ADVERTISEMENT

ಅನುಮಾನಾಸ್ಪದ ಸಾವಿನ ತನಿಖೆಗೆ ಒತ್ತಾಯ

ಡಿವೈಎಸ್ಪಿ ಭೇಟಿ ಮಾಡಿದ ಕುಟುಂಬದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 15:59 IST
Last Updated 30 ಅಕ್ಟೋಬರ್ 2019, 15:59 IST
ಅಂಕೋಲಾ ತಾಲ್ಲೂಕಿನ ಮೃತ ರವಿ ಹರಿಕಂತ್ರನ ಕುಟುಂಬದವರು ಬುಧವಾರ ಡಿವೈಎಸ್‌ಪಿ ಶಂಕರ ಮರಿಹಾಳ ಅವರಿಗೆ ಮನವಿ ನೀಡಿದರು.
ಅಂಕೋಲಾ ತಾಲ್ಲೂಕಿನ ಮೃತ ರವಿ ಹರಿಕಂತ್ರನ ಕುಟುಂಬದವರು ಬುಧವಾರ ಡಿವೈಎಸ್‌ಪಿ ಶಂಕರ ಮರಿಹಾಳ ಅವರಿಗೆ ಮನವಿ ನೀಡಿದರು.   

ಕಾರವಾರ: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಅಂಕೋಲಾ ತಾಲ್ಲೂಕಿನ ರವಿ ಸುರೇಶ ಹರಿಕಂತ್ರ ಅವರ ಸಾವಿನ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮೃತರ ಸಂಬಂಧಿಕರು ಡಿವೈಎಸ್‌ಪಿ ಶಂಕರ ಮಾರಿಹಾಳ ಅವರನ್ನು ಬುಧವಾರ ಇಲ್ಲಿ ಒತ್ತಾಯಿಸಿದರು.

‘ಮೂವರು ಸ್ನೇಹಿತರು ಪಾರ್ಟಿ ಕೊಡಿಸುವುದಾಗಿ ಹೇಳಿ ರವಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಅನುಮಾನವಿದೆ. ನಂತರ ಅಪಘಾತದಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಬಿಂಬಿಸಲಾಗಿದೆ. ಕೊಲೆ ಮಾಡಿದ ನಂತರ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಿ, ವಿಚಾರಣೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ಆರೋಪಿಯೊಬ್ಬನ ಸಹೋದರಿಯ ಜತೆ ಕೊಲೆಯಾಗಿರುವ ವ್ಯಕ್ತಿ ಸಂಬಂಧ ಹೊಂದಿದ್ದರಿಂದ ಈ ಹಿಂದೆಯೂ ಅನೇಕ ಬಾರಿ ಜಗಳ ನಡೆದಿದೆ. ಇಬ್ಬರಿಗೂ ಬುದ್ಧಿವಾದವನ್ನು ಸಹ ಹೇಳಲಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆಯಿದೆ. ಕೊಲೆಯಾಗುವ ಕೆಲವು ಗಂಟೆಗಳ ಮೊದಲು ರವಿ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆರೋಪಿಗಳ ಜೊತೆ ಇರುವುದಾಗಿ ಹೇಳಿಕೊಂಡಿದ್ದರು. ಇದಾದ ನಂತರ ಬೇರೊಬ್ಬರು ವ್ಯಕ್ತಿ, ಆಂದ್ಲೆ ಕ್ರಾಸ್ ಸಮೀಪ ರವಿ ಅವರ ಬೈಕ್ ಅಪಘಾತಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ’ ಎಂದು ಅವರ ಸಹೋದರ ನಾಗರಾಜ ಹರಿಕಂತ್ರ ದೂರಿದರು.

ADVERTISEMENT

‘ದೇಹದ ಮೇಲೆ ಯಾವುದೇ ಅಪಘಾತದ ಗುರುತುಗಳಿರಲಿಲ್ಲ. ಆ ಸಮಯದಲ್ಲಿ ಗೊಂದಲದಲ್ಲಿದ್ದ ನಾವು ಅಪಘಾತದಿಂದ ಸಹೋದರ ಸಾವನಪ್ಪಿದ ಬಗ್ಗೆ ದೂರು ದಾಖಲಿಸಿದೆವು. ಅದಾದ ನಂತರ ಕೊಲೆ ನಡೆದ ಬಗ್ಗೆ ಅನುಮಾನ ಮೂಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.