೊಟ್ಟೂರೇಶ್ವರ ಮಠದ ಸಂಗನಬಸವ ಸ್ವಾಮೀಜಿ ಉದ್ಘಾಟಿಸಿದರು   

ಶಿರಸಿ: ಕೃಷಿ ಚಿಂತನೆ ಪುನರ್ ವಿಮರ್ಶೆಗೊಳಪಡಬೇಕು. ಹಳಬರು–ಹೊಸಬರ ಸಮ್ಮಿಲನದಲ್ಲಿ ಒಳ್ಳೆಯ ಕೃಷಿ ಪದ್ಧತಿ ಜಾರಿಗೆ ಬರಬೇಕು ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಗುರುವಾರದಿಂದ ಎರಡು ದಿನ ಆಯೋಜಿಸಿರುವ ಕೃಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನರ ಆದ್ಯತೆಯ ಕ್ಷೇತ್ರ ಬದಲಾಗಿದೆ. ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಜನಸಂಖ್ಯೆ, ಕೈಗಾರಿಕೆ ಹೆಚ್ಚುತ್ತಿರುವಂತೆ, ಕೃಷಿ ಕ್ಷೇತ್ರದ ಬೆಳವಣಿಗೆ, ಆಹಾರ ಉತ್ಪಾದನೆ ಹೆಚ್ಚಬೇಕು. ಆಗ ಮಾತ್ರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸೋದೆ ಅರಸರು ಕೃಷಿಗೆ ಮಹತ್ವ ನೀಡಿದ್ದರು. ಇಂದಿಗೂ ಎಲ್ಲ ಮತದವರು ಸಮನ್ವಯದಿಂದ ನೆಲೆಸಿರುವ ಈ ನೆಲದಲ್ಲಿ ಕೃಷಿ ಜಯಂತಿ ನಡೆಸುತ್ತಿರುವುದು ಯುಕ್ತವಾಗಿದೆ ಎಂದರು.

ADVERTISEMENT

ಹೊಸಪೇಟೆ ಕೊಟ್ಟೂರೇಶ್ವರ ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಈ ದೇಶದ ಬೆನ್ನೆಲುಬಾಗಿರುವ ಕೃಷಿಗೆ ಹೆಚ್ಚು ಮನ್ನಣೆ ಸಿಗಬೇಕು. ಕೃಷಿ ಆದಾಯ ಹೆಚ್ಚಿದರೆ ಮಾತ್ರ, ದೇಶ ಸಮೃದ್ಧವಾಗಿರುತ್ತದೆ. ಕೃಷಿ ಮಾಡುವ ಧಾವಂತದಲ್ಲಿ ಭೂಮಿ, ಗಾಳಿ, ನೀರು ಕಲುಷಿತವಾಗದಂತೆ ಎಚ್ಚರವಹಿಸಬೇಕು. ಸಾವಯವ ಕೃಷಿಗೆ ಮಹತ್ವ ನೀಡಬೇಕು ಎಂದು ಕರೆ ನೀಡಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ.ನಾಯಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಜೀವ ಪ್ರಪಂಚ ಇರುವವರೆಗೂ ಆಹಾರ, ಕೃಷಿ ಸಂಸ್ಕೃತಿ ಇರುತ್ತದೆ. ಸ್ವಾತಂತ್ರ್ಯಾನಂತರ ಆಹಾರ ಉತ್ಪಾದನೆ ಪ್ರಮಾಣ ಐದು ಪಟ್ಟು, ಹಾಲು ಉತ್ಪಾದನೆ ಪ್ರಮಾಣ ಒಂಬತ್ತು ಪಟ್ಟು ಹೆಚ್ಚಾಗಿದೆ. ಸಾವಿರಾರು ವರ್ಷ ಇತಿಹಾಸವಿರುವ ಕೃಷಿ ಕ್ಷೇತ್ರ ಎಂದಿಗೂ ಶಾಶ್ವತವಾಗಿರುತ್ತದೆ ಎಂದರು.

ಪ್ರದರ್ಶನ ಮಳಿಗೆಗಳನ್ನು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯಗಳ ಕುಲಪತಿ ಡಾ. ಕೆ.ಎಂ.ಇಂದಿರೇಶ ಉದ್ಘಾಟಿಸಿದರು. ರಾಜ್ಯದಲ್ಲಿ 19.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 154.84 ಲಕ್ಷ ಟನ್ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆಯಾಗುತ್ತಲೇ ಇದೆ. ಯಾಂತ್ರೀಕೃತ ಕೃಷಿ ಮೂಲಕ ಹೆಚ್ಚು ಲಾಭಗಳಿಸಬಹುದು ಎಂದರು.

‘ಸ್ವರ್ಣವಲ್ಲಿ ಪ್ರಭಾ’ ಕೃಷಿ ವಿಶೇಷಾಂಕವನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳು ಕೃಷಿ ಮಾದರಿ ಪ್ರದರ್ಶಿಸಿದರು. ಕೃಷಿ ಆಧಾರಿತ ಉತ್ಪನ್ನಗಳ ಪ್ರದರ್ಶನ, ಕೃಷಿ ಸಂಬಂಧಿತ ಇಲಾಖೆಗಳ ಯೋಜನೆ ಕುರಿತು ಮಾಹಿತಿ ಹಂಚಿಕೆ ಗಮನ ಸೆಳೆಯಿತು. ಮಮತಾ ಹೆಗಡೆ ಕೂಗ್ತೆಮನೆ ಪ್ರಾರ್ಥಿಸಿದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಸುರೇಶ ಹಕ್ಕಿಮನೆ ನಿರೂಪಿಸಿದರು. ಗ್ರಾಮಾಭ್ಯುದಯದ ಅಧ್ಯಕ್ಷ ಶಿವಾನಂದ ದೀಕ್ಷಿತ್ ವಂದಿಸಿದರು.

ಸಮಾರೋಪ 17ರಂದು

ಕೃಷಿ ಜಯಂತಿಯ ಸಮಾರೋಪ ಕಾರ್ಯಕ್ರಮ ಮೇ 17ರ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಕೃಷಿ ತಜ್ಞ ಶಂಕರ ಭಟ್ಟ ಬದನಾಜೆ, ಶಾಸಕ ಶಿವರಾಮ ಹೆಬ್ಬಾರ್ ಭಾಗವಹಿಸುವರು.

ತರಬೇತಿಗೆ ಯೋಜನೆ

ಅಡಿಕೆ ಮರ ಹತ್ತುವ ಕೌಶಲ ತರಬೇತಿಯನ್ನು ದಕ್ಷಿಣ ಕನ್ನಡ, ತೀರ್ಥಹಳ್ಳಿ ಭಾಗದಲ್ಲಿ ನಡೆಸಲಾಗಿದೆ. ಅಡಿಕೆ ಬೆಳೆಯುವ ಉತ್ತರ ಕನ್ನಡ, ಚಿಕ್ಕಮಗಳೂರು, ಮೂಡಿಗೆರೆ, ಹೊಸದುರ್ಗದಲ್ಲಿಯೂ ತರಬೇತಿ ನಡೆಸಲು ಯೋಚಿಸಲಾಗಿದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ.ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.