ಯಲ್ಲಾಪುರ: `ಮಕ್ಕಳು ಚಿಕ್ಕವರಿರುವಾಗಲೇ ಪುರಾಣ ಕಥನಗಳನ್ನು ತಿಳಿಸಿಕೊಡುವುದರಿಂದ ಅವರಲ್ಲಿ, ಉತ್ತಮ ಸಂಸ್ಕಾರ, ಮೌಲ್ಯದ ಕುರಿತು ಅರಿವು ಮೂಡುತ್ತದೆʼ ಎಂದು ಉಮ್ಮಚ್ಗಿ ಸೊಸೈಟಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಕ್ಕಳ ವಿಭಾಗ ಉಮ್ಮಚ್ಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಮಕ್ಕಳ ಗೋಷ್ಠಿ ʻಸೀತಾನುಸಂಧಾನ’ ಉದ್ಘಾಟಿಸಿ ಮಾತನಾಡಿದರು.
‘ಸೀತಾನುಸಂಧಾನ' ಮಕ್ಕಳ ಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ 20 ಮಕ್ಕಳು ಸೀತೆಯ ಕುರಿತು ಮಾತನಾಡಿದರು. ಪರಿಷದ್‌ನ ರಾಜ್ಯ ಘಟಕದ ಅಧ್ಯಕ್ಷ ಎಸ್.ಜಿ. ಕೋಟಿ, ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ ಮಾತನಾಡಿದರು.
ಹಿರಿಯ ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆ ಮಾತನಾಡಿ, ರಾಮಾಯಣ ಕುರಿತ ಪ್ರವಚನಗಳು, ಶತಾವಧಾನಿ ಆರ್. ಗಣೇಶರ ಅರವತ್ತಕ್ಕೂ ಹೆಚ್ಚು ರಾಮಾಯಣ ಕುರಿತ ಉಪನ್ಯಾಸಗಳು ಯುಟ್ಯೂಬ್‌ನಲ್ಲಿ ಸಿಗುತ್ತವೆ. ಅನೇಕ ಕವಿಗಳ ರಾಮಾಯಣವನ್ನೂ ಮೊಬೈಲ್ ನಲ್ಲಿ ಓದಬಹುದು. ಅಂಥವನ್ನು ಮಕ್ಕಳು ನೋಡುವಂತೆ, ಕೇಳುವಂತೆ, ಓದುವಂತೆ ಪ್ರರೇಪಿಸುವುದು ನಮ್ಮ ಹೊಣೆಗಾರಿಕೆʼ ಎಂದರು.
ಪರಿಷದ್‌ನ ಮಕ್ಕಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷೆ ಸುಜಾತಾ ಹೆಗಡೆ ಕಾಗಾರಕೊಡ್ಲು ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವರೆ, ಉಮ್ಮಚ್ಗಿ ಸಂಸ್ಕೃತ ಪಾಠಶಾಲಾ ಅಧ್ಯಕ್ಷ ವಿ.ವಿ.ಜೋಶಿ, ಪ್ರಮುಖರಾದ ರಘುನಂದನ ಭಟ್ಟ, ಕೃಷ್ಣ ಪದಕಿ, ರಾಮರಾಜು ಬಳ್ಳಾರಿ ಇದ್ದರು.
ಸಿಂಧೂರ ಗಿರಣಿಮನೆ, ಅವನಿ ಕೇಸರ್ಕರ್, ಶ್ರಾವಣಿ ಭಟ್ಟ ಪ್ರಾರ್ಥಿಸಿದರು. ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ರಾಜೇಶ ಶಾಸ್ತ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.