ಭಟ್ಕಳ: ನಿಜವಾದ ರಾಮನ ಭಕ್ತರಿಗೂ, ಕಾಂಗ್ರೆಸ್, ಬಿಜೆಪಿಗೂ ಸಂಬಂಧವಿಲ್ಲ. ರಾಮನ ಭಕ್ತರೇ ಬೇರೆ, ರಾಮನ ವಿಚಾರದಲ್ಲಿ ಯಾವ ಪಕ್ಷದವರೂ ರಾಜಕಾರಣ ಮಾಡಕೂಡದು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಅಂಗವಾಗಿ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿದರು.
‘ರಾಮನ ವಿಚಾರದಲ್ಲಿ ರಾಜಕಾರಣ ಮಾಡಿದ್ರೆ ನಿಜವಾಗಿಯೂ ರಾಮ ಕ್ಷಮಿಸುವುದಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ನಾನೂ ವೈಯಕ್ತಿಕ ಸಹಾಯ ನೀಡಿದ್ದೇನೆ . ₹1800ಕೋಟಿ ವೆಚ್ಚದಲ್ಲಿ ರಾಮಮಂದಿರ ನಿರ್ಮಾಣವಾಗಿದೆ, ಅಂದರೆ ಕಟ್ಟಕಡೆಯ ವ್ಯಕ್ತಿಯ ಹಣವೂ ಅದರಲ್ಲಿದೆ. ರಾಮನ ವಿಷಯದಲ್ಲಿ ರಾಜಕಾರಣ ಮಾಡಬೇಡಿ, ಇತಿಹಾಸ ತಿಳಿದುಕೊಳ್ಳಿ. ನಾನೂ ರಾಮ ಭಕ್ತ, ಅಯೋಧ್ಯೆಗೆ ತೆರಳಲು ಸಾಕಷ್ಟು ಪ್ರಯತ್ನ ಪಟ್ಟೆ, ಸಾಧ್ಯವಾಗಿಲ್ಲ. ಆದಷ್ಟು ಬೇಗ ಅಯೋಧ್ಯೆಗೆ ತೆರಳುತ್ತೇನೆ’ ಎಂದರು.
ಟೆಂಟ್‌ನೊಳಗೆ ರಾಮನ ಬೊಂಬೆ ಇಟ್ಟಿದ್ರು ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ಕೆಲವರು ದೇವರ ಮೂರ್ತಿಗಳನ್ನು ಕಲ್ಲಿನದ್ದು ಅಂತಾರೆ, ಅಂತವರಿಗೆ ಏನೂ ಮಾಡೊಕಾಗಲ್ಲ. ರಾಮನ ಬಗ್ಗೆ ಕೆಟ್ಟ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆಂದರೆ ಅವರ ಮನಸ್ಥಿತಿ ಸರಿಯಿಲ್ಲ ಎಂದರ್ಥ . ಅದು ಯಾವುದೇ ಪಕ್ಷದವರೇ ಆಗಲಿ. ನಾನು ರಾಮನ ಭಕ್ತ, ದೇವರ ವಿರುದ್ಧ ಯಾರೇ ಮಾತನಾಡಿದ್ರೂ ನಾನು ಅವರ ವಿರುದ್ಧನೇ ಮಾತನಾಡೋದು ಎಂದು ಹೇಳಿದರು.
ಪತ್ನಿ ಪುಷ್ಪಲತಾ ವೈದ್ಯ, ಮಗಳು ಬೀನಾ ವೈದ್ಯ, ನಾಮಧಾರಿ ಮುಖಂಡ ಎಲ್.ಎಸ್.ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.