ADVERTISEMENT

‘ಕ್ರಿಮಿನಲ್ ಮೊಕದ್ದಮೆ ದಾಖಲಿಸಿ’

ದೀವಗಿ ಬಳಿ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 3:57 IST
Last Updated 6 ಜನವರಿ 2021, 3:57 IST
ಕುಮಟಾ ತಾಲ್ಲೂಕಿನ ದೀವಗಿ ಬಳಿ ಹೆದ್ದಾರಿ ಕಾಮಗಾಗಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರು ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು
ಕುಮಟಾ ತಾಲ್ಲೂಕಿನ ದೀವಗಿ ಬಳಿ ಹೆದ್ದಾರಿ ಕಾಮಗಾಗಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರು ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು   

ಕುಮಟಾ: ಅವೈಜ್ಞಾನಿಕ ರೀತಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡಿರುವ ಕಾರಣ ತಾಲ್ಲೂಕಿನ ದೀವಗಿ ಬಳಿ ಅಪಘಾತಗಳಾಗುತ್ತಿವೆ. ಆದರೂ ಚತುಷ್ಪಥ ಹೆದ್ದಾರಿ ನಿರ್ಮಿಸಿರುವ ಕಂಪನಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಏಕೆ ದಾಖಲಿಸುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಘಕಟದ ಅಧ್ಯಕ್ಷ ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಅವೈಜ್ಞಾನಿಕ ಚತುಷ್ಪಥ ಹೆದ್ದಾರಿ ಕಾಮಗಾರಿ ವಿರುದ್ಧ ವೇದಿಕೆ ತಾಲ್ಲೂಕಿನ ದೀವಗಿ ಬಳಿ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಾರ್ವಜನಿಕರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೇಘರಾಜ ನಾಯ್ಕ ಅವರಿಗೆ ಮನವಿ ನೀಡಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ರಾಜು ಮಾಸ್ತಿಹಳ್ಳ, `ರಾಷ್ಟ್ರೀಯ ಹೆದ್ದಾರಿಯ ದೀವಗಿ ಬಳಿ ಮೇಲ್ಸೇತುವೆ ಮತ್ತು ಸರ್ವೀಸ್‌ ರಸ್ತೆ ನಿರ್ಮಿಸದಿದ್ದರೆ ಶಾಲಾ ಮಕ್ಕಳು, ಸಾರ್ವಜನಿಕರು ಹೆದ್ದಾರಿಯಲ್ಲೇ ಓಡಾಡಬೇಕಾಗುತ್ತದೆ. ಈ ಸಮಸ್ಯೆಗೆ ಸಂಬಂಧಿಸಿದವರು ಈಗಲೂ ಸ್ಪಂದಿಸದಿದ್ದರೆ ಬೃಹತ್ ಹೋರಾಟ ಅನಿವಾರ್ಯ' ಎಂದರು. ಜಿ.ಪಂ ಮಾಜಿ ಸದಸ್ಯ ಹೊನ್ನಪ್ಪ ನಾಯಕ, `ದೀವಗಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ನಡೆಸಬೇಕಿತ್ತು' ಎಂದರು.

ADVERTISEMENT

ವಕೀಲ ಆರ್.ಜಿ. ನಾಯ್ಕ, ಹರೀಶ್ ಶೇಟ್, ಫ್ರಾನ್ಸಿಸ್ ಫರ್ನಾಂಡಿಸ್, ಗಜು ನಾಯ್ಕ,ಕೃಷ್ಣಾನಂದ ವೆರ್ಣೇಕರ್‌,ಮಂಜುನಾಥ ಮರಾಠಿ, ಕೆ.ಎನ್. ಮಂಜು, ಮೀರ್ ಸಾಬ್ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಬಿಸಿಲು ಲೆಕ್ಕಿಸದೆ ಅರೆಬೆತ್ತಲಾಗಿ ದೀವಗಿ ಗ್ರಾಮದಿಂದ ಸುಮಾರು ಆರು ಕಿ.ಮೀ. ದೂರದ ತಹಶೀಲ್ದಾರ್ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಗಮನ ಸೆಳೆದರು. ಸಿ.ಪಿ.ಐ ಪರಮೇಶ್ವರ ಗುನಗಾ, ಪಿ.ಎಸ್.ಐ ಗಳಾದ ಆನಂದಮೂರ್ತಿ, ರವಿ ಗುಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.