ADVERTISEMENT

‘ಸೌಭಾಗ್ಯ‘ ಫಲಕ ಅಳವಡಿಕೆಗೆ ತೀವ್ರ ಆಕ್ಷೇಪ

ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:49 IST
Last Updated 5 ನವೆಂಬರ್ 2019, 14:49 IST
ಶಿರಸಿಯಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಮಾತನಾಡಿದರು
ಶಿರಸಿಯಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಮಾತನಾಡಿದರು   

ಶಿರಸಿ: ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಮೊದಲೇ ಊರಿಗೆ ‘ಸೌಭಾಗ್ಯ’ ವಿದ್ಯುದೀಕರಣಗೊಂಡ ಗ್ರಾಮ ಎಂದು ಫಲಕ ಅಳವಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ತಾಲ್ಲೂಕು ಪಂಚಾಯ್ತಿ ಸದಸ್ಯರು, ಈ ಬಗ್ಗೆ ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸದಸ್ಯ ವಿನಾಯಕ ಭಟ್ಟ, ‘ಕೆಲವು ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ. ಆದರೆ, ಫಲಾನುಭವಿಯಿಂದ ಒತ್ತಾಯಪೂರ್ವಕವಾಗಿ ಸಹಿ ಪಡೆದು, ಊರಿನ ಎದುರು ಫಲಕ ಹಾಕಲಾಗಿದೆ. ಇದರಿಂದ ಇನ್ನು ವಿದ್ಯುತ್ ಸಿಗಬಹುದೇ ಎಂಬ ಆತಂಕದಲ್ಲಿ ಅವರಿದ್ದಾರೆ’ ಎಂದರು. ‘ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು. ತರಾತುರಿಯಲ್ಲಿ ಕೆಲಸ ಮುಗಿಸಲು ಗುತ್ತಿಗೆದಾರರು ಈ ರೀತಿ ಮಾಡುವುದು ಸರಿಯಲ್ಲ’ ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಹೇಳಿದರು.

ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಎ.ಆರ್.ಟಿ ಕೇಂದ್ರಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಘಟನೆ ನಡೆದು ಅನೇಕ ದಿನಗಳಾದರೂ ಈ ಬಗ್ಗೆ ತನಿಖೆಯಾಗಿಲ್ಲ ಎಂದು ಸದಸ್ಯ ನಾಗರಾಜ ಶೆಟ್ಟಿ ದೂರಿದರು.

ADVERTISEMENT

ಹುಲೇಕಲ್‌ ಭಾಗದಲ್ಲಿ ಆಕಳೊಂದು ಮೃತಪಟ್ಟಿರುವುದು ರೇಬಿಸ್ ರೋಗದಿಂದ ಎಂಬುದು ದೃಢಪಟ್ಟಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿ ಡಾ.ಆರ್.ಜಿ.ಹೆಗಡೆ ಹೇಳಿದರು. ‘ಈಗಾಗಲೇ ನಾಲ್ಕು ಆಕಳುಗಳು ಮೃತಪಟ್ಟಿವೆ. ಸ್ಥಳೀಯ ಗ್ರಾಮಸ್ಥರ ಸಭೆ ಕರೆದು ಜಾಗೃತಿ ಮೂಡಿಸಬೇಕು’ ಎಂದು ಸದಸ್ಯ ನರಸಿಂಹ ಹೆಗಡೆ ಸಲಹೆ ಮಾಡಿದರು.

ಹುಬ್ಬಳ್ಳಿ ರಸ್ತೆಯಲ್ಲಿ ಆಯುಷ್ ಆಸ್ಪತ್ರೆ ಸಮೀಪ ಅಪಘಾತ ಹೆಚ್ಚುತ್ತಿದೆ. ಪಕ್ಕದಲ್ಲಿಯೇ ಉರ್ದು ಶಾಲೆ ಸಹ ಇದೆ. ಮಕ್ಕಳು, ರೋಗಿಗಳು ಓಡಾಡುವುದರಿಂದ ಇಲ್ಲಿ ರಸ್ತೆ ಸುರಕ್ಷತೆ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಡಾ. ಜಗದೀಶ ಯಾಜಿ ವಿನಂತಿಸಿದರು.

ಆಯ್ದ ಕ್ಲಸ್ಟರ್‌ಗಳಲ್ಲಿ ವಿಜ್ಞಾನ ಹಬ್ಬ ಆಯೋಜಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಎರಡನೇ ಸೆಟ್ ಸಮವಸ್ತ್ರ ಇನ್ನಷ್ಟೇ ಬರಬೇಕಾಗಿದೆ. ಮಳೆಹಾನಿಯಿಂದ ಹಾನಿಯಾಗಿರುವ ಶಾಲಾ ಕೊಠಡಿಗಳ ದುರಸ್ತಿಗೆ ಹಣ ಮಂಜೂರು ಆಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.