ADVERTISEMENT

ರಂಗಕರ್ಮಿ ಮಾರುತಿ ಬಾಡ್ಕರ್ ನಿಧನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 15:38 IST
Last Updated 20 ಜುಲೈ 2022, 15:38 IST
ಮಾರುತಿ ಬಾಡ್ಕರ್
ಮಾರುತಿ ಬಾಡ್ಕರ್   

ಕಾರವಾರ: ನಾಟಕ ರಚನೆಕಾರ, ರಂಗಭೂಮಿ ನಟ ಮಾರುತಿ ಬಾಡ್ಕರ್ (65), ನಗರದ ಕುಂಠಿ ಮಹಾದೇವಿ ದೇವಸ್ಥಾನ ಬಳಿಯ ಮನೆಯಲ್ಲಿ ಬುಧವಾರ ನಿಧನರಾದರು.

18ಕ್ಕೂ ಅಧಿಕ ಕನ್ನಡ ಸಾಮಾಜಿಕ ನಾಟಕಗಳನ್ನು ಅವರು ರಚಿಸಿದ್ದರು. ‘ಮಾಯಾ ಬಜಾರ್’ ನಾಟಕದ ಮೂಲಕ ರಂಗಪ್ರವೇಶ ಮಾಡಿದ್ದ ಅವರು, 1,000ಕ್ಕಿಂತಲೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದರು. ಹಾಸ್ಯನಟನ ಪಾತ್ರಗಳು ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದವು. ನೂರಾರು ನಾಟಕಗಳನ್ನು ನಿರ್ದೇಶಿಸಿದ್ದರು. ಕಾರವಾರ ತಾಲ್ಲೂಕು ಕಲಾವಿದರ ಸಂಘದ ಗೌರವಾಧ್ಯಕ್ಷರಾಗಿದ್ದರು.

ಕೊಂಕಣಿ ಭಾಷೆಯ ಪ್ರಾಬಲ್ಯ ಇರುವ ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲೂ ಯುವಕರಿಗೆ ತರಬೇತಿ ನೀಡಿ, ಅವರಿಂದ ಕನ್ನಡ ನಾಟಕಗಳನ್ನು ಪ್ರದರ್ಶನ ಮಾಡಿಸುತ್ತಿದ್ದರು.

ADVERTISEMENT

ಅವರು ರಚಿಸಿದ ‘ತಾಳಿ ಕಟ್ಟಿದ್ರೂ ಗಂಡನಲ್ಲ’, ‘ಸ್ನೇಹ ಬಂಧನ’, ‘ಸೇಡಿನ ಜ್ವಾಲೆ’, ‘ಸತ್ಯಮೇವ ಜಯತೆ’, ‘ನಟ ಸಾಮ್ರಾಟ’ ಮುಂತಾದ ನಾಟಕಗಳು ನೂರಾರು ಪ್ರದರ್ಶನಗಳನ್ನು ಕಂಡಿವೆ. ಹಲವು ನಾಟಕಗಳು ಕೊಂಕಣಿ ಮತ್ತು ಮರಾಠಿ ಭಾಷೆಗಳಿಗೂ ತರ್ಜುಮೆಯಾಗಿ ಪ್ರದರ್ಶನವಾಗಿವೆ.

ನಗರದ ಕಿರಾಣಿ ಅಂಗಡಿಯೊಂದರಲ್ಲಿ ಸುಮಾರು 50 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿದ್ದರು. ಅವಿವಾಹಿತರಾಗಿದ್ದ ಅವರ ಅಂತ್ಯಕ್ರಿಯೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಮ ನಾಯ್ಕ ಮತ್ತು ಸ್ನೇಹಿತರು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.