ಮುಂಡಗೋಡ: ಹಿಂದುಳಿದ ವರ್ಗಗಳ ಇಲಾಖೆಯಡಿ ಕೈಗೊಂಡಿರುವ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ತಾಲ್ಲೂಕಿನ ವಿವಿಧ ಕ್ಯಾಂಪ್‌ಗಳಲ್ಲಿ ನೆಲೆಸಿರುವ ಟಿಬೆಟಿಯನ್‌ರು ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ತಾಲ್ಲೂಕಿನ ನಂದಿಗಟ್ಟಾ, ಇಂದೂರ, ಹುನಗುಂದ, ಕುಸೂರ, ತಟ್ಟಿಹಳ್ಳಿ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಟಿಬೆಟಿಯನ್‌ರು ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿ ನಿರಾಶ್ರಿತರಾಗಿ ನೆಲೆಸಿದ್ದಾರೆ.
ಒಟ್ಟು ಎರಡು ಲಾಮಾ ಕ್ಯಾಂಪ್‌ಗಳ ಸಹಿತ ಕ್ಯಾಂಪ್‌ಗಳಲ್ಲಿ ಬಿಕ್ಕುಗಳು ಸಹಿತ ಇತರೆ ಟಿಬೆಟಿಯನ್‌ರು ನೆಲೆಸಿದ್ದಾರೆ. ಅವರ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ಕುಟುಂಬಗಳನ್ನು ಗುರುತಿಸಿ ಸಮೀಕ್ಷೆದಾರರಿಗೆ ಹಂಚಿಕೆ ಮಾಡಿದೆ.
ಕಳೆದ ನಾಲ್ಕು ದಿನಗಳಿಂದ ಸಮೀಕ್ಷೆದಾರರು ಟಿಬೇಟಿಯನ್ ಕ್ಯಾಂಪ್‌ಗೆ ತೆರಳಿ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದರೂ, ಅಲ್ಲಿನ ಟಿಬೆಟಿಯನ್‌ರು ʼಸಮೀಕ್ಷೆ ಕುರಿತು ಬೌದ್ಧ ಮುಖಂಡರು ನಮಗೆ ಮಾಹಿತಿ ನೀಡಿಲ್ಲ. ಆಧಾರ್ ನಂಬರ್, ಬ್ಯಾಂಕ್ ಖಾತೆ ನಂಬರ್ ತೆಗೆದುಕೊಂಡು ನಿವೇನು ಮಾಡುತ್ತೀರಿʼ ಎಂದು ಸಮೀಕ್ಷೆದಾರರಿಗೆ ಪ್ರಶ್ನಿಸುತ್ತಿದ್ದಾರೆ. ಅಲ್ಲದೇ, ಹಲವರು ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ.
ಈ ಕುರಿತು ಸಮೀಕ್ಷೆದಾರರು ತಹಶೀಲ್ದಾರ್ ಶಂಕರ ಗೌಡಿ ಅವರಿಗೆ ಸಮಸ್ಯೆ ಬಗ್ಗೆ ಗಮನಕ್ಕೆ ತಂದಿದ್ದರು. ನಂತರ, ಡೊಗುಲಿಂಗ್ ಸೊಸೈಟಿ ಚೇರಮನ್ ಅವರಿಗೆ, ರಾಜ್ಯ ಸರ್ಕಾರದ ಸಮೀಕ್ಷೆ ಕುರಿತು, ಟಿಬೇಟಿಯನ್‌ರು ಸೂಕ್ತವಾಗಿ ಸ್ಪಂದಿಸುವಂತೆ, ಪ್ರತಿ ಕ್ಯಾಂಪ್ ಮುಖಂಡರಿಂದ ಜಾಗೃತಿ ಮೂಡಿಸುವಂತೆ ಪತ್ರದ ಮೂಲಕ ತಿಳಿಸಿದ್ದರು. ಆದರೂ, ಲಾಮಾ ಕ್ಯಾಂಪ್ ಸಹಿತ ಕೆಲವೆಡೆ ಟಿಬೆಟಿಯನ್‌ರು ಮಾಹಿತಿ ನೀಡಲು ನಿರಾಕರಿಸುತ್ತಿರುವ ಘಟನೆಗಳು ಮುಂದುವರೆದಿವೆ ಎಂದು ಸಮೀಕ್ಷೆದಾರರು ದೂರಿದ್ದಾರೆ.
ʼಟಿಬೆಟಿಯನ್‌ರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಮೀಕ್ಷೆದಾರರು ಕ್ಯಾಂಪ್‌ಗಳಿಗೆ ಹೋಗಿ ಬರಿಗೈಯಲ್ಲಿ ಮರಳಬೇಕಾಗಿದೆ. ಆಯಾ ಕ್ಯಾಂಪ್‌ಗಳ ಮುಖಂಡರು ಸೂಚಿಸುವರೆಗೂ ಅವರು ಮಾಹಿತಿ ನೀಡುವುದಿಲ್ಲ ಎನ್ನುತ್ತಾರೆ. ಸಮೀಕ್ಷೆ ಮಾಡುವ ಊರುಗಳ ಪಟ್ಟಿಯಲ್ಲಿರುವ ಟಿಬೇಟಿಯನ್ ಕ್ಯಾಂಪ್‌ನ್ನು ಕೈಬಿಟ್ಟು, ಇನ್ನುಳಿದ ಕುಟುಂಬಗಳ ಸಮೀಕ್ಷೆ ಮಾಡಲು ಅವಕಾಶ ಮಾಡಿಕೊಡಬೇಕುʼ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರದೀಪ ಕುಲಕರ್ಣಿ ಆಗ್ರಹಿಸಿದರು.
‘ಜಾಗೃತಿ ಮೂಡಿಸಿ ಸಮೀಕ್ಷೆ ಪೂರ್ಣ’
ʼಟಿಬೆಟಿಯನ್ ಕ್ಯಾಂಪ್‌ಗಳಲ್ಲಿ ಸಮೀಕ್ಷೆ ಮಾಡಲು ಆರಂಭದ ದಿನಗಳಲ್ಲಿ ಸ್ವಲ್ಪ ತೊಂದರೆಯಾಗಿತ್ತು. ಅಲ್ಲಿನ ಮುಖಂಡರಿಗೆ ಸಮೀಕ್ಷೆ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಕೆಲವು ಕುಟುಂಬಗಳ ಮಾಹಿತಿ ಅಪಲೋಡ್ ಆಗಿದೆ. ಅವರಲ್ಲಿ ಜಾಗೃತಿ ಮೂಡಿಸಿ ಸಮೀಕ್ಷೆ ಪೂರ್ಣಗೊಳಿಸಲಾಗುವುದು’ ಎಂದು ತಹಶೀಲ್ದಾರ್ ಶಂಕರ ಗೌಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.