ADVERTISEMENT

‘ಪದವೀಧರರನ್ನು ಮೇಲ್ವಿಚಾರಕರಾಗಿ ನೇಮಿಸಿ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:29 IST
Last Updated 17 ಜುಲೈ 2020, 13:29 IST

ಶಿರಸಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುವ ಪದವೀಧರರನ್ನು ಯೋಜನೆಯ ಮೇಲ್ವಿಚಾರಕರನ್ನಾಗಿ ನೇಮಿಸಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್–19 ಸಂದರ್ಭದಲ್ಲಿ ನಿರುದ್ಯೋಗಿ ಪದವೀಧರರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶದಲ್ಲಿ ಸಿ.ಎಂ.ಐ.ಇ ನಡೆಸಿದ ಸರ್ವೆ ಪ್ರಕಾರ 2019ರ ಅಕ್ಟೋಬರ್‌ನಲ್ಲಿ ಶೇ 8.27ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ಶೇ 19.2ರಷ್ಟಾಗಿದೆ. ಪದವೀಧರರಿಗೆ ಉದ್ಯೋಗ ಸಿಗುವವರೆಗೆ ರಾಜ್ಯ ಸರ್ಕಾರ ಉದ್ಯೋಗ ಭತ್ಯೆ ನೀಡಬೇಕು’ಎಂದು ಒತ್ತಾಯಿಸಿದರು.

ಅನೇಕ ಪದವೀಧರ ನಿರುದ್ಯೋಗಿಗಳು ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಈ ಪದವೀಧರರನ್ನು ಗುರುತಿಸಿ ಸರ್ಕಾರ ಕಾಮಗಾರಿಯ ಮೇಲ್ವಿಚಾರಕರನ್ನಾಗಿ ನೇಮಿಸಬೇಕು. ಪದವೀಧರರಲ್ಲಿ ಅನೇಕರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೋವಿಡ್ 19 ಕಾರಣಕ್ಕೆ ಶಾಲೆಗಳು ತೆರೆದಿಲ್ಲ. ಈ ಶಿಕ್ಷಕರ ಜೀವನ ಕಷ್ಟವಾಗಿದ್ದು, ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ, ನೌಕರರಿಗೆ, ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.