ಶಿರಸಿ: ಕುಗ್ರಾಮಗಳಲ್ಲಿನ ಶಾಲೆಗಳನ್ನು ಹುಡುಕಿ ವರ್ಗಾವಣೆ ಮಾಡಿಸಿಕೊಂಡು ಅಲ್ಲಿಯೇ ಉಳಿದು ಶಿಕ್ಷಕ ವೃತ್ತಿ ಮಾಡು
ವವರು ಬಹಳ ವಿರಳ. ಅಂಥವರಲ್ಲಿ ಶಿರಸಿಯ ಶಿಕ್ಷಕ ನಾಗರಾಜ ವಿ.ನಿಲೇಕಣಿ ಅವರೂ ಒಬ್ಬರು. ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು 38 ವರ್ಷಗಳ ಕಾಲ ಅವಿರತವಾಗಿ ದುಡಿದಿದ್ದಾರೆ.
ಜೊಯಿಡಾ ತಾಲ್ಲೂಕಿನ ಕುಗ್ರಾಮ ಮಿರಲ್ವಾಡದಲ್ಲಿ ಮೂಲಸೌಕರ್ಯಗಳೇ ಇರಲಿಲ್ಲ. ವರ್ಗಾವಣೆಯಾದ ಕೆಲವೇ ವರ್ಷಗಳಲ್ಲಿ ಈ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ್ದು ನಾಗರಾಜ ಅವರ ಹೆಗ್ಗಳಿಕೆ. ಈ ಕಾರ್ಯಕ್ಕಾಗಿ ಅವರು ಗ್ರಾಮಸ್ಥರನ್ನೂ ತೊಡಗಿಸಿಕೊಂಡರು. ಶಾಲೆಗೆ ಸೇರಿದ್ದ 23 ಗುಂಟೆ ಜಾಗ ಅತಿಕ್ರಮಣವಾಗಿದ್ದನ್ನು ತಿಳಿದಾಗ, ಕೋರ್ಟ್–ಕಚೇರಿ ಅಲೆದಾಡಿ ಆ ಜಾಗವನ್ನು ಮತ್ತೆ ಶಾಲೆಯ ಸುಪರ್ದಿಗೆ ಸೇರುವಂತೆ ಮಾಡಿದರು.
ನಂತರ ಅವರು ಶಿರಸಿ ತಾಲ್ಲೂಕಿನ ಕುಗ್ರಾಮ ಮುಂಡಿಗೆಹಳ್ಳಿಗೆ ವರ್ಗಾವಣೆಯಾದರು. ಕುರುಹೂ ಕಾಣದ ಸ್ಥಿತಿಯಲ್ಲಿದ್ದ ಶಾಲೆಯನ್ನು ಸರ್ಕಾರದ ಯೋಜನೆ, ಅನುದಾನ, ಸ್ಥಳೀಯರ ನೆರವು ಪಡೆದು ಸೌಕರ್ಯ ಒದಗಿಸಿದರು. ಕೆಲವೇ ವರ್ಷಗಳಲ್ಲಿ ನಲಿಕಲಿ ಮಾದರಿ ಶಾಲೆಯಾಗಿ ಬದಲಾಯಿತು. ಎಂಟು ವರ್ಷಗಳ ಅವರ ಶ್ರಮಕ್ಕೆ ‘ಉತ್ತಮ ಶಿಕ್ಷಕರ ಉತ್ತೇಜನ ಪ್ರಶಸ್ತಿ’ ಹಾಗೂ ‘ಶಾಲಾ ಗುಣಮಟ್ಟ ಮೌಲ್ಯಾಂಕನ ಪ್ರಶಸ್ತಿ’ ಅರಸಿ ಬಂತು.
ಅಲ್ಲಿಂದ ಶಿರಸಿಯ ಮತ್ತೊಂದು ಕುಗ್ರಾಮ ತೆಪ್ಪಗಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ಗೆದ್ದಲು ಹಿಡಿದು ಬೀಳುವ ಸ್ಥಿತಿಯಲ್ಲಿದ್ದ ಶಾಲೆಯನ್ನು ಸುಸ್ಥಿಗೆ ತಂದರು. ಕುಡಿಯುವ ನೀರು, ವಿದ್ಯುತ್, ಗ್ಯಾಸ್ ಇಲ್ಲದ ಕಾರಣ ಮಕ್ಕಳಿಗೆ ಬಿಸಿಯೂಟವೂ ಇಲ್ಲವಾಗಿತ್ತು. ಎದೆಗುಂದದ ನಾಗರಾಜ ಮೇಷ್ಟ್ರು ಶಿರಸಿಯಿಂದ ಸೊಪ್ಪು, ತರಕಾರಿ ಖರೀದಿಸಿ, ಬೈಕ್‌ನಲ್ಲಿ ಸಿಲಿಂಡರ್ ತಂದು, ನದಿ ದಾಟಿಸಿ ಎರಡು ಕಿ.ಮೀ ನಡೆದು ಹೋಗಿ ಮಕ್ಕಳಿಗೆ ಒಂದು ದಿನವೂ ಬಿಸಿಯೂಟ ತಪ್ಪದ ಹಾಗೆ ವ್ಯವಸ್ಥೆ ಮಾಡಿದ್ದಾರೆ. ಅವರ ಕಾಳಜಿ, ಬೋಧನೆಯಿಂದ ಸಂಪೂರ್ಣ ಹಾಜರಾತಿ ಇದ್ದು, ಎಲ್ಲರೂ ಅಚ್ಚರಿ ಪಡುವಂತಾಗಿದೆ.
ಮಕ್ಕಳ ಭವಿಷ್ಯ ರೂಪುಗೊಂಡರೆ ಅದುವೇ ದೊಡ್ಡ ಪ್ರಶಸ್ತಿ. ಅದು ನನಗೆ ಅನೇಕ ಬಾರಿ ಸಿಕ್ಕಿದೆ, ಸಿಗುತ್ತಲೂ ಇದೆ. ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಾರ್ಥಕ ಎನಿಸುತ್ತಿದೆ ಎಂದು ಶಿಕ್ಷಕರಾದನಾಗರಾಜ ವಿ.ನಿಲೇಕಣಿ ಪ್ರತಿಕ್ರಿಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.