ADVERTISEMENT

ಕಾರವಾರ: ಪ್ರವಾಸೋದ್ಯಮಕ್ಕೆ ‘ಸೌಕರ್ಯ ಬರ’ ಏಟು

ತಾಣಗಳ ಬಳಿ ನೀರು, ನೆರಳಿಗೂ ತತ್ವಾರ:ಕೊರತೆಗೆ ಪ್ರವಾಸಿಗರ ಅಸಮಾಧಾನ

ಗಣಪತಿ ಹೆಗಡೆ
Published 13 ಅಕ್ಟೋಬರ್ 2025, 3:08 IST
Last Updated 13 ಅಕ್ಟೋಬರ್ 2025, 3:08 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ನಿಲುಗಡೆ ಮಾಡಿರುವ ವಾಹನಗಳು
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ನಿಲುಗಡೆ ಮಾಡಿರುವ ವಾಹನಗಳು   

ಕಾರವಾರ: ಪ್ರವಾಸೋದ್ಯಮ ಕ್ಷೇತ್ರ ಜಿಲ್ಲೆಯ ಜೀವಾಳ. ಆದರೂ, ಇಲ್ಲಿನ ಪ್ರವಾಸಿ ತಾಣಗಳಲ್ಲಿನ ಸೌಕರ್ಯ ಕೊರತೆ ಈ ಕ್ಷೇತ್ರದ ಪ್ರಗತಿಗೆ ಏಟು ನೀಡುತ್ತಿದೆ ಎಂಬ ಪ್ರವಾಸಿಗರ ದೂರು ಹೆಚ್ಚುತ್ತಲೇ ಇದೆ.

ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜಿಲ್ಲೆಯ ಕಡಲತೀರ, ಜಲಪಾತಗಳಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದು ಜನರ ದೂರು. ಮುರಿದ ವೀಕ್ಷಣಾ ಗೋಪುರ, ಸ್ನಾನಗೃಹ ಮತ್ತು ಶೌಚಾಲಯಗಳ ಕೊರತೆ, ಸೀಮಿತ ಸಂಖ್ಯೆಯಲ್ಲಿ ಕಾಣಸಿಗುವ ಜೀವರಕ್ಷಕ ಸಿಬ್ಬಂದಿ... ಹೀಗೆ ಹತ್ತಾರು ಕೊರತೆಗಳು ಈ ದೂರನ್ನು ಪುಷ್ಟೀಕರಿಸುತ್ತಿವೆ.

‘ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ದಶಕದ ಹಿಂದೆ ಅಳವಡಿಸಿದ್ದ ಶೆಲ್ಟರ್‌ಗಳು ಮುರಿದು ಬಿದ್ದಿವೆ. ರಾಕ್ ಗಾರ್ಡನ್ ನಿರ್ವಹಣೆ ಇಲ್ಲದೆ ಹಾಳಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸದಾಗಿ ಯಾವೊಂದೂ ಯೋಜನೆ ಕೈಗೊಂಡಿಲ್ಲ. ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣವಾದ ಬಳಿಕವಂತೂ ಪ್ರವಾಸಿಗರು ಕಾರವಾರದಲ್ಲಿ ನಿಲುಗಡೆಯಾಗುವುದೇ ಕಡಿಮೆಯಾಗಿದೆ’ ಎನ್ನುತ್ತಾರೆ ಬಾಲಕೃಷ್ಣ ಮಾಳ್ಸೇಕರ.

ADVERTISEMENT

ಶಿರಸಿ ತಾಲ್ಲೂಕಿನಲ್ಲಿ ಜಲಪಾತಗಳು ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿದ್ದರೂ, ಬಹುತೇಕ ಜಲಪಾತಗಳ ಬಳಿ ಮೂಲಸೌಲಭ್ಯಗಳ ಕೊರತೆ ಇದೆ. ಶಿರ್ಲೇಬೈಲ್ ಜಲಪಾತಕ್ಕೆ ಹೋಗಲು ಸುಮಾರು 2 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸವಾರರು ತೆರಳಲು ಕಷ್ಟಪಡಬೇಕಿದೆ. ಶಿವಗಂಗಾ ಜಲಪಾತದ ಬಳಿ ಶೌಚಾಲಯ, ವೀಕ್ಷಾ ಗೋಪುರಗಳು ಇದ್ದೂ ಇಲ್ಲದಂತಿದೆ.

‘ಬನವಾಸಿ ಮಧುಕೇಶ್ವರ ದೇವಾಲಯ, ಶಿರಸಿ ಮಾರಿಕಾಂಬಾ ದೇವಾಲಯಗಳ ಬಳಿ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ, ವಸತಿಗೆ ಯಾತ್ರಿ ನಿವಾಸ ಇಲ್ಲ. ಹೀಗಾಗಿ ಹೋಟೆಲ್ ಮೊರೆ ಹೋಗುವುದು ಅನಿವಾರ್ಯ’ ಎನ್ನುತ್ತಾರೆ ಪ್ರವಾಸಿಗ ವಿನೋದ ಪಾಟೀಲ.

‘ಯಲ್ಲಾಪುರ ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಹೋಗುವ ರಸ್ತೆ ವಿಪರೀತ ಹಾಳಾಗಿದೆ. ಮಾಗೋಡು ಜಲಪಾತ, ಜೇನುಕಲ್ಲು ಗುಡ್ಡಕ್ಕೆ ಹೋಗುವ ರಸ್ತೆ ಹಾಳಾಗಿದ್ದಲ್ಲದೆ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ’ ಎನ್ನುತ್ತಾರೆ ಕಾಳಮ್ಮ ನಗರದ ಈಶ್ವರ ನಾಯ್ಕ.

ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಜಲಸಾಹಸ ಕ್ರೀಡೆಗಳು ಆರಂಭಗೊಂಡಿದ್ದು, ಸಾವಿರಾರು ಪ್ರವಾಸಿಗರು ಇತ್ತ ಬರುತ್ತಿದ್ದಾರೆ. ಪ್ರವಾಸಿಗರಿಗಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಸಮುದ್ರದಲ್ಲಿ ಮಿಂದೆದ್ದು ಸುಸ್ತಾಗುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ.‌ ವಾಹನ ನಿಲುಗಡೆಗೂ ವ್ಯವಸ್ಥಿತ ಜಾಗವಿಲ್ಲ ಎಂಬುದು ಪ್ರವಾಸಿಗರ ದೂರು.

ಗೋಕರ್ಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ವಾರಾಂತ್ಯಗಳಲ್ಲಂತೂ ವಸತಿ ಗೃಹಗಳೆಲ್ಲ ತುಂಬಿ ಹೋಗಿದ್ದು, ಅನೇಕ ಪ್ರವಾಸಿರು ಕೊಠಡಿ ಸಿಗದೇ ತಿರುಗಿ ಕುಮಟಾ, ಅಂಕೋಲಾದತ್ತ ಸಾಗಬೇಕಾಗುತ್ತಿದೆ. ಕುಡ್ಲೆ ಬೀಚ್, ಓಂ ಬೀಚುಗಳಲ್ಲಿ ಕಿಲೋ ಮೀಟರ್ ದೂರದಿಂದಲೇ ವಾಹನ ನಿಲ್ಲಿಸಲಾಗುತ್ತಿದೆ. ಉಳಿಯಲು ಸ್ಥಳವಿಲ್ಲದೇ ಕಡಲತೀರದಲ್ಲಿ ಜನ ಮಲಗುತ್ತಿರುವುದು ಕಾಣಸಿಗುತ್ತದೆ.

‘ವಾಹನ ಪಾರ್ಕಿಂಗ್ ಸ್ಥಳಕ್ಕೆ ಮುಖ್ಯ ದೇವಸ್ಥಾನದ ಎದುರಿನಿಂದಲೆ ಸಾಗಬೇಕಾಗಿದ್ದು, ದೇವಸ್ಥಾನಕ್ಕೆ ಹೋಗುವ ಪ್ರವಾಸಿಗರಿಗೆ ಇದರಿಂದ ತೊಂದರೆಯಾಗುತ್ತಿದೆ. ಪ್ರವಾಸಿಗರಿಂದ ಹೇರಳವಾಗಿ ಆದಾಯ ಬರುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಸ್ವಚ್ಛತೆ ಕಾಯ್ದುಕೊಳ್ಳಲು, ನೀರು ನೆರಳು ಒದಗಿಸಲು ಲಕ್ಷ್ಯವಹಿಸುತ್ತಿಲ್ಲ’ ಎಂಬುದು ಸ್ಥಳೀಯರ ದೂರು.

‘ಪಾರ್ಕಿಂಗ್ ಸ್ಥಳದಲ್ಲಿ ಹಣವನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಅಲ್ಲಿ ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಮುಖ್ಯ ಕಡಲತೀರದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಪ್ರವಾಸಿಗರ ಉಪಯೋಗಕ್ಕೆ ಬರುತ್ತಿಲ್ಲ. ಪ್ರವಾಸಿಗರಿಗೆ ಬಟ್ಟೆ ಬದಲಿಸಲು ಸರಿಯಾಗಿ ವ್ಯವಸ್ಥೆಯೇ ಇಲ್ಲ’ ಎಂಬುದು ಪ್ರವಾಸಿಗ ಪ್ರವೀಣ ಎಚ್.ಎಸ್. ದೂರು.

ಅಂಕೋಲಾ ತಾಲ್ಲೂಕಿನಲ್ಲಿರುವ ವಿಭೂತಿ ಜಲಪಾತಕ್ಕೆ ರಜಾ ದಿನಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಬರುತ್ತೆ. ಆದರೆ ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಕೇವಲ ಒಬ್ಬ ಕಾವಲುಗಾರ ಬಿಟ್ಟರೆ ಯಾರೂ ಇಲ್ಲ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಪ್ರವಾಸಿಗರ ಹತ್ತಿರ ಪಾರ್ಕಿಂಗ್ ಶುಲ್ಕವನ್ನು ಪಡೆಯುವ ಗ್ರಾಮ ಅರಣ್ಯ ಸಮಿತಿಯವರು ಜಲಪಾತ ಸುತ್ತಲಿನ ಪ್ರದೇಶವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಮೂಲಸೌಕರ್ಯ ಒದಗಿಸಬೇಕು ಎನ್ನುತ್ತಾರೆ ಸ್ಥಳೀಯರು.

ಕುಮಟಾ ತಾಲ್ಲೂಕಿನ ಬಾಡ, ಕಾಗಾಲ, ಅಘನಾಶಿನಿ ಮಾರ್ಗದ ಅರಬ್ಬಿ ಸಮುದ್ರ ತೀರದಲ್ಲಿ ಅನೇಕ ರೆಸಾರ್ಟ್‌ಗಳಿದ್ದು, ಅವುಗಳನ್ನು ಸಂಪರ್ಕಿಸುವ ಕುಮಟಾ-ಅಘನಾಶಿನಿ ರಸ್ತೆ ಅಲ್ಲಲ್ಲಿ ಹಾಳಾಗಿದೆ. ರಜೆ ಇದ್ದರೆ ಮಾತ್ರ ಇಲ್ಲಿಯ ರೆಸಾರ್ಟ್‍ಗಳು ಭರ್ತಿಯಾಗುತ್ತವೆ ಎನ್ನುತ್ತಾರೆ ರೆಸಾರ್ಟ್ ಮಾಲೀಕ ಸದಾನಂದ ಹರಿಕಂತ್ರ.

ದಾಂಡೇಲಿಯ ಸಿಂಥೇರಿ ರಾಕ್ಸ್, ಉಳವಿ, ಮೊಸಳೆ ಉದ್ಯಾನ, ಮೌಳಂಗಿ ಉದ್ಯಾನ, ಆನೆ ಶಿಬಿರ, ಕುಳಗಿ ನೇಚರ್ ಕ್ಯಾಂಪ್ ಸೇರಿದಂತೆ ಹಲವಾರು ಪ್ರವಾಸಿ ತಾಣಗಳ ಮಾರ್ಗಗಳಲ್ಲಿ ಮಾರ್ಗಸೂಚಿ ಫಲಕಗಳು ಇಲ್ಲದಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಲು ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರ ಸ್ಥಾಪನೆ ಅವಶ್ಯವಿದೆ. ಹಲವು ಬಾರಿ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಅಟಲ್ ಅಭಿಮಾನಿ ಸಂಘದ ವಿಷ್ಣು ನಾಯರ್.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ರವಿ ಸೂರಿ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಶಿರಸಿ ತಾಲ್ಲೂಕಿನ ಶಿವಗಂಗಾ ಜಲಪಾತ ವೀಕ್ಷಣಾ ಗೋಪುರ ಕುಸಿದಿದೆ
ಮುರುಡೇಶ್ವರ ಕಡಲತೀರದಲ್ಲಿ ನೆರೆದಿರುವ ಪ್ರವಾಸಿಗರು
ಗೋಕರ್ಣದ ಮುಖ್ಯ ಕಡಲತೀರದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹಲವು ತಿಂಗಳುಗಳಿಂದ ಹಾಳಾದ ಸ್ಥಿತಿಯಲ್ಲೇ ಇದೆ
ಪ್ರವಾಸಿ ತಾಣಗಳಲ್ಲಿ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ
ಮಂಗಳಗೌರಿ ಭಟ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ
ಸಾಲು ಸಾಲು ರಜೆಯ ಸಮಯದಲ್ಲಿ ಮುರುಡೇಶ್ವರಕ್ಕೆ ಆಗಮಿಸುವ ಪ್ರವಾಸಿಗರಿಗೆ ವಾಹನ ನಿಲುಗಡೆ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರವಾಸೋದ್ಯಮ ಇಲಾಖೆ ಸೌಕರ್ಯ ಕಲ್ಪಿಸಬೇಕು
ಸಂತೋಷ ನಾಯ್ಕ ಮುರುಡೇಶ್ವರ ನಿವಾಸಿ
ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಂಡಮಯ ರಸ್ತೆಯೇ ತೊಡಕಾಗಿದೆ. ರಸ್ತೆ ಅಭಿವೃದ್ಧಿಗೊಳಿಸುವಂತೆ ಮನವಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಗೋಪಾಲ ಗೌಡ ರೆಸಾರ್ಟ್ ಮಾಲೀಕ ಗೋಕರ್ಣ

ಹದಗೆಟ್ಟ ರಸ್ತೆ..

ಬರಲು ಹಿಂದೇಟು ‘ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರವಾಸಿಗರು ಕೊಠಡಿಯನ್ನೂ ಮುಂಗಡವಾಗಿ ಕಾದಿರಿಸುತ್ತಾರೆ. ಆದರೆ ಕೊನೇಕ್ಷಣದಲ್ಲಿ ಅವುಗಳನ್ನು ರದ್ದುಪಡಿಸುತ್ತಿದ್ದಾರೆ. ವಿಚಾರಿಸಿದರೆ ಪ್ರವಾಸಿ ತಾಣಗಳ ರಸ್ತೆ ಹಾಳಾಗಿದ್ದರಿಂದ ಸದ್ಯ ಪ್ರವಾಸ ಮುಂದೂಡುತ್ತಿದ್ದೇವೆ ಎನ್ನುತ್ತಾರೆ’. ಹೀಗೆ ರಸ್ತೆಗಳ ದುಸ್ಥಿತಿಯಿಂದ ಪ್ರವಾಸೋದ್ಯಮಕ್ಕೆ ಏಟು ಬೀಳುತ್ತಿರುವುದನ್ನು ಗೋಕರ್ಣದ ರೆಸಾರ್ಟ್ ಮಾಲೀಕರೊಬ್ಬರು ವಿವರಿಸಿದರು. ಅತಿಯಾದ ಮಳೆಯಿಂದ ಜಿಲ್ಲೆಯಲ್ಲಿ ಹಾದುಹೋದ ರಾಷ್ಟ್ರೀಯ ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳ ಸ್ಥಿತಿಯಂತೂ ಹೇಳತೀರದಷ್ಟು ಹಾಳಾಗಿದೆ. ಇದು ಪ್ರವಾಸಿಗರು ಬರಲು ಹಿಂದೇಟು ಹಾಕಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ದೂರು.

ಹೆದ್ದಾರಿಯಲ್ಲಿ ವಾಹನ ದಟ್ಟಣೆ

ಹೊನ್ನಾವರ ತಾಲ್ಲೂಕಿನ ಕಾಸರಕೋಡ್ ಇಕೋ ಬೀಚ್ ಅಪ್ಸರಕೊಂಡ ಸೇರಿದಂತೆ ವಿವಿಧ ಪ್ರದೇಶಗಳು ಪ್ರವಾಸಿತಾಣಗಳಾಗಿ ರೂಪುಗೊಂಡಿವೆ. ಶರಾವತಿ ನದಿಯಲ್ಲಿನ ದೋಣಿ ವಿಹಾರ ಪ್ರವಾಸಿಗರು ಹಾಗೂ ಮದುವೆ ಪೂರ್ವದ ವೀಡಿಯೊ ಶೂಟಿಂಗ್ ಪ್ರಿಯರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುತ್ತಿವೆ. ವಾರಾಂತ್ಯದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚುತ್ತಿದ್ದು ಇದರಿಂದ ತಾಲ್ಲೂಕಿನ ಜನರು ಎದುರಿಸುತ್ತಿರುವ ಸಮಸ್ಯೆಗಳು ರೇಜಿಗೆ ಹುಟ್ಟಿಸಿವೆ. ಚತುಷ್ಪಥ ಕಾಮಗಾರಿಯ ವಿಳಂಬ ಹೊಂಡ ಬಿದ್ದ ಕಿರಿದಾದ ರಸ್ತೆಗಳು ಸಂಚಾರ ದಟ್ಟಣೆ ಜನರನ್ನು ಹೈರಾಣಾಗಿಸಿದೆ. ಶರಾವತಿ ನದಿಯ ಬೋಟಿಂಗ್ ವ್ಯವಸ್ಥೆ ವಿಶೇಷವಾಗಿ ತಗ್ಗುಪಾಳ್ಯದಲ್ಲಿ ಕೇಂದ್ರೀಕೃತವಾಗಿರುವುದರಿಂದ ಅಲ್ಲಿನ ಕಿರಿದಾದ ರಸ್ತೆಗಳಲ್ಲಿ ಪ್ರವಾಸಿ ವಾಹನಗಳ ಸಂಖ್ಯೆ ಮಿತಿಮೀರಿದ ಪರಿಣಾಮ ಹೆದ್ದಾರಿಯಲ್ಲಿ ವಾಹನಗಳು ಉದ್ದನೆಯ ಸಾಲು ಕಂಡುಬರುತ್ತಿದೆ. ‘ವಾರಾಂತ್ಯದಲ್ಲಿ ಪಟ್ಟಣದ ಹೆದ್ದಾರಿ ಹಾಗೂ ಕೆಲ ರಸ್ತೆಗಳು ವಾಹನ ದಟ್ಟಣೆಯಿಂದ ನರಕ ಸದೃಶವಾಗುತ್ತಿವೆ’ ಎಂದು ಸಾಧನಾ ಬರ್ಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.