ADVERTISEMENT

ಮೂಲಸೌಕರ್ಯ ನಿರೀಕ್ಷೆಯಲ್ಲಿ ‘ದೇವಭೂಮಿ’

ಕುಗ್ರಾಮಗಳೇ ಹೆಚ್ಚಿರುವ ಮಂಜುಗುಣಿ ಗ್ರಾಮ ಪಂಚಾಯ್ತಿ

ಗಣಪತಿ ಹೆಗಡೆ
Published 14 ಜೂನ್ 2022, 19:30 IST
Last Updated 14 ಜೂನ್ 2022, 19:30 IST
ಶಿರಸಿ ತಾಲ್ಲೂಕಿನ ಮಂಜುಗುಣಿಯ ವೆಂಕಟರಮಣ ದೇವಾಲಯ
ಶಿರಸಿ ತಾಲ್ಲೂಕಿನ ಮಂಜುಗುಣಿಯ ವೆಂಕಟರಮಣ ದೇವಾಲಯ   

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಖ್ಯಾತಿ ಪಡೆದ ಗ್ರಾಮ ತಾಲ್ಲೂಕಿನ ಮಂಜುಗುಣಿ. ವೆಂಕಟರಮಣ ನೆಲೆನಿಂತ ‘ದೇವಭೂಮಿ’ಯಲ್ಲಿ ಆಸ್ಪತ್ರೆ, ನ್ಯಾಯಬೆಲೆ ಅಂಗಡಿ ಸೇರಿ ಹಲವು ಸೌಕರ್ಯಗಳ ಕೊರತೆ ಕಾಡುತ್ತಿದೆ.

ದಟ್ಟ ಅಡವಿಯ ನಡುವೆ ಇರುವ ಹತ್ತಾರು ಕುಗ್ರಾಮಗಳನ್ನು ಮಂಜುಗುಣಿ ಗ್ರಾಮ ಪಂಚಾಯ್ತಿ ಒಳಗೊಂಡಿದೆ. ಅಲ್ಲಲ್ಲಿ ಮನೆಗಳಿರುವ ಗ್ರಾಮದಲ್ಲಿ ಸಮರ್ಪಕ ರಸ್ತೆ ಇಲ್ಲದಿರುವುದೇ ದೊಡ್ಡ ಕೊರಗು. ನೆಕ್ಕರಿಕೆ, ತೆಪ್ಪಾರ, ಕಲ್ಲಳ್ಳಿ, ಕಳುಗಾರ ಸೇರಿದಂತೆ ಹಲವು ಗ್ರಾಮಗಳಿಗೆ ಮೊಬೈಲ್ ನೆಟ್‍ವರ್ಕ್ ಕೂಡ ಸರಿಯಾಗಿ ಸಿಗದು.

ಈ ಮೊದಲು ಬಂಡಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಮಂಜುಗುಣಿ ಸೇರಿಕೊಂಡಿತ್ತು. ಕಲ್ಲಳ್ಳಿ, ಇನ್ನಿತರ ಕೆಲವು ಮಜರೆಗಳು ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದವು. 2015ರ ಬಳಿಕ ಹೊಸದಾಗಿ ಮಂಜುಗುಣಿ ಗ್ರಾಮ ಪಂಚಾಯ್ತಿ ರಚಿಸಲಾಗಿದೆ. ಏಳು ವರ್ಷ ಕಳೆದರೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಸೌಕರ್ಯ ಒದಗಿಸುವುದು ಸಾಧ್ಯವಾಗಿಲ್ಲ.

ADVERTISEMENT

‘ಕಲ್ಲಳ್ಳಿ, ನೆಕ್ಕರಿಕೆ ಗ್ರಾಮದಲ್ಲಿ ಕಚ್ಚಾರಸ್ತೆಗಳೇ ಹೆಚ್ಚಿವೆ. ಉಳಿದ ಗ್ರಾಮದಲ್ಲೂ ಇದೇ ಸಮಸ್ಯೆ ಇದೆ. ಮಳೆಗಾಲದಲ್ಲಿ ಕೆಸರುಗದ್ದೆಯಾಗುವ ರಸ್ತೆಯಲ್ಲಿ ಓಡಾಟ ನಡೆಸಲು ಸಾಧ್ಯವಾಗದು. ಶಾಲೆಗೆ ತೆರಳುವವರಿಗೆ, ಅನಾರೋಗ್ಯಕ್ಕೆ ತುತ್ತಾದವರನ್ನು ಕರೆದೊಯ್ಯಲು ಸಾಹಸ ಮಾಡಬೇಕಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ನರೇಶ್ ಹೆಗಡೆ.

