ADVERTISEMENT

ಉತ್ತರ ಕನ್ನಡ: ಒಂದೇ ದಿನ 35 ಸಾವಿರ ಮಂದಿಗೆ ಲಸಿಕೆ

ಕೋವಿಡ್ 19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯ್ಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 14:26 IST
Last Updated 21 ಜೂನ್ 2021, 14:26 IST
ಕಾರವಾರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಉಚಿತ ಲಸಿಕಾ ಅಭಿಯಾನದಲ್ಲಿ ಹೆಸರು ನೋಂದಾಯಿಸಲು ಸೇರಿದ್ದ ಫಲಾನುಭವಿಗಳು
ಕಾರವಾರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಉಚಿತ ಲಸಿಕಾ ಅಭಿಯಾನದಲ್ಲಿ ಹೆಸರು ನೋಂದಾಯಿಸಲು ಸೇರಿದ್ದ ಫಲಾನುಭವಿಗಳು   

ಕಾರವಾರ: ‘ಜಿಲ್ಲೆಯಲ್ಲಿ ಸೋಮವಾರ ಆಯೋಜಿಸಲಾದ ಕೋವಿಡ್ ಲಸಿಕಾ ಮೇಳದಲ್ಲಿ ಒಂದೇ ದಿನ 35 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಇದು ಜಿಲ್ಲೆಯಲ್ಲಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮೈಲಿಗಲ್ಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಲಸಿಕೆಗೆ ಹೆಚ್ಚಿನ ಬೇಡಿಕೆಯಿದೆ. ಜನರು ಜಾಗೃತರಾಗಿದ್ದು, ಪ್ರತಿಯೊಬ್ಬರೂ ಲಸಿಕೆಯನ್ನು ಕೇಳಿ ಪಡೆಯುತ್ತಿದ್ದಾರೆ. ಈ ಅಭಿಯಾನದ ಮೂಲಕ ಜಿಲ್ಲೆಯಲ್ಲಿ ಪ್ರತಿನಿತ್ಯ 10-12 ಸಾವಿರ ಲಸಿಕೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವಾಗಿದೆ ಎಂದು ಸಾರ್ವಜನಿಕರು ಅನವಶ್ಯಕವಾಗಿ ಸಂಚರಿಸುವುದು, ಗುಂಪುಗೂಡುವುದನ್ನು ಮಾಡಬಾರದು. ಸಂಭ್ಯಾವ್ಯ ಮೂರನೇ ಅಲೆಯ ಬಗ್ಗೆ ಹೆಚ್ಚು ಜಾಗೃತರಾಗಬೇಕಿದೆ. ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದರು.

ADVERTISEMENT

ನಗರದ ಜಿಲ್ಲಾ ರಂಗಮಂದಿರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರು ಸೋಂಕಿನಿಂದ ಮರಣ ಹೊಂದಿರುವ ಉದಾಹರಣೆ ಕಡಿಮೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು’ ಎಂದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿತ್ತು.

‘ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಜೂನ್ 21ರಿಂದ ದೇಶದಾದ್ಯಂತ ಉಚಿತ ಲಸಿಕಾ ಅಭಿಯಾನ ನಡೆಯುತ್ತಿದೆ. ಸ್ಯಾನಿಟೈಸರ್ ಬಳಸಿ, ಮುಖಗವಸು ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಇದರಿಂದ ಸೋಂಕಿನ ಸರಪಳಿ ತುಂಡರಿಸಲು ಸಾಧ್ಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಆರ್.ಎಚ್‍.ಒ ಡಾ.ರಮೇಶ ರಾವ್ ಇದ್ದರು.

‘ಸೀಬರ್ಡ್‌’ನಲ್ಲಿ ಲಸಿಕೆ:

ಕಾರವಾರದ ‘ಸೀಬರ್ಡ್’ ನೌಕಾನೆಲೆಯಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಕೋವಿಡ್ ಲಸಿಕಾ ಮೇಳವನ್ನು ಆಯೋಜಿಸಲಾಯಿತು.‌

18ರಿಂದ 45 ವರ್ಷದ ಒಳಗಿನ ಸಿವಿಲಿಯನ್ ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ನೌಕಾನೆಲೆಯ 1,600 ಮಂದಿ ಗುತ್ತಿಗೆ ನೌಕರರು, ತಾತ್ಕಾಲಿಕ ಸಿಬ್ಬಂದಿ ಪ್ರಯೋಜನ ಪಡೆದುಕೊಂಡರು.

---------

* ಕಾರವಾರ ತಾಲ್ಲೂಕಿನ 28 ಕೇಂದ್ರಗಳಲ್ಲಿ 5,900 ಜನರಿಗೆ, ಅಂಕೋಲಾದಲ್ಲಿ 1,000 ಜನರಿಗೆ ಸೋಮವಾರ ಲಸಿಕೆ ನೀಡಲಾಗಿದೆ. ಈ ಅಭಿಯಾನ ಮುಂದುವರಿಯಲಿದೆ.

- ರೂಪಾಲಿ ನಾಯ್ಕ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.