ADVERTISEMENT

ಉಳವಿ: ಗ್ರಾ.ಪಂ ಕೇಂದ್ರಕ್ಕೆ ಸೀಮಿತವಾದ ಅಭಿವೃದ್ದಿ

ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿರುವ 10ಕ್ಕೂ ಹೆಚ್ಚು ಗ್ರಾಮಗಳು

ಜ್ಞಾನೇಶ್ವರ ಜಿ.ದೇಸಾಯಿ
Published 11 ಫೆಬ್ರುವರಿ 2025, 14:57 IST
Last Updated 11 ಫೆಬ್ರುವರಿ 2025, 14:57 IST
ಜೊಯಿಡಾ ತಾಲ್ಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದೋಲಿ ಮತ್ತು ಇನ್ನಿತರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ
ಜೊಯಿಡಾ ತಾಲ್ಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದೋಲಿ ಮತ್ತು ಇನ್ನಿತರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ   

ಜೊಯಿಡಾ: ಚನ್ನಬಸವೇಶ್ವರ ಪುಣ್ಯ ಕ್ಷೇತ್ರ ಉಳವಿ ಅಭಿವೃದ್ಧಿಗಾಗಿ ಅನುದಾನದ ಮಹಾಪೂರವೇ ಹರಿದುಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಉಳವಿ ಅಭಿವೃದ್ಧಿ ಕಾಣುತ್ತಿದೆ. ಆದರೆ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನ್ನಿತರ ಹಳ್ಳಿಗಳು ಮಾತ್ರ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ.

ಸುಮಾರು 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀದೊಲಿ, ಅಂಬೋಳಿ, ಚಂದ್ರಾಳಿ, ಬಿಡೊಲಿ, ಶಿವಪುರ, ಕೊಡಸಳ್ಳಿ, ಹೆಣಕೊಳ, ಚಾಪೇರ, ಕಡಕರ್ಣಿ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಿವೆ. ಈ ಭಾಗದ ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲದೇ ಅತಿಥಿ ಶಿಕ್ಷಕರಿಂದ ನಡೆಯುತ್ತಿವೆ.

ಉಳವಿಗೆ ನಿರಂತರ ವಿದ್ಯುತ್ ಒದಗಿಸಲು ಜೊಯಿಡಾದಿಂದ ಉಳವಿಯವರೆಗೆ ಕೇಬಲ್ ಮೂಲಕ ಸುಮಾರು ₹ 10 ಕೋಟಿ ವೆಚ್ಚದಲ್ಲಿ ಭೂಗತ ಸಂಪರ್ಕ ನೀಡಲಾಗಿದೆ. ಆದರೆ, ಇದರ ಪಕ್ಕದಲ್ಲಿರುವ ಅಂಬೋಳಿ ಗ್ರಾಮದ 15 ಕುಟುಂಬಗಳಿಗೆ ಇನ್ನೂ ವಿದ್ಯುತ್ ಸಂಪರ್ಕವೇ ಇಲ್ಲ.

ADVERTISEMENT

ಬಿಡೋಲಿ, ಪಾಟ್ನೇ, ಕಾಮಸೇತಡಿ ಮತ್ತು ಪೊಸೋಲಿ ಹಳ್ಳಿಗಳ ಮಾರ್ಗಕ್ಕೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಜನರು ಸಂಚಾರಕ್ಕಾಗಿ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ.

ಉಳವಿ ಭಾಗದ ಹಲವು ಹಳ್ಳಿಗಳ ಮಕ್ಕಳು ಕುಂಬಾರವಾಡಾ, ಜೊಯಿಡಾ, ದಾಂಡೇಲಿಗೆ ಶಾಲಾ ಕಾಲೇಜುಗಳಿಗೆ ಬರುತ್ತಿದ್ದು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿದ್ಯಾಭ್ಯಾಸಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಿದೋಲಿ, ಶಿವಪುರ, ಪೊಸೋಲಿ, ಹನೋಲಿ, ಖಾಮಸೇತಡಿ ಮತ್ತು ಹೆಣಕೋಳಕ್ಕೆ ಸರ್ವ ಋತು ರಸ್ತೆ ಇಲ್ಲದೇ ಮಳೆಗಾಲದಲ್ಲಿ ರಸ್ತೆಗಳಲ್ಲಿ ಹಳ್ಳದ ನೀರು ಹರಿದು ರಸ್ತೆಗಳು ಕೆಸರುಗದ್ದೆಯಂತಾಗುತ್ತವೆ.

‘ಕಳ್ನೆ (ಹೆಣಕೋಳ) ಸಿದೋಲಿ, ಪೊಸೊಲಿ ಮತ್ತು ಖಾಮಸೇತಡಿಯಲ್ಲಿ ತುರ್ತು ಸೇತುವೆಗಳ ನಿರ್ಮಾಣ ಆಗಬೇಕಿದೆ. ಮೂರ್ನಾಲ್ಕು ಕಿ.ಮೀ ದೂರದ ಶಾಲೆಗಳಿಗೆ ವಿದ್ಯಾರ್ಥಿಗಳು ಕೆಸರಿನಲ್ಲಿ ನಡೆದುಕೊಂಡು ಹೋಗಬೇಕು’ ಎನ್ನುತ್ತಾರೆ ಉಳವಿ ಗ್ರಾಮ ಪಂಚಾಯಿತಿ ಸದಸ್ಯ ವಿಷ್ಣು ಬಿರಂಗತ.

ಚನ್ನಬಸವೇಶ್ವರ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿದಿನ ನೂರಾರು ಭಕ್ತರು ಮತ್ತು ಶಿವಪುರದಲ್ಲಿರುವ ತೂಗು ಸೇತುವೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ‘ಉಳವಿ ಸೇರಿದಂತೆ ಸುತ್ತಲಿನ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ₹ 15 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳವಿ ಭಾಗದ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಸುಮಾರು ₹ 6 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಉಳವಿ- ಯಲ್ಲಾಪುರ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣಕ್ಕೆ ₹ 26 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೈಗಾ ಸಿಎಸ್ಆರ್ ಅಡಿಯಲ್ಲಿ ಉಳವಿಯಲ್ಲಿ ₹ 1.80 ಕೋಟಿ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ₹8 ಕೋಟಿ ಅನುದಾನದಲ್ಲಿ ರಥ ಬೀದಿ ನಿರ್ಮಾಣವಾಗಿದೆ’  ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮೊಕಾಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.