ADVERTISEMENT

ಉತ್ತರ ಕನ್ನಡ | ಜಿ.ಪಂ, ತಾ.ಪಂ: ಅಧಿಕಾರಿಗಳದ್ದೇ ದರ್ಬಾರ್‌

ಗಣಪತಿ ಹೆಗಡೆ
Published 21 ಜನವರಿ 2025, 5:11 IST
Last Updated 21 ಜನವರಿ 2025, 5:11 IST
ಆರ್.ಡಿ.ಹೆಗಡೆ
ಆರ್.ಡಿ.ಹೆಗಡೆ   

ಕಾರವಾರ: ಆಡಳಿತದಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯ ಭಾಗವಾಗಿ ರಚಿಸಲಾಗಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾಯಿತ ಆಡಳಿತ ಸಮಿತಿ ಇಲ್ಲದೆ ನಾಲ್ಕು ವರ್ಷ ಸಮೀಪಿಸಿದೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ‘ಅಧಿಕಾರಿಗಳ ಆಡಳಿತ’ದಿಂದ ಸಾಧ್ಯವಾಗುತ್ತಿಲ್ಲ ಎಂಬುದು ಜನರ ದೂರು.

2021ರ ಏಪ್ರಿಲ್‍ನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಈ ಹಿಂದಿನ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಇನ್ನೆರಡು ತಿಂಗಳು ಕಳೆದರೆ ಆಡಳಿತ ವ್ಯವಸ್ಥೆಯ ಎರಡು ಸ್ತರಗಳಿಗೆ ಪ್ರತಿನಿಧಿಗಳಿಲ್ಲದೆ ಬರೋಬ್ಬರಿ ನಾಲ್ಕು ವರ್ಷ ಪೂರೈಸುತ್ತಿದೆ.

ಜಿಲ್ಲೆಯಲ್ಲಿ ಈ ಮೊದಲು 39 ಜಿಲ್ಲಾ ಪಂಚಾಯಿತಿ, 111 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿದ್ದವು. ನಾಲ್ಕು ವರ್ಷಗಳಿಂದ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರಿಲ್ಲ. ಆದರೆ, ಜಿಲ್ಲಾ ಪಂಚಾಯಿತಿಗೆ ಹಿರಿಯ ಐಎಎಸ್ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯಿತಿಗೆ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗಿದೆ.

ADVERTISEMENT

‘ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಮೂರು ಸ್ತರದ ವ್ಯವಸ್ಥೆ ರಚನೆಯಾಗಿದೆ. ಅದರ ಭಾಗವಾಗಿ ಶಾಸನ ಸಭೆಯ ಅಧೀನದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಇವೆ. ಜನರ ಸಮಸ್ಯೆಗೆ ಸ್ಪಂದಿಸಲು ಚುನಾಯಿತ ಸದಸ್ಯರಿದ್ದರೆ ಪರಿಣಾಮಕಾರಿ ಕೆಲಸ ಸಾಧ್ಯವಾಗುತ್ತದೆ. ಸದಸ್ಯರ ಆಯ್ಕೆಗೆ ಚುನಾವಣೆಯನ್ನೇ ನಡೆಸದೆ ರಾಜ್ಯ ಸರ್ಕಾರ ವಿಳಂಬನೀತಿ ಅನುಸರಿಸುತ್ತಿರುವುದು ವಿಕೇಂದ್ರೀಕರಣ ವ್ಯವಸ್ಥೆ ತೊಡೆದುಹಾಕುವ ಪ್ರಯತ್ನ’ ಎಂಬುದಾಗಿ ಹೆಸರು ಬಹಿರಂಗಪಡಿಸಲು  ಇಚ್ಚಿಸದ ಹಿರಿಯ ಮುಖಂಡರೊಬ್ಬರು ದೂರಿದರು.

‘ಭೌಗೋಳಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡದಲ್ಲಿ ಗ್ರಾಮೀಣ ಪ್ರದೇಶ ಹೆಚ್ಚಿದೆ. ನೀರು, ಮೂಲಸೌಕರ್ಯಗಳ ಸಮಸ್ಯೆ ಸಾಕಷ್ಟಿವೆ. ಜನರ ಹಲವು ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಸದಸ್ಯರಿಗೆ ಕಷ್ಟ. ಶಾಸಕರಿಗೆ ಕೆಲಸದ ಒತ್ತಡದಲ್ಲಿ ಸಣ್ಣಪುಟ್ಟ ಸಮಸ್ಯೆ ಪರಿಹರಿಸಲು ಸಾಧ್ಯವಾಗದು. ಆರು ಶಾಸಕರು ಇಡೀ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವುದು ಕಷ್ಟವಾಗುವ ಕಾರಣಕ್ಕೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರ ಅಗತ್ಯ ಅನಿವಾರ್ಯ’ ಎಂದೂ ಅವರು ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿಗೆ ಆದಷ್ಟು ಬೇಗನೆ ಚುನಾವಣೆ ನಡೆಸಬೇಕು. ಒಂದಿಲ್ಲೊಂದು ಕಾರಣ ನೀಡಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ
ಆರ್.ಡಿ.ಹೆಗಡೆ ಜಾನ್ಮನೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿಗೆ ಚುನಾಯಿತ ಸದಸ್ಯರಿದ್ದರೆ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ಸರ್ಕಾರ ಸದ್ಯದಲ್ಲೇ ಚುನಾವಣೆ ನಡೆಸುವ ವಿಶ್ವಾಸವಿದೆ
ಪುಷ್ಪಾ ನಾಯ್ಕ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ
ವಿಳಂಬ ನೀತಿಯಿಂದ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳು ಜ್ವಲಂತವಾಗಿವೆ. ಶೀಘ್ರ ಚುನಾವಣೆ ನಡೆಸಿ ಸ್ಥಳೀಯ ಸಮಸ್ಯೆಗಳ ಪರಿಹರಿಸಲಿ
ಚೈತ್ರಾ ಕೊಠಾರಕರ್ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ
ಏರಿಕೆಯಾದ ಕ್ಷೇತ್ರಗಳ ಸಂಖ್ಯೆ
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯು ಈ ಮೊದಲು 39 ಕ್ಷೇತ್ರಗಳನ್ನು 11 ತಾಲ್ಲೂಕುಗಳಿಂದ 111 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಹೊಂದಿತ್ತು. 2023ರ ಡಿಸೆಂಬರ್ ನಲ್ಲಿ ಅಧಿಸೂಚನೆ ಹೊರಡಿಸಿದ್ದ ಸರ್ಕಾರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು 54ಕ್ಕೆ ದಾಂಡೇಲಿ ತಾಲ್ಲೂಕು ಪಂಚಾಯಿತಿ ಹೊಸದಾಗಿ ರಚಿಸಿ 12 ತಾಲ್ಲೂಕುಗಳಿಂದ 121 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಿದೆ. ಮೂರು ಬಾರಿ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಅಂತಿಮವಾಗಿ ಈ ಮೇಲಿನ ಕ್ಷೇತ್ರಗಳು ಅಂತಿಮಗೊಂಡಿವೆ. ಚುನಾವಣೆಗೆ ಕ್ಷೇತ್ರವಾರು ಮೀಸಲಾತಿ ನಿಗದಿ ಬಾಕಿ ಇದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಬಹುದು ಎಂಬ ಲೆಕ್ಕಾಚಾರದೊಂದಿಗೆ ರಾಜಕೀಯ ಪಕ್ಷಗಳ ಮುಖಂಡರು ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.