ADVERTISEMENT

ಕಾರವಾರ: ಗೋಕರ್ಣದಲ್ಲಿ ಭಕ್ತರ ಸಂಖ್ಯೆ ಗಣನೀಯ ಇಳಿಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:42 IST
Last Updated 11 ಮಾರ್ಚ್ 2021, 16:42 IST
ಗೋಕರ್ಣದ ಪುರಾಣ ಪ್ರಸಿದ್ಧ ಶಿವನ ಆತ್ಮಲಿಂಗಕ್ಕೆ ಶಿವರಾತ್ರಿ ಅಂಗವಾಗಿ ಭಕ್ತರು ಗುರುವಾರ ಪೂಜೆ ಸಲ್ಲಿಸಿದರು.
ಗೋಕರ್ಣದ ಪುರಾಣ ಪ್ರಸಿದ್ಧ ಶಿವನ ಆತ್ಮಲಿಂಗಕ್ಕೆ ಶಿವರಾತ್ರಿ ಅಂಗವಾಗಿ ಭಕ್ತರು ಗುರುವಾರ ಪೂಜೆ ಸಲ್ಲಿಸಿದರು.   

ಗೋಕರ್ಣ/ ಕಾರವಾರ: ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಈ ವರ್ಷ ಶಿವರಾತ್ರಿಗೆ ಭಕ್ತರ ಸಂಖ್ಯೆ ಅತ್ಯಂತ ಕಡಿಮೆಯಾಗಿತ್ತು. ಕೋವಿಡ್ ಕಾರಣದಿಂದಾಗಿ ದೂರದ ಊರುಗಳಿಂದ ಶಿವನ ಆರಾಧಕರು ಬಾರದ ಕಾರಣ ದೇವಸ್ಥಾನದ ಆವರಣದಲ್ಲಿ ಗೌಜು ಗದ್ದಲ ಇರಲಿಲ್ಲ.

ಸುತ್ತಮುತ್ತಲಿನ ಹಳ್ಳಿಯ ಜನರು ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿದರು. ಮಧ್ಯರಾತ್ರಿಯಿಂದಲೇ ಶ್ರೀ ಮಹಾಗಣಪತಿ ಮತ್ತು ಮಹಾಬಲೇಶ್ವರನ ಪೂಜೆಗಾಗಿ ಸಾಲಿನಲ್ಲಿ ನಿಂತು ಬೆಳಗಿನ ಜಾವ ಪೂಜೆ ಸಲ್ಲಿಸಿದರು. ಸ್ಥಳೀಯರನ್ನು ಹೊರತಾಗಿ ಬೇರೆ ಊರುಗಳಿಂದ ಬಂದ ಕೇವಲ ಮೂರ್ನಾಲ್ಕು ಸಾವಿರ ಭಕ್ತರಿದ್ದರು. ಹಲವು ಭಕ್ತರು ಮುಖ್ಯ ಸಮುದ್ರದ ತೀರದಲ್ಲಿ ಮರಳಿನ ಲಿಂಗ ಮಾಡಿ ಪೂಜೆ ಸಲ್ಲಿಸಿದರು.

ಕಾರವಾರದ ವಿವಿಧ ಶಿವಾಲಯಗಳಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿಯ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರ ಸಂಖ್ಯೆಯುಕೋವಿಡ್ ಕಾರಣದಿಂದ ಹಿಂದಿನ ವರ್ಷಗಳಿಗಿಂತ ಕಡಿಮೆ ಇದ್ದುದು ಕಂಡುಬಂತು.

ADVERTISEMENT

ನಗರದ ಶೇಜವಾಡದಲ್ಲಿರುವ ಪುರಾಣ ಪ್ರಸಿದ್ಧ ಶೆಜ್ಜೇಶ್ವರ ದೇಗುಲಕ್ಕೆ ಭಕ್ತರು ಬೆಳಿಗ್ಗೆಯಿಂದಲೇ ಬಂದು, ಪೂಜೆ ಸಲ್ಲಿಸಿದರು. ಹರಕೆ ಹೇಳಿಕೊಂಡಿದ್ದವರು ರುದ್ರಾಭಿಷೇಕ, ಹಣ್ಣು ಕಾಯಿ ಸೇವೆಗಳನ್ನು ದೇವರಿಗೆ ಅರ್ಪಿಸಿದರು. ಬಿಲ್ವಪತ್ರೆ ಅರ್ಪಣೆ, ಪಂಚಾಮೃತ ಸೇವೆಗಳೂ ಸಾಂಪ್ರದಾಯಿಕವಾಗಿ ನೆರವೇರಿದವು. ದೇಗುಲದಲ್ಲಕಿರುವ ಶಿವಲಿಂಗವನ್ನು ಸ್ಪರ್ಶಿಸಿ ನಮಸ್ಕರಿಸಲು ಎರಡು ವರ್ಷಗಳಿಂದ ಅವಕಾಶವಿಲ್ಲ. ಹಾಗಾಗಿ ಭಕ್ತರು ಹೊರಗಿನಿಂದಲೇ ಭಕ್ತಿ ಸಮರ್ಪಿಸಿದರು.

ನಗರದ ಬಾಡದಲ್ಲಿರುವ ಮಹಾದೇವ ದೇವಸ್ಥಾನದಲ್ಲೂ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಿ ಭಕ್ತಿ ಸಲ್ಲಿಸಿದರು. ಪ್ರತಿ ವರ್ಷ ಶಿವರಾತ್ರಿಯಂದು ಈ ದೇಗುಲದಲ್ಲಿ ಸಂಗೀತ ಕಾರ್ಯಕ್ರಮದ ಆಕರ್ಷಣೆ ಇರುತ್ತಿತ್ತು. ಆದರೆ, ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಇರಲಿಲ್ಲ.

ಉಳಿದಂತೆ, ವಿವಿಧ ದೇಗುಲಗಳಲ್ಲಿ ರುದ್ರ ಪಾರಾಯಣ, ಶಿವಪೂಜೆ ಮುಂತಾದ ವಿಶೇಷ ಸೇವೆಗಳನ್ನು ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.