ADVERTISEMENT

ಕಾರವಾರ | ಟುಪಲೇವ್ ಅಭಿವೃದ್ಧಿ ಮೂಲೆಗುಂಪು: ಬಳಕೆಯಾಗದ ₹2 ಕೋಟಿ ಅನುದಾನ?

ಗಣಪತಿ ಹೆಗಡೆ
Published 28 ಜೂನ್ 2025, 4:50 IST
Last Updated 28 ಜೂನ್ 2025, 4:50 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಟುಪಲೇವ್ (143–ಎಂ) ಯುದ್ಧವಿಮಾನ ವಸ್ತು ಸಂಗ್ರಹಾಲಯ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಟುಪಲೇವ್ (143–ಎಂ) ಯುದ್ಧವಿಮಾನ ವಸ್ತು ಸಂಗ್ರಹಾಲಯ   

ಕಾರವಾರ: ರಾಜ್ಯದ ಮೊದಲ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿ ಜೂನ್ 29ಕ್ಕೆ ಒಂದು ವರ್ಷ ಪೂರೈಸಲಿದೆ. ಆದರೆ, ಸದ್ಯ ಬಾಗಿಲು ಮುಚ್ಚಿದ ವಸ್ತು ಸಂಗ್ರಹಾಲಯ ನೋಡಲಷ್ಟೆ ಪ್ರವಾಸಿಗರಿಗೆ ಅವಕಾಶ ಆಗುತ್ತಿದೆ.

ಯುದ್ಧವಿಮಾನ ‘ಟುಪಲೇವ್ (143–ಎಂ)’ 2017ರಲ್ಲಿ ನಿವೃತ್ತಿಯಾದ ಬಳಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು ನಿರ್ಣಯಿಸಲಾಗಿತ್ತು. ತಮಿಳುನಾಡಿನ ಅರಕ್ಕೋಣಮ್‌ನ ನೌಕಾನೆಲೆಯಲ್ಲಿದ್ದ ವಿಮಾನವನ್ನು ಕಾರವಾರದಲ್ಲಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು 2018ರಲ್ಲಿ ನಿರ್ಣಯಿಸಲಾಗಿತ್ತು.

2020ರ ಮಾರ್ಚ್ ಸುಮಾರಿಗೆ ನೌಕಾಪಡೆ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತದ ನಡುವೆ ಒಪ್ಪಂದ ಏರ್ಪಟ್ಟು ಯುದ್ಧವಿಮಾನವನ್ನು ಇಲ್ಲಿಗೆ ಸಾಗಣೆ ಮಾಡಿ, ಮ್ಯೂಸಿಯಂ ಆಗಿ ಪರಿವರ್ತಿಸುವ ಸಲುವಾಗಿ ಅಳವಡಿಸಲು ನೌಕಾದಳ ಒಪ್ಪಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಟ್ಯಾಗೋರ್ ಕಡಲತೀರದಲ್ಲಿನ ಐಎನ್ಎಸ್ ಚಪಲ್ ಯುದ್ಧನೌಕೆ ಮ್ಯೂಸಿಯಂ ಉದ್ಯಾನಕ್ಕೆ ಯುದ್ಧವಿಮಾನ ತಂದು, ಅಲ್ಲಿ ಐದು ತಿಂಗಳ ಅವಧಿಯೊಳಗೆ ಮರುಜೋಡಣೆ ಮಾಡಲಾಗಿತ್ತು.

ADVERTISEMENT

ಟುಪಲೇವ್ ಯುದ್ಧವಿಮಾನ ಮ್ಯೂಸಿಯಂ ಅಭಿವೃದ್ಧಿಗೆ ರಾಜ್ಯ ಸರ್ಕಾರವು 2020ರಲ್ಲಿ ಜಿಲ್ಲಾಡಳಿತಕ್ಕೆ ₹2 ಕೋಟಿಯಷ್ಟು ಅನುದಾನವನ್ನೂ ಬಿಡುಗಡೆ ಮಾಡಿದ್ದಾಗಿ ಅಧಿಕಾರಿಗಳು ಹೇಳಿದ್ದರು. ಈ ಅನುದಾನದಲ್ಲಿ ಉದ್ಯಾನ ಅಭಿವೃದ್ಧಿ, ಕೆಫೆಟೇರಿಯಾ ಸ್ಥಾಪನೆ ಸೇರಿದಂತೆ ವಿಶಾಖಪಟ್ಟಣಂನಲ್ಲಿರುವ ಮ್ಯೂಸಿಯಂ ಮಾದರಿಯಲ್ಲಿ ಪ್ರವಾಸಿಗರ ಆಕರ್ಷಣೆಗೆ ಯೋಜನೆ ಸಿದ್ಧಪಡಿಸಿದ್ದಾಗಿ ಕಳೆದ ವರ್ಷವೂ ಜಿಲ್ಲಾಡಳಿತ ಹೇಳಿಕೊಂಡಿತ್ತು.

‘ಯುದ್ಧವಿಮಾನ ಮ್ಯೂಸಿಯಂ ಅಭಿವೃದ್ಧಿಪಡಿಸುವುದು ಬದಿಗಿರಲಿ, ಕನಿಷ್ಠ ಪಕ್ಷ ಸ್ಥಾಪನೆಯಾದ ಯುದ್ಧವಿಮಾನ ವೀಕ್ಷಣೆಗೂ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಹಲವು ತಿಂಗಳುಗಳಿಂದ ವಿಮಾನದ ಮುಚ್ಚಿದ ಬಾಗಿಲು ನೋಡಿಯೇ ಬರುವಂತಾಗುತ್ತಿದೆ. ಉದ್ಯಾನ ಎರಡು ವರ್ಷದ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ’ ಎಂದು ಸಾಮಾಜಿಕ ಕಾರ್ಯಕರ್ತ ರಾಜೀವ ನಾಯ್ಕ ಆರೋಪಿಸಿದರು.

ಟುಪಲೇವ್ ಯುದ್ಧವಿಮಾನ ಮ್ಯೂಸಿಯಂಗೆ ಆಧಾರವಾಗಿ ಉಕ್ಕಿನ ಸ್ಟ್ಯಾಂಡ್‌ಗಳ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ವೀಕ್ಷಣೆಗೆ ಮುಕ್ತವಾಗಿಸಲು ನಿರ್ಣಯಿಸಲಾಗುತ್ತದೆ
ಮಂಜುನಾಥ ನಾವಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ
ಅಭಿವೃದ್ಧಿಗಿಲ್ಲ ಇಚ್ಛಾಶಕ್ತಿ
ರಾಜ್ಯದ ಏಕೈಕ ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಯಾದರೂ ಕಳೆದ ಸುಮಾರು 8 ತಿಂಗಳುಗಳಿಂದ ವೀಕ್ಷಣೆಗೆ ಮುಕ್ತವಾಗಿಲ್ಲ. ಆರಂಭಗೊಂಡ ಮೊದಲ ನಾಲ್ಕು ತಿಂಗಳಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. ‘ಮ್ಯೂಸಿಯಂ ಬಾಗಿಲು ಮುಚ್ಚಿರುವ ಬಗ್ಗೆ ಸಚಿವರು ಜಿಲ್ಲಾಧಿಕಾರಿ ಗಮನಕ್ಕಿದ್ದರೂ ಸ್ಪಂದನೆ ಸಿಕ್ಕಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಮ್ಯೂಸಿಯಂ ಸ್ಥಾಪನೆಯಾದರೂ ಅದರ ಸದ್ಬಳಕೆಗೆ ಜಿಲ್ಲಾಡಳಿತ ಮುಂದಾಗದಿರುವುದು ಇಚ್ಚಾಶಕ್ತಿಯ ಕೊರತೆ ಪ್ರದರ್ಶಿಸುತ್ತಿದೆ’ ಎನ್ನುತ್ತಾರೆ ಸಾರ್ವಜನಿಕರು.
ಸಿಆರ್‌ಝಡ್ ಅನುಮತಿಗೆ ಇನ್ನಷ್ಟೆ ಅರ್ಜಿ!
‘ಟುಪಲೇವ್ ಯುದ್ಧವಿಮಾನ ಮ್ಯೂಸಿಯಂ ಉದ್ಯಾನದ ಅಭಿವೃದ್ಧಿಗೆ ಹಲವು ಸೌಕರ್ಯಗಳ ಅಳವಡಿಕೆಗೆ ₹2 ಕೋಟಿ ಅನುದಾನ ಮಂಜೂರಾಗಿದೆ. ನಿರ್ಮಿತಿ ಕೇಂದ್ರವು ಸೌಕರ್ಯಗಳ ಅಳವಡಿಕೆ ಜವಾಬ್ದಾರಿ ಹೊತ್ತಿದ್ದು ಈಗಾಗಲೆ ವಿಮಾನ ಅಳವಡಿಕೆಗೆ ನೆಲಗಟ್ಟು ನಿರ್ಮಿಸಿದೆ. ಇನ್ನಷ್ಟು ಸೌಕರ್ಯಗಳ ಅಳವಡಿಕೆ ಕೆಫೆಟೇರಿಯಾ ನಿರ್ಮಾಣ ನಡೆಯಬೇಕಿದ್ದು ಸಿಆರ್‌ಝಡ್ ಅನುಮತಿ ಅಗತ್ಯವಿರುವ ಕಾರಣ ಕೆಲಸ ನಿಂತಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಸಿಆರ್‌ಝಡ್ ಅನುಮತಿಗೆ ಅರ್ಜಿ ಸಲ್ಲಿಸುವುದಾಗಿ ನಿರ್ಮಿತಿ ಕೇಂದ್ರದವರು ತಿಳಿಸಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಪನಿರ್ದೇಶಕ ಮಂಜುನಾಥ ನಾವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.