ADVERTISEMENT

ಗೋಕರ್ಣದ ಓಂ ಬೀಚ್‌ನಲ್ಲಿ ‘ಸೆಲ್ಫಿ’ ತೆಗೆಯಲು ಹೋದ ಪ್ರವಾಸಿಗ ನೀರುಪಾಲು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 16:15 IST
Last Updated 21 ಆಗಸ್ಟ್ 2021, 16:15 IST
ಗೋಕರ್ಣದ ಓಂ ಬೀಚ್‌ನಲ್ಲಿ ಶನಿವಾರ ಸಮುದ್ರಕ್ಕೆ ಬಿದ್ದ ಪ್ರವಾಸಿಗರೊಬ್ಬರ ರಕ್ಷಣೆಗೆ ಜೀವರಕ್ಷಕ ಸಿಬ್ಬಂದಿ ಹಾಗೂ ಇತರರು ಧಾವಿಸಿದ ಕ್ಷಣ
ಗೋಕರ್ಣದ ಓಂ ಬೀಚ್‌ನಲ್ಲಿ ಶನಿವಾರ ಸಮುದ್ರಕ್ಕೆ ಬಿದ್ದ ಪ್ರವಾಸಿಗರೊಬ್ಬರ ರಕ್ಷಣೆಗೆ ಜೀವರಕ್ಷಕ ಸಿಬ್ಬಂದಿ ಹಾಗೂ ಇತರರು ಧಾವಿಸಿದ ಕ್ಷಣ   

ಗೋಕರ್ಣ: ಇಲ್ಲಿಯ ಓಂ ಬೀಚ್‌ನಲ್ಲಿ ಶನಿವಾರ ಬಂಡೆಯ ಮೇಲೆ ನಿಂತು ‘ಸೆಲ್ಫಿ’ ತೆಗೆಯುತ್ತಿದ್ದ ಪ್ರವಾಸಿಗರೊಬ್ಬರು ರಭಸದ ಅಲೆಯು ಬಂಡೆಗೆ ಅಪ್ಪಳಿಸಿದ್ದರಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರ ಶೇಖಪ್ಪ ಕಮಟಗಿ (35) ನೀರು ಪಾಲಾದವರು. ಒಟ್ಟು 12 ಜನರು ಶನಿವಾರ ಗೋಕರ್ಣಕ್ಕೆ ಪ್ರವಾಸ ಬಂದಿದ್ದರು. ಸಮುದ್ರ ನೋಡುತ್ತ ಬಂಡೆಯ ಮೇಲೆ ನಿಂತು ಫೋಟೊ ತೆಗೆಯುತ್ತಿದ್ದಾಗ ಈ ಅವಘಡ ನಡೆದಿದೆ.

ಸ್ಥಳದಲ್ಲೇ ಇದ್ದ ಜೀವರಕ್ಷಕ ಸಿಬ್ಬಂದಿ ರಕ್ಷಣೆಗೆ ಧಾವಿಸಿದರೂ ಅಲೆಯ ಸೆಳೆತ ಜಾಸ್ತಿ ಇದ್ದ ಕಾರಣ ಪ್ರವಾಸಿಗನನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪಡೆ ಹಾಗೂ ಜೀವ ರಕ್ಷಕ ಸಿಬ್ಬಂದಿ ನಾಪತ್ತೆಯಾದ ಪ್ರವಾಸಿಗನ ಹುಡುಕಾಟ ನಡೆಸಿದ್ದಾರೆ.

ADVERTISEMENT

‘ಬೋಯ್’ ಅಳವಡಿಕೆಗೆ ಶಿಫಾರಸು

ಕಾರವಾರ: ‘ಗೋಕರ್ಣದಲ್ಲಿ ಮುಖ್ಯ ಕಡಲತೀರ ಹಾಗೂ ಓಂ ಕಡಲತೀರದಲ್ಲಿ ವೇಗದ ಸುಳಿಗಳಿವೆ. ಅಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ‘ಬೋಯ್’ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಕಳೆದ ವರ್ಷ ಶಿಫಾರಸು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗೋಕರ್ಣದ ಈ ಕಡಲತೀರಗಳಲ್ಲಿ ಉಂಟಾಗುವ ಸುಳಿಗಳು ಮೂರು ಸೆಕೆಂಡ್‌ಗಳಲ್ಲಿ ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗುವಷ್ಟು ಪ್ರಬಲವಾಗಿವೆ. ಖಾಸಗಿ ಕಂಪನಿಯೊಂದರ ಮೂಲಕ ವೈಜ್ಞಾನಿಕವಾಗಿ ಅಧ್ಯಯನ ಮಾಡಿಸಿದಾಗ ಈ ವಿಚಾರ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.

‘ಅಲ್ಲಿ ಈಜಲು ಹೋಗುವ ಪ್ರವಾಸಿಗರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ತಿಳಿದುಕೊಳ್ಳುವ ಸಲುವಾಗಿ ಅಧ್ಯಯನ ಮಾಡಲಾಗಿದೆ. ಈ ಕಡಲತೀರಗಳಲ್ಲಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ಅಲ್ಲಿ ಬೋಯ್‌ಗಳನ್ನು ಅಳವಡಿಸಲು ಜಿಲ್ಲಾಡಳಿತಕ್ಕೆ ವರದಿ ನೀಡಲಾಗಿದೆ. ಅದರ ಜಾರಿಯುಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಗಿದೆ’ ಎಂದು ಹೇಳಿದರು.

‘ಬೋಯ್’ ಸಮುದ್ರದ ನೀರಿನಲ್ಲಿ ತೇಲುವ ಉಪಕರಣವಾಗಿದ್ದು, ನೀರಿನಲ್ಲಿ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಲು ಬಳಸಲಾಗುತ್ತದೆ. ಹಡಗುಗಳು ಬಂದರುಗಳಿಗೆ ಬರಲು ದಾರಿ ತೋರುವುದು, ಸಮುದ್ರದ ವಾತಾವರಣ ಅಧ್ಯಯನ ಮುಂತಾದ ಕಾರ್ಯಗಳಲ್ಲಿ ಬಳಕೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.