‘ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸುತ್ತಮುತ್ತ ಗ್ರಾಮಗಳೂ ಹಲವಾರಿವೆ. ಆದರೆ ಅನಾರೋಗ್ಯ ಸಮಸ್ಯೆ ಎದುರಾದರೆ 30 ಕಿ.ಮೀ. ದೂರದ ರೇವಣಕಟ್ಟಾಕ್ಕೆ ತೆರಳಬೇಕಾಗುತ್ತದೆ. ಮಂಜುಗುಣಿಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಇದಕ್ಕಾಗಿ ಗ್ರಾಮದಲ್ಲಿಒಂದು ಎಕರೆ ಸಮುದಾಯ ಭೂಮಿಯೂ ಲಭ್ಯವಿದೆ’ ಎನ್ನುತ್ತಾರೆ ಮಂಜುಗುಣಿ ಗ್ರಾಮ ಪಂಚಾಯ್ತಿ ಸದಸ್ಯ ಗಣಪತಿ (ನಾರಾಯಣ) ನಾಯಕ.

‘ಶೇ 60ಕ್ಕಿಂತ ಹೆಚ್ಚು ಬಡ ಕೂಲಿಕಾರ್ಮಿಕರೇ ಈ ಭಾಗದಲ್ಲಿದ್ದಾರೆ. ಸಣ್ಣ ಹಿಡುವಳಿದಾರರ ಸಂಖ್ಯೆಯೇ ಹೆಚ್ಚಿದೆ. ಪಡಿತರ ಪಡೆಯಲು ದೂರದ ರಾಗಿಹೊಸಳ್ಳಿಗೆ ಹೋಗಬೇಕಾಗುತ್ತಿದೆ. ಅದರ ಬದಲು ಮಂಜುಗುಣಿಯಲ್ಲೇ ಪಡಿತರ ಒದಗಿಸಲು ನ್ಯಾಯಬೆಲೆ ಅಂಗಡಿ ತೆರೆಯಬೇಕು’ ಎಂದು ಒತ್ತಾಯಿಸಿದರು.

ಅನುದಾನ ಸಾಲದು:

‘ಮಂಜುಗುಣಿ ಭಾಗದ ಗ್ರಾಮಗಳು ವಿಸ್ತಾರವಾಗಿದ್ದರೂ ಜನಸಂಖ್ಯೆ ಕಡಿಮೆ ಇದೆ. ಬಹುತೇಕ ಅರಣ್ಯದಲ್ಲಿ ಹಾದುಹೋಗುವ ರಸ್ತೆಗಳನ್ನು ನಿರ್ಮಿಸಲು ಅನುದಾನವೂ ಹೆಚ್ಚು ಬೇಕಾಗುತ್ತದೆ. ಗ್ರಾಮ ಪಂಚಾಯ್ತಿ ಅನುದಾನ ಸಾಲುತ್ತಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿಯ ಬಹುತೇಕ ಸದಸ್ಯರು.

‘ಶಾಸಕರ ವಿಶೇಷ ಅನುದಾನ ಸೇರಿದಂತೆ ವಿಶೇಷ ಅನುದಾನ ಬಳಕೆ ಮಾಡಿ ಗ್ರಾಮದಲ್ಲಿ ಪ್ರತಿ ವರ್ಷ ಹೆಚ್ಚಿನ ಪ್ರಮಾಣದ ರಸ್ತೆ ನಿರ್ಮಿಸಲಾಗುತ್ತಿದೆ. ಗ್ರಂಥಾಲಯ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ’ ಎನ್ನುತ್ತಾರೆ ಪಿಡಿಒ ಸೌಮ್ಯ ಹೆಗಡೆ.

–––––––––––

ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ ಮಂಜುಗುಣಿಯಲ್ಲಿ ಮೊಬೈಲ್ ನೆಟ್‍ವರ್ಕ್ ಸಮರ್ಪಕವಾಗಿಲ್ಲ. ಕರೆಂಟ್ ಹೋದರೆ ನೆಟ್‍ವರ್ಕ್ ಕಡಿತವಾಗುತ್ತಿದ್ದು, ಈ ಸಮಸ್ಯೆ ಪರಿಹಾರವಾಗಬೇಕು.

ಗಣಪತಿ ನಾಯಕ,ಗ್ರಾಮ ಪಂಚಾಯ್ತಿ ಸದಸ್ಯ

---------------

ಅಂಕಿ–ಅಂಶ

690: ಮನೆಗಳ ಸಂಖ್ಯೆ

2,500:ಮಂಜುಗುಣಿ ಗ್ರಾ.ಪಂ. ಜನಸಂಖ್ಯೆ

5:ಗ್ರಾಮಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.