ADVERTISEMENT

ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತೆ ಮುಂದೂಡಿಕೆ

ಗೊಂದಲದ ಗೂಡಾದ ಕಾರವಾರ ಶೈಕ್ಷಣಿಕ ಜಿಲ್ಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 14:12 IST
Last Updated 16 ಅಕ್ಟೋಬರ್ 2018, 14:12 IST

ಕಾರವಾರ: ಶೈಕ್ಷಣಿಕ ಜಿಲ್ಲೆಯ ಹೆಚ್ಚುವರಿ ಸಹಾಯಕ ಶಿಕ್ಷಕರು ಮತ್ತು ಖಾಲಿ ಹುದ್ದೆಗಳಿಗೆ ವರ್ಗಾವಣೆ ಸಂಬಂಧ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕೌನ್ಸೆಲಿಂಗ್ ಪ್ರಕ್ರಿಯೆಯು ಮಂಗಳವಾರವೂ ನೆರವೇರಲಿಲ್ಲ.

ತಂತ್ರಾಂಶ ಕೈಕೊಟ್ಟ ಕಾರಣ ಸೋಮವಾರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ನೂರಾರು ಕಿ.ಮೀ ದೂರದಿಂದ ಬಂದಿದ್ದ ಶಿಕ್ಷಕರು ಶಿಕ್ಷಣ ಇಲಾಖೆಗೆ ಹಿಡಿಶಾಪ ಹಾಕಿ ಮನೆಗೆ ಮರಳಿದ್ದರು. ಮತ್ತೆ ಮಂಗಳವಾರ ಬೆಳಿಗ್ಗೆ ಬಂದಾಗಲೂ ಇದೇ ಪರಿಸ್ಥಿತಿ ಮುಂದುವರಿಯಿತು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ, ‘ಬೆಳಿಗ್ಗೆ ತಂತ್ರಾಂಶ ಕಾರ್ಯಾರಂಭ ಮಾಡಿತ್ತು. ಆದರೆ, ಖಾಲಿ ಇದ್ದ ಹುದ್ದೆಗಳ ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡುಬರುತ್ತಿತ್ತು. ಒಮ್ಮೆ ಐದು, ಇನ್ನೊಮ್ಮೆ ಎಂಟು, ಮತ್ತೊಮ್ಮೆ 10 ಹೀಗೆ ನಿಮಿಷಕ್ಕೂ ವ್ಯತ್ಯಾಸ ಬರುತ್ತಿದ್ದವು. ಈ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ತಂತ್ರಾಂಶವನ್ನು ಸರಿಪಡಿಸುವುದಾಗಿ ತಿಳಿಸಿದರು. ಆದರೂ ಸಮಸ್ಯೆ ಕಂಡುಬಂತು’ ಎಂದು ತಿಳಿಸಿದರು.

ADVERTISEMENT

‘ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಅವರೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಪ್ರಕ್ರಿಯೆಯನ್ನು ಮುಂದೂಡಲು ತಿಳಿಸಿದ್ದಾರೆ’ ಎಂದು ಹೇಳಿದರು.

‘ಕಾಯುವುದೇ ಕೆಲಸವಾಗಿದೆ’: ‘ಇಷ್ಟೆಲ್ಲ ಗೊಂದಲಕ್ಕೆ ಕಾರಣವೇನು ಎಂದು ಕೇಳಿದರೆ ಸಾಫ್ಟ್‌ವೇರ್ ಸಮಸ್ಯೆ ಎಂದು ಅಧಿಕಾರಿಗಳು ಹೇಳಿದರು. ಎಲ್ಲರೂ ಗದ್ದಲ ಮಾಡಿದ ಬಳಿಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಗುರುಭವನಕ್ಕೆ ಬಂದರು. ಇಲಾಖೆಯ ಆಯುಕ್ತರ ಜತೆ ಸಭೆ ನಡೆಸಿ ದಿನಾಂಕ ತಿಳಿಸುವುದಾಗಿ ತಿಳಿಸಿದರು. ಒಟ್ಟಿನಲ್ಲಿ ಇಲಾಖೆಯು ಖಾಲಿ ಹುದ್ದೆಗಳ ಪಟ್ಟಿ ಬಿಡುಗಡೆಯಿಂದ ಮೊದಲಾಗಿ ವರ್ಗಾವಣೆ ಪ್ರಕ್ರಿಯೆವರೆಗೂ ಎಲ್ಲವನ್ನೂ ಗೊಂದಲದ ಗೂಡಾಗಿಸಿಟ್ಟಿತು. ಶಿಕ್ಷಕರಿಗೆ ಮಾತ್ರ ಮತ್ತೆ ಕಾಯುವುದೇ ಕೆಲಸವಾಗಿದೆ’ ಎಂದು ಶಿಕ್ಷಕರೊಬ್ಬರು ಬೇಸರಿಸಿದರು.

‘ಕಡ್ಡಾಯವಾಗಿ ಹೇಗೆ ಒಪ್ಪಿಕೊಳ್ಳಲಿ?’

ಶಿಕ್ಷಣ ಇಲಾಖೆಯು ವರ್ಗಾವಣೆ ಪ್ರಕ್ರಿಯೆಗೆ ಯಾವ ಮಾನದಂಡ ಅನುಸರಿಸುತ್ತಿದೆ ಎಂದೇ ತಿಳಿಯುತ್ತಿಲ್ಲ. ಮೊದಲು ಹಿರಿಯ ಪ್ರಾಥಮಿಕ ಶಾಲೆಗಳ ಖಾಲಿ ಹುದ್ದೆಗಳನ್ನು ಮಾತ್ರ ಪ್ರಕಟಿಸುವುದಾಗಿ ಹೇಳಿದರು. ನಂತರ, ಉದಾಹರಣೆಗೆ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗುವುದು, ಅದನ್ನು ಶಿಕ್ಷಕರು ಕಡ್ಡಾಯವಾಗಿ ಒಪ್ಪಿಕೊಳ್ಳಲೇಬೇಕು ಎಂದರು.ಇದು ಹೇಗೆ ಸಾಧ್ಯ ಎಂದೇ ಅರ್ಥವಾಗುತ್ತಿಲ್ಲ. ಸಮೀಪದ ಯಾವುದೇ ಶೈಕ್ಷಣಿಕ ಜಿಲ್ಲೆಯಲ್ಲಿ ಇಲ್ಲದ ನಿಯಮ, ಗೊಂದಲ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಯಾಕಿದೆ ಎಂದು ತಿಳಿಯುತ್ತಿಲ್ಲ’ ಎಂದು ಹಿರಿಯ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.