ADVERTISEMENT

ತೆಂಗಳಿ ಮಾರ್ಗದಲ್ಲಿ ಗುಂಡಿಗಳದ್ದೇ ಕಾರುಬಾರು

ದುರಸ್ತಿ ಕಾಣದ ರಸ್ತೆ, ವಾಹನ ಸವಾರರ ಪರದಾಟ; ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆಗ್ರಹ

ಮಲ್ಲಿಕಾರ್ಜುನ ಎಚ್.ಎಂ
Published 30 ಸೆಪ್ಟೆಂಬರ್ 2020, 3:01 IST
Last Updated 30 ಸೆಪ್ಟೆಂಬರ್ 2020, 3:01 IST
ಭೀಮನಹಳ್ಳಿ ಗ್ರಾಮದಿಂದ ಕಮಲಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ-- 126ರ ತೆಂಗಳಿ ರಸ್ತೆ ಹದಗೆಟ್ಟಿದೆ
ಭೀಮನಹಳ್ಳಿ ಗ್ರಾಮದಿಂದ ಕಮಲಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ-- 126ರ ತೆಂಗಳಿ ರಸ್ತೆ ಹದಗೆಟ್ಟಿದೆ   

ಚಿತ್ತಾಪುರ: ತಾಲ್ಲೂಕಿನ ತೆಂಗಳಿ ಕ್ರಾಸ್‌ನಿಂದ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದವರೆಗೆ ರಾಜ್ಯ ಹೆದ್ದಾರಿ-126 ಪೂರ್ತಿ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಚಿತ್ತಾಪುರ ಪಟ್ಟಣದಿಂದ ದಂಡೋತಿ ಗ್ರಾಮದ ಮೂಲಕ ಹಾದು ಹೋಗುವ ರಸ್ತೆಯು ತೆಂಗಳಿಯ ಬೆಣ್ಣೆತೊರಾ ಸೇತುವೆವರೆಗೆ ಸುಮಾರು 6 ಕಿ.ಮೀ ತುಂಬ ಹಾಳಾಗಿ. ಮೊಣ ಕಾಲುದ್ದದ ಗುಂಡಿಗಳು ಉಂಟಾಗಿವೆ.

ರಸ್ತೆಯು ಎಷ್ಟೊಂದು ಹಾಳಾಗಿ ದೆಯೆಂದರೆ 6 ಕಿ.ಮೀ ಕ್ರಮಿಸಲು 20 ನಿಮಿಷಕ್ಕಿಂತ ಅಧಿಕ ಸಮಯ ಬೇಕಾಗುತ್ತಿದೆ. ಬಸ್, ಬೈಕ್ ಮತ್ತು ವಾಹನಗಳು ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಿ ಸಾಗಲು ಹರಸಾಹಸ ಮಾಡಬೇಕಾಗುತ್ತಿದೆ. 20 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವೇಗದಲ್ಲಿ ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಬೈಕ್, ಟಂಟಂ, ಜೀಪು, ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಸತತ ಮಳೆಯಿಂದ ರಸ್ತೆಯಲ್ಲಿನ ಗುಂಡಿಗಳು ದೊಡ್ಡದಾಗಿವೆ. ಮಳೆ ನೀರು ನಿಂತು ಗುಂಡಿಯ ಆಳ ಅರಿಯದೆ ಕೆಲವು ಬೈಕ್ ಸವಾರರು ಬಿದ್ದ ಘಟನೆಗಳು ಜರುಗಿವೆ.

ರಸ್ತೆ ಗಡಿ ಗೊಂದಲ: ‘ಕಲಬುರ್ಗಿ- ಸೇಡಂ ರಾಜ್ಯ ಹೆದ್ದಾರಿಯಿಂದ ತೊನಸನಹಳ್ಳಿ(ಟಿ) ಗ್ರಾಮದ ಕಂದಾಯ ಸೀಮೆಯವರೆಗೆ 4 ಕಿ.ಮೀ ರಸ್ತೆ ನಮ್ಮ ವ್ಯಾಪ್ತಿಗೊಳಪಡುತ್ತದೆ’ ಎಂದು ಚಿತ್ತಾಪುರ ಲೋಕೋಪಯೋಗಿ
ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಣ್ಣಪ್ಪ ಎನ್. ಕುದರಿ ಹೇಳುತ್ತಾರೆ.

ತೆಂಗಳಿ ಗ್ರಾಮದ ಬೆಣ್ಣೆತೊರಾ ನದಿ ಸೇತುವೆಯಿಂದ ಭವಾನಿ ಗುಡಿಯವರೆಗೆ 1 ಕಿ.ಮೀ ರಸ್ತೆ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಕಾಳಗಿ ತಾಲ್ಲೂಕಿನ ಲೋಕೋ ಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿದ್ರಾಮ ದಂಡಗುಲಕರ್ ಹೇಳುತ್ತಾರೆ.

ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದ ಕಂದಾಯ ಸೀಮೆ ಮತ್ತು ಚಿತ್ತಾಪುರ ತಾಲ್ಲೂಕಿನ ತೊನಸನಹಳ್ಳಿ(ಟಿ) ಗ್ರಾಮದ ಸೀಮೆ ಆಯಾ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುತ್ತವೆ. ಆದರೆ, ಕಾಳಗಿ ಲೋಕೋಪಯೋಗಿ ಎಇಇ ಅವರು ಹೇಳುವ ಪ್ರಕಾರ 1 ಕಿ.ಮೀ ರಸ್ತೆ ಯಾರಿಗೂ ಸಂಬಂಧಪಡದೆ ಅನಾಥವಾಗಿ ಉಳಿಯಲಿದೆ. ಚಿತ್ತಾಪುರ ಮತ್ತು ಕಾಳಗಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹದಗೆಟ್ಟ ರಸ್ತೆಯ ಪರಿಸ್ಥಿತಿ ಪರಿಶೀಲಿಸಿ ಕೂಡಲೇ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.