ADVERTISEMENT

ವಾಹನ ದಟ್ಟಣೆ ಸಮಸ್ಯೆ: ಹೆದ್ದಾರಿ ಬದಿ ವಾಹನದಲ್ಲೇ ರಾತ್ರಿ ಕಳೆಯುವ ಪ್ರವಾಸಿಗರು

ಹೊಸ ವರ್ಷಾಚರಣೆ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:06 IST
Last Updated 28 ಡಿಸೆಂಬರ್ 2025, 5:06 IST
ಕುಮಟಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿರುವ ಸಂಚಾರ ದಟ್ಟಣೆ
ಕುಮಟಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿರುವ ಸಂಚಾರ ದಟ್ಟಣೆ   

ಕುಮಟಾ (ಉತ್ತರ ಕನ್ನಡ): ಹೊಸ ವರ್ಷ ಆಚರಣೆಗಾಗಿ ಕರವಳಿ ಭಾಗದ ರೆಸಾರ್ಟ್‌ಗಳಿಗೆ ಪ್ರವಾಸಿಗರ ಲಗ್ಗೆ ಇಟ್ಟಿದ್ದಾರೆ. ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ಮತ್ತು ರಾತ್ರಿ ವೇಳೆ ಸಂಚಾರ ದಟ್ಟಣೆ ಸಮಸ್ಯೆ ಬಿಗಡಾಯಿಸಿದೆ. ವಸತಿ ಸೌಲಭ್ಯ ಸಿಗದೆ ಹೆದ್ದಾರಿ ಬದಿ ವಾಹನ ನಿಲುಗಡೆ ಮಾಡಿ, ಪ್ರವಾಸಿಗರು ಅದರಲ್ಲೇ ಮಲಗಿ ರಾತ್ರಿ ಕಳೆಯುವ ಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ ಮೂಲಕ ಪಟ್ಟಣ ಪ್ರವೇಶಿಸುವ ಮಣಕಿ ಹಾಗೂ ಅಳ್ವೆಕೋಡಿವರೆಗೆ ಮಾತ್ರ ಚತುಷ್ಪಥ ಇದೆ. ಪಟ್ಟಣದಲ್ಲಿ 1.5 ಕಿ.ಮೀ. ಕಾಮಗಾರಿ ಇನ್ನೂ ಬಾಕಿ ಇದೆ. ಹೀಗಾಗಿ, ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದೆ ಎಂಬುದು ಜನರ ದೂರು.

‘ಕುಮಟಾ, ಗೋಕರ್ಣ ಭಾಗಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಗೋವಾಕ್ಕೆ ಸಂಚರಿಸುವವರೂ ಇದೇ ಮಾರ್ಗದಲ್ಲಿ ಸಾಗುತ್ತಿದ್ದು ವಾಹನ ದಟ್ಟಣೆ ಹೆಚ್ಚಿದೆ. ಕೆಲವರು ನಿಗದಿತ ಸಮಯಕ್ಕೆ ಸ್ಥಳ ತಲುಪಲಾಗದೆ ಹೆದ್ದಾರಿ ಬದಿ ರಾತ್ರಿ ವಾಹನ ನಿಲುಗಡೆ ಮಾಡಿ ಅಲ್ಲಿಯೇ ವಿಶ್ರಾಂತಿಗೆ ಜಾರುತ್ತಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಕ್ರಿಸ್‌ಮಸ್, ಹೊಸ ವರ್ಷಾಚರಣೆ ವೇಳೆ ಪ್ರತಿ ವರ್ಷ ಕುಮಟಾದಲ್ಲಿ ರೆಸಾರ್ಟ್‍ಗಳೆಲ್ಲ ಭರ್ತಿ ಆಗುತ್ತವೆ. ಕೊಠಡಿ ಸಿಗದೆ ರೆಸಾರ್ಟ್ ಆವರಣದಲ್ಲಿ ಟೆಂಟ್ ಹಾಕಿಕೊಟ್ಟು ಅಲ್ಲಿ ಪ್ರವಾಸಿಗರಿಗೆ ಮಲಗಲು ಅವಕಾಶ ಮಾಡಿಕೊಡಲಾಗುತ್ತಿದೆ. ಇನ್ನೂ ಒಂದು ವಾರ ಇದೇ ಸ್ಥಿತಿ ಮುಂದುವರಿಯಬಹುದು’ ಎಂದು ರೆಸಾರ್ಟ್ ಮಾಲೀಕ ಸದಾನಂದ ಹರಿಕಂತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊನಮಾಂವ್ ಸೇತುವೆ ಬಳಿ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಹೊಸ ಬಸ್ ನಿಲ್ದಾಣ ಬಳಿ ರೈಲ್ವೆ ಮೆಲ್ಸೇತುವೆ ಹೆದ್ದಾರಿ ವಿಸ್ತರಣೆಗೆ ತೊಡಕಾಗಿದೆ. ಅದಕ್ಕೆ ಈ ಸಮಸ್ಯೆಯಾಗಿದೆ’ ಎಂದು ಅಳ್ವೆಕೋಡಿ ನಿವಾಸಿ ಅರವಿಂದ ಪೈ ಹೇಳಿದರು.

‘ಮುಂದಿನ ಮೂರು ತಿಂಗಳಲ್ಲಿ ಕುಮಟಾ ಪಟ್ಟಣದಲ್ಲಿ ಹೆದ್ದಾರಿ ವಿಸ್ತರಣೆ ನಡೆಸಿ, ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.