ADVERTISEMENT

ಭಟ್ಕಳ: ಬಲೆಯ ತುಂಬ ಭರಪೂರ ಮೀನು

ಏಂಡಿ ಬಲೆಗೆ ಬಿದ್ದ ಟನ್‌ಗಟ್ಟಲೆ ಮತ್ಸ್ಯರಾಶಿ: ದರವಿಲ್ಲದೇ ಮೀನುಗಾರರ ಬೇಸರ

ರಾಘವೇಂದ್ರ ಭಟ್ಟ
Published 20 ಸೆಪ್ಟೆಂಬರ್ 2019, 19:38 IST
Last Updated 20 ಸೆಪ್ಟೆಂಬರ್ 2019, 19:38 IST
ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಏಂಡಿ ಬಲೆಗೆ ಬಿದ್ದ ಮೀನುಗಳ ರಾಶಿ
ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಏಂಡಿ ಬಲೆಗೆ ಬಿದ್ದ ಮೀನುಗಳ ರಾಶಿ   

ಭಟ್ಕಳ: ಗಾಳಿ ಮಳೆ, ನೆರೆ, ಸಮುದ್ರದಲ್ಲಿ ಅಲೆಗಳ ಆರ್ಭಟದಿಂದಾಗಿ ಮೀನುಗಾರಿಕೆಗೆ ತೆರಳಲಾಗದೇ ಕೈಕಟ್ಟಿ ಕುಳಿತಿದ್ದ ಮೀನುಗಾರರಿಗೆ ಈಗ ಸುಗ್ಗಿಯೋ ಸುಗ್ಗಿ. ಸಮುದ್ರಕ್ಕೆ ಬಲೆ ಬೀಸಿದರೆ ಸಾಕು ಬಲೆಗಳ ತುಂಬಾ ಭರಪೂರ ಮೀನು. ಆದರೆ,ದರ ಕುಸಿತದಿಂದ ಮೀನುಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಮುರ್ಡೇಶ್ವರದ ಮಠದಹಿತ್ಲು ಹಾಗೂ ನವೀನ್ ಬೀಚ್ ರೆಸಾರ್ಟ್ ಸಮೀಪದ ಸಮುದ್ರದಲ್ಲಿ ಮೀನುಗಾರರು ಎರಡು ದಿನಗಳಿಂದ ಏಂಡಿ ಬಲೆ ಹರಡಿದ್ದರು. ಅದನ್ನು ದಡಕ್ಕೆ ಎಳೆದು ನೋಡಿದರೆ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಬಲೆಯಲ್ಲಿ ಟನ್‌ಗಟ್ಟಲೆ ಮೀನು ದೊರಕಿದೆ. ಅದನ್ನು ಮಾರಾಟ ಮಾಡಿತಮ್ಮ ಕಷ್ಟ ಪರಿಹರಿಸಿಕೊಳ್ಳಬಹುದು ಎಂದುಕೊಂಡಿದ್ದ ಮೀನುಗಾರರು,ಸೂಕ್ತ ದರವಿಲ್ಲದೇ ಬೇಸರಗೊಂಡಿದ್ದಾರೆ.

‘ಎರಡೂ ದಿನ ನಡೆಸಿದ ಮೀನುಗಾರಿಕೆಯಲ್ಲಿಸುಮಾರು ಎರಡು ಟನ್‌ಗಳಷ್ಟು ಮೀನುಗಳು ಸಿಕ್ಕಿವೆ. ಆದರೆ, ಆಡುಭಾಷೆಯಲ್ಲಿ ಹೇಳುವಂತೆ ಮುಟ್ಟಿ ಮೀನಿಗೆ ಕೇವಲ₹ 700ರಿಂದ ₹ 800 ದರ. ಇಷ್ಟು ಬೇಟೆಯಿಂದ ನಮಗೆ ಸಿಕ್ಕಿದ್ದು₹ 1.5ಲಕ್ಷವಷ್ಟೆ.ಈ ಮೊತ್ತವನ್ನು50ರಿಂದ 60 ಜನ ಹಂಚಿಕೊಳ್ಳಬೇಕು. ಆಗ ಒಬ್ಬರಿಗೆ ಎಷ್ಟು ಸಿಗಬಹುದು ಎಂದು ನೀವೇಲೆಕ್ಕ ಹಾಕಿ’ ಎಂದು ಸ್ಥಳೀಯ ಮೀನುಗಾರ ಗಣೇಶ ಹರಿಕಂತಕೈಚೆಲ್ಲಿದರು.

ADVERTISEMENT

ಮೀನಿಗೆ ಒಳ್ಳೆಯ ದರವಿದ್ದರೆ ಒಂದು ಮುಟ್ಟಿ ಮೀನಿಗೆ ₹ 3 ಸಾವಿರದಿಂದ₹ 4 ಸಾವಿರದವರೆಗೂ ದರವಿರುತ್ತದೆ. ಮಧ್ಯಾಹ್ನದ ವೇಳೆಗೆ ಒಂದಿಬ್ಬರು ಮೀನುಗಾರರು ದೋಣಿಯಲ್ಲಿ ಸಮುದ್ರಕ್ಕೆ ತೆರಳಿ ಏಂಡಿ ಬಲೆಯನ್ನು ಹರಡಿ ಬರುತ್ತಾರೆ. ಸಂಜೆ ಮೀನು ತುಂಬಿದ ಆ ಬಲೆಯನ್ನು ಎಳೆಯಲು ಏನಿಲ್ಲವೆಂದರೂ 50ರಿಂದ 60 ಜನರು ಬೇಕು ಎಂದು ವಿವರಿಸಿದರು.

ಪ್ರಕೃತಿ ವಿಕೋಪದಿಂದಾಗಿ ಮೀನುಗಾರರು ಸರಿಯಾಗಿ ಮೀನುಗಾರಿಕೆ ನಡೆಸದೇ ತಿಂಗಳುಗಳೇಕಳೆದಿವೆ. ಹೀಗಾಗಿ ಸಮುದ್ರದಲ್ಲಿ ಏಂಡಿ, ರಂಪಣಿ ಬಲೆಗೆ ಎಲ್ಲೆಡೆ ಲಕ್ಷಾಂತರ ಸಂಖ್ಯೆಯಲ್ಲಿ ಮೀನುಗಳು ಬೀಳುತ್ತಿವೆ.ಎಲ್ಲ ಕಡೆಭರಪೂರ ಮೀನು ಸಿಗುತ್ತಿರುವಕಾರಣಅದನ್ನು ಕೊಳ್ಳುವವರಿಲ್ಲದೇ ದರ ಕಡಿಮೆಯಾಗಿದೆ ಎಂದುಅವರು ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.