ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಮೂರನೇ ಸ್ಥಾನಕ್ಕೇರಿದ ಉತ್ತರಕನ್ನಡ

ದ್ವಿತೀಯ ಪಿ.ಯು ಪರೀಕ್ಷಾ ಫಲಿತಾಂಶ: ಶೇ 74.34ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 12:28 IST
Last Updated 14 ಜುಲೈ 2020, 12:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಜಿಲ್ಲೆಯು ಶೇ 74.34ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ರಾಜ್ಯದಲ್ಲಿ ಮೂರನೇಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಯು ಎರಡು ವರ್ಷಗಳಿಂದ ನಾಲ್ಕನೇ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಒಟ್ಟು ಫಲಿತಾಂಶದಲ್ಲಿ ಶೇ1.29ರಷ್ಟು ಹೆಚ್ಚಳವಾಗಿದೆ.

ಪರೀಕ್ಷೆಗೆ ಹಾಜರಾಗಿದ್ದ 14,231 ವಿದ್ಯಾರ್ಥಿಗಳಲ್ಲಿ 10,580 ಮಂದಿ ಉತ್ತೀರ್ಣರಾಗಿದ್ದಾರೆ. 12,377 ಹೊಸ ವಿದ್ಯಾರ್ಥಿಗಳ ಪೈಕಿ 10,222 ಮಂದಿ ಉತ್ತೀರ್ಣರಾಗಿದ್ದಾರೆ. ಅವರ ಪ್ರಮಾಣವು ಶೇ 80.97ರಷ್ಟಾಗಿದೆ.ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈಸಾಧಿಸಿದ್ದು,7,978ರಲ್ಲಿ 6,364 ಮಂದಿ ಉತ್ತೀರ್ಣರಾಗಿದ್ದಾರೆ. 6,253 ವಿದ್ಯಾರ್ಥಿಗಳಲ್ಲಿ 4,216 ಮಂದಿ ಪಾಸಾಗಿದ್ದಾರೆ.

ಜಿಲ್ಲೆಯಲ್ಲಿ ಕಳೆದ ವರ್ಷಒಟ್ಟುಶೇ 73.05ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಪರೀಕ್ಷೆಗೆ 301 ವಿದ್ಯಾರ್ಥಿಗಳು ಕಡಿಮೆಯಿದ್ದರು.

ADVERTISEMENT

ವಿಭಾಗವಾರು:ಈ ಬಾರಿ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಅತಿ ಕಡಿಮೆ ಫಲಿತಾಂಶ ಬಂದಿದ್ದು, ಕೇವಲ 59.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 77.37ರಷ್ಟು ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 84.55ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಫಲಿತಾಂಶದಲ್ಲಿನಗರ, ಪಟ್ಟಣ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಿಗಿಂತ ಮುಂದಿದ್ದಾರೆ.

ಈ ಬಾರಿ ಖಾಸಗಿಯಾಗಿ 732 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 184 ಮಂದಿ ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು 1,122 ಇದ್ದು, ಕೇವಲ 374 ಮಂದಿಪಾಸಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದ 7,416 ವಿದ್ಯಾರ್ಥಿಗಳ ಪೈಕಿ 6,024 (ಶೇ 81.23) ಹಾಗೂ ಕನ್ನಡದ ಮಾಧ್ಯಮದ 6,815 ವಿದ್ಯಾರ್ಥಿಗಳಲ್ಲಿ 4,556 (ಶೇ 66.85) ಮಂದಿ ಪದವಿ ಕಾಲೇಜಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

‘ಉಪನ್ಯಾಸಕರಶ್ರಮ ಕಾರಣ’:‘ದಕ್ಷಿಣ ಕನ್ನಡ ಮತ್ತುಉಡುಪಿ ಜಿಲ್ಲೆಗಳು ತಲಾ ಶೇ 90.71ರಷ್ಟು ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿವೆ. ಕೊಡಗು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, ಉತ್ತರಕನ್ನಡವು ಮೂರನೇ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಉಪನ್ಯಾಸಕರ ಶ್ರಮವೇ ಕಾರಣ’ ಎಂದು ಡಿ.ಡಿ.ಪಿ.ಯು ಎಸ