ಕುಮಟಾ: ‘ರಾಮಸರ್ ಎಂದು ಗುರುತು ಪಡೆದಿರುವ ಅಘನಾಶಿನಿ ಅಳಿವೆಯ ಧಾರಣಾ ಸಾಮರ್ಥ್ಯ ಕುಸಿಯದಂತೆ ಪ್ರವಾಸೋದ್ಯಮ ಮುಂತಾದ ಚಟುವಟಿಕೆಗಳನ್ನು ನಿಯಂತ್ರಿಸುವ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೈವಿಕ ನಿರ್ವಹಣಾ ಸಮಿತಿ ರಚಿಸಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ. ರಾಮಚಂದ್ರನ್ ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ‘ಭವಿಷ್ಯಕ್ಕಾಗಿ ಅಘನಾಶಿನಿ ಅಳಿವೆ ನಿರ್ವಹಣಾ ಯೋಜನೆ’ಯ ಬಗ್ಗೆ ಇಲ್ಲಿಯ ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿವಸಗಳ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ಅಘನಾಶಿನಿ ಅಳಿವೆಗೆ ಪ್ಲಾಸ್ಟಿಕ್ ಹಾಗೂ ಬಯೊಮೆಡಿಕಲ್ ತ್ಯಾಜ್ಯ ಸೇರುವುದನ್ನು ತಡೆಯಬೇಕು. ಗಜನಿ ಪ್ರದೇಶದಲ್ಲಿ ಭತ್ತದ ಕೃಷಿ ಹಾಗೂ ಕಾಂಡ್ಲಾ ವನಗಳಿಂದ ಭೂಮಿಯಲ್ಲಿ ಇಂಗಾಲದ ಶೇಖರಣೆ ಪ್ರಮಾಣ ಹೆಚ್ಚುತ್ತಿರುವುದರಿಂದ ಪರಿಸರ ಕಾಪಾಡುವುದರಲ್ಲಿ ಅಳಿವೆಯು ಅರಣ್ಯದಷ್ಟೇ ಮಹತ್ವ ಹೊಂದಿದೆ. ಇಂಗಾಲ ಶೇಖರಣೆ (ಕಾರ್ಬನ್ ಕ್ರೆಡಿಟ್) ಆದಾಯ ಸರ್ಕಾರದಿಂದ ರೈತರಿಗೆ ಸಿಗುವಂತಾಗಬೇಕು’ ಎಂದರು.
ಪ್ರಬಂಧ ಮಂಡಿಸಿದ ಸಂಶೋಧನಾ ವಿದ್ಯಾರ್ಥಿ ತುಲಿಕಾ ಮೊಂಡಾಲ್, ‘ಅಘನಾಶಿನಿ ಅಳಿವೆ ಪ್ರವಾಸಿ ಕೇಂದ್ರವಲ್ಲದೆ ವಿಜ್ಞಾನ ವಿದ್ಯಾರ್ಥಿಗಳ ಸಂಶೋಧನಾ ಕೇಂದ್ರ ಕೂಡ ಅಗಿದೆ. ಅಳಿವೆಯಲ್ಲಿ ಉಂಟಾಗುವ ಜೈವಿಕ ಬದಲಾವಣೆಗಳ ಬಗ್ಗೆ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಅಳಿವೆಯಲ್ಲಿ ಸುಸ್ಥಿರ ಅಭಿವೃದ್ಧಿ ಕಾಯ್ದುಕೊಳ್ಳುವ ಉದ್ದೇಶದಿಂದ ಅನುಮತಿ ಇರುವವರಿಗೆ ಮಾತ್ರ ಮೀನುಗಾರಿಕೆಗೆ ಅವಕಾಶ ನೀಡಬೇಕು. ಅಳಿವೆಯಲ್ಲಿ ಕಾಂಡ್ಲಾ ರಕ್ಷಣೆ, ಕಗ್ಗ ಕೃಷಿ, ಏಡಿ ಸಂಗ್ರಹಗಾರರನ್ನು ಗುರುತಿಸುವಂತಾಗಬೇಕು’ ಎಂದರು.
ಸಾಗರ ವಿಜ್ಞಾನಿ ವಿ.ಎನ್. ನಾಯಕ, ‘ಬಿಗಿ ನಿಯಮಗಳ ಮೂಲಕ ಅಳಿವೆಯ ನಿರ್ವಹಣೆ ಮಾಡಬೇಕಿರುವುದರಿಂದ ಅದರ ಜವಾಬ್ದಾರಿ ಅರಣ್ಯ ಇಲಾಖೆಗೇ ವಹಿಸಬೇಕು’ ಎಂದರು.
ಎ.ಸಿ.ಎಫ್. ಕೃಷ್ಣ ಗೌಡ, ಆರ್.ಎಫ್.ಒ. ಪ್ರವೀಣ ನಾಯಕ, ರಾಜು ನಾಯ್ಕ, ಪರಿಸರ ವಿಜ್ಞಾನಿಗಳಾದ ಎಂ.ಡಿ. ಸುಭಾಶ್ಚಂದ್ರನ್, ನಾಗರತ್ನಾ, ಪ್ರಕಾಶ ಮೇಸ್ತ, ಶಶಿಕಲಾ ಅಯ್ಯರ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ನಾಯ್ಕ, ಉದ್ಯಮಿ ಮಂಗಲ್ ಶೆಟ್ಟಿ, ದಿವಾಕರ ಅಘನಾಶಿನಿ, ಗಾಯತ್ರಿ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.