ADVERTISEMENT

ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತ ಹೋರಾಟ ಅಗತ್ಯ

ಹಿಂದು ಸಮಾಜೋತ್ಸವ:ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:32 IST
Last Updated 20 ಜನವರಿ 2026, 5:32 IST
ಶಿರಸಿಯ ಕೆ.ಎಚ್.ಬಿ. ಮೈದಾನದಲ್ಲಿ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವವನ್ನು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು
ಶಿರಸಿಯ ಕೆ.ಎಚ್.ಬಿ. ಮೈದಾನದಲ್ಲಿ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವವನ್ನು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು   

ಶಿರಸಿ: ‘ಸಾಮಾನ್ಯ ಜನರನ್ನು ಸಂಘಟಿಸುವ ಉದ್ದೇಶದಿಂದ ಆಯೋಜಿಸಲಾಗುವ ಸಮಾಜೋತ್ಸವಗಳು ಧರ್ಮದ ರಕ್ಷಣೆಗೆ ಪೂರಕವಾಗಿವೆ’ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕೆ.ಎಚ್.ಬಿ. ಮೈದಾನದಲ್ಲಿ ಭಾನುವಾರ ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ‘ಧರ್ಮದ ಸಂರಕ್ಷಣೆಯೊಂದೇ ಸಮಾಜದ ಸಂರಕ್ಷಣೆ ಎಂಬ ಧ್ಯೇಯದೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಜಾತ್ಯತೀತ ವಾದದ ಹೆಸರಿನಲ್ಲಿ ಧರ್ಮ ಬೇಡ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದ್ದರೂ, ಅವು ಶಾಶ್ವತವಲ್ಲ. ಧರ್ಮದ ಆಧಾರದ ಮೇಲೆ ನಡೆಯುವ ಸಂಘಟನೆಗೆ ಸಾರ್ವಜನಿಕರ ಬೆಂಬಲ ಸದಾ ಹೆಚ್ಚಿರುತ್ತದೆ’ ಎಂದು ಅವರು ಹೇಳಿದರು.

‘ಸಮಾಜದ ಸಂಘಟನೆಯ ಹೆಸರಿನಲ್ಲಿ ಧರ್ಮದ ರಕ್ಷಣೆ ಮಾಡುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಮನೆ, ಸಮಾಜ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಹಿಂದೆ ವಿಶ್ವವ್ಯಾಪಿಯಾಗಿದ್ದ ಹಿಂದೂ ಧರ್ಮವು ಇಂದು ಭಾರತದಲ್ಲಿ ನೆಲೆ ನಿಂತಿದೆ. ಇದು ಸಂಪೂರ್ಣವಾಗಿ ಹಿಂದೂ ರಾಷ್ಟ್ರವಾಗುವ ಅಗತ್ಯವಿದ್ದು, ಇದಕ್ಕಾಗಿ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ’ ಎಂದ ಸ್ವಾಮೀಜಿ, ‘ಹಿಂದೂ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮತ್ತು ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿದೆ. ಈ ಬಗ್ಗೆ ಸಮಾಜವು ಸಕಾರಾತ್ಮಕವಾಗಿ ಚಿಂತಿಸಬೇಕಿದೆ. ಸಂಘಟನೆಯಲ್ಲಿ ಜಾತಿ-ಭೇದಗಳು ಅಡ್ಡಿಯಾಗಬಾರದು. ವಿದೇಶಿ ಚಿಂತನೆಗಳ ಪ್ರಭಾವವನ್ನು ತಡೆದು, ನಿಸ್ವಾರ್ಥವಾಗಿ ಧಾರ್ಮಿಕ ಆಚರಣೆಗಳ ಜೊತೆಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು’ ಎಂದು ಕರೆ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಕೃಷ್ಣ ಜೋಶಿ ಮಾತನಾಡಿದರು. ಸಮಾಜೋತ್ಸವ ಆಚರಣಾ ಸಮಿತಿಯ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪ್ರಮುಖರಾದ ಕೃಷ್ಣ ಎಸಳೆ ಇದ್ದರು. ಚಂದ್ರು ಎಸಳೆ ನಿರ್ವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.