ADVERTISEMENT

ಯೂನಿಯನ್ ಶಾಲೆಯೆದುರು ಪಾಲಕರ ಪ್ರತಿಭಟನೆ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 11:57 IST
Last Updated 10 ಡಿಸೆಂಬರ್ 2018, 11:57 IST
ಶಿರಸಿಯ ಯೂನಿಯನ್ ಪ್ರೌಢಶಾಲೆಯ ಎದುರು ಜಮಾಯಿಸಿದ್ದ ಪಾಲಕರು
ಶಿರಸಿಯ ಯೂನಿಯನ್ ಪ್ರೌಢಶಾಲೆಯ ಎದುರು ಜಮಾಯಿಸಿದ್ದ ಪಾಲಕರು   

ಶಿರಸಿ: ಶಿಕ್ಷಕರು ಮತ್ತು ಆಡಳಿತ ಮಂಡಳಿ ನಡುವಿನ ಭಿನ್ನಾಭಿಪ್ರಾಯವು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಇಲ್ಲಿನ ಯೂನಿಯನ್ ಪ್ರೌಢಶಾಲೆಯ ಎದುರು ಪಾಲಕರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ನೂತನ ಆಡಳಿತ ಮಂಡಳಿ ಅನುಷ್ಠಾನಕ್ಕೆ ಬಂದ ನಂತರ ಶಾಲೆಯ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಿದೆ. ಶೇ 90ಕ್ಕಿಂತ ಹೆಚ್ಚು ಬರುತ್ತಿದ್ದ ಫಲಿತಾಂಶ ಶೇ 60ಕ್ಕೆ ಕುಸಿದಿದೆ. ಇಂಗ್ಲಿಷ್ ವಿಷಯದ ಕಲಿಕೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಮಕ್ಕಳ ಭವಿಷ್ಯದ ಚಿಂತೆಯಾಗಿದೆ.ಶಾಲೆಯ ಈಗಿನ ಆಡಳಿತ ಮಂಡಳಿಯಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಾಲೆಯ ಮುಖ್ಯ ಶಿಕ್ಷಕಿ, ಆಡಳಿತ ಮಂಡಳಿಯ ವಿರುದ್ಧ ಆರೋಪ ಮಾಡಿದ್ದರು. ಇದರಿಂದ ಅವರನ್ನು ಹುದ್ದೆಯಿಂದಲೇ ಅಮಾನತುಗೊಳಿಸಲಾಗಿದೆ’ ಎಂದು ಆರೋಪಿಸಿದ ಪ್ರತಿಭಟನಾಕಾರರು, ಆಡಳಿತ ಮಂಡಳಿಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.

ADVERTISEMENT

ಶಾಲೆಗೆ ಬೀಗ ಹಾಕಲು ಪಾಲಕರು ಮುಂದಾದಾಗ, ಪೊಲೀಸರು ಅದನ್ನು ತಡೆದರು. ಸ್ಥಳಕ್ಕೆ ಭೇಟಿ ನೀಡಿದ ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ ಅವರು, ‘ಶೈಕ್ಷಣಿಕ ತೊಂದರೆ ಆಗದಂತೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವಂತೆ ನೋಡಿಕೊಳ್ಳಲಾಗುವುದು. ವಿಷಯವನ್ನು ಕ್ಷೇತ್ರಶಿಕ್ಷಣಾಧಿಕಾರಿ ಗಮನಕ್ಕೆ ತಂದು ಬಗೆಹರಿಸಲಾಗುವುದು’ ಎಂದರು. ಮಾರುಕಟ್ಟೆ ಠಾಣೆ ಪಿಎಸ್ಐ ಶಶಿಕುಮಾರ್, ಪಾಲಕರ ಮನವೊಲಿಸಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.