ADVERTISEMENT

ಇಳಿಮುಖದತ್ತ ದೇವಾಲಯ ಆದಾಯ

ಶಕ್ತಿ ಯೋಜನೆಗೆ ಕ್ರಮೇಣ ಮಹಿಳೆಯರ ನಿರಾಸಕ್ತಿ: ಕಡಿಮೆಯಾದ ಧಾರ್ಮಿಕ ತಾಣಗಳ ಭೇಟಿ

ಗಣಪತಿ ಹೆಗಡೆ
Published 11 ಮೇ 2025, 4:34 IST
Last Updated 11 ಮೇ 2025, 4:34 IST

ಕಾರವಾರ: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಗೆ ತಂದಿದ್ದರ ಪರಿಣಾಮ ಜಿಲ್ಲೆಯ ಹಲವು ದೇವಾಲಯಗಳು ಕಳೆದ ವರ್ಷ ಭರಪೂರ ಆದಾಯ ಗಳಿಸಿದ್ದವು. ಆದರೆ, ಈ ಬಾರಿ ಬಹುತೇಕ ದೇವಾಲಯಗಳು ಹೆಚ್ಚಿನ ಆದಾಯ ಗಳಿಕೆಯಲ್ಲಿ ಹಿಂದೆ ಬಿದ್ದಿವೆ.

ಆರ್ಥಿಕ ವರ್ಷ ಮುಗಿದ ಬೆನ್ನಲ್ಲೆ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ವಾರ್ಷಿಕ ಆದಾಯದ ಮಾಹಿತಿ ಸಂಗ್ರಹಿಸಿದೆ. 9 ಎ ಶ್ರೇಣಿಯ, 8 ಬಿ ಶ್ರೇಣಿಯ ದೇವಾಲಯಗಳಿಂದ ಮಾಹಿತಿ ಕೇಳಲಾಗಿತ್ತಾದರೂ 3 ಎ ಶ್ರೇಣಿ ಮತ್ತು 2 ಬಿ ಶ್ರೇಣಿಯ ದೇವಾಲಯಗಳು ಮಾಹಿತಿ ನೀಡಿಲ್ಲ. ಉಳಿದ ದೇವಾಲಯಗಳು ಮಾಹಿತಿ ನೀಡಿವೆ. ಕೆಲ ದೇವಾಲಯಗಳು ಕಳೆದ ವರ್ಷಕ್ಕಿಂತ ಹೆಚ್ಚು, ಇನ್ನು ಕೆಲವು ಕಡಿಮೆ ಆದಾಯ ಗಳಿಸಿವೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.

2023–24ನೇ ಆರ್ಥಿಕ ವರ್ಷದಲ್ಲಿ ₹2.14 ಕೋಟಿ ಆದಾಯ ಗಳಿಸಿದ್ದ ಶಿರಸಿ ತಾಲ್ಲೂಕಿನ ಮಂಜುಗುಣಿಯ ವೆಂಕರಮಣ ದೇವಾಲಯದ ಆದಾಯ 2024–25ರಲ್ಲಿ ₹1.66 ಕೋಟಿಗೆ ಇಳಿಕೆಯಾಗಿದೆ. ₹1.13 ಕೋಟಿ ಗಳಿಸಿದ್ದ ಶಿರಸಿಯ ಮಹಾಗಣಪತಿ ದೇವಸ್ಥಾನದ ಆದಾಯ ₹1.05 ಕೋಟಿಗೆ ಇಳಿದಿದೆ.

ADVERTISEMENT

ಕಳೆದ ಅವಧಿಯಲ್ಲಿ ₹2.45 ಕೋಟಿ ಆದಾಯ ಗಳಿಸಿದ್ದ ಭಟ್ಕಳ ತಾಲ್ಲೂಕು ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಾಲಯದ ಆದಾಯ ಈ ಬಾರಿ ₹3.40 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿ ಶ್ರೇಣಿಯ ಬಹುತೇಕ ದೇವಾಲಯಗಳ ಆದಾಯದಲ್ಲಿಯೂ ಇಳಿಕೆಯಾಗಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘2023ರ ಜೂನ್‌ನಲ್ಲಿ ಶಕ್ತಿ ಯೋಜನೆ ಆರಂಭಗೊಂಡಿದ್ದರಿಂದ ಉಚಿತ ಪ್ರಯಾಣದ ಅವಕಾಶ ಸಿಕ್ಕ ಖುಷಿಯಲ್ಲಿ ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರಮಾಣ ಹೆಚ್ಚಿತ್ತು. ವರ್ಷ ಕಳೆದಂತೆ ಅವರಲ್ಲಿ ಉಚಿತ ಪ್ರಯಾಣದ ಆಸಕ್ತಿ ಕಡಿಮೆಯಾಗಿದೆ. ಹೀಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇವಾಲಯಗಳಿಗೆ ಭೇಟಿ ನೀಡಿದ ಹೊರಜಿಲ್ಲೆಗಳ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಕಳೆದ ವರ್ಷದಷ್ಟು ಆದಾಯ ಸಂಗ್ರಹವಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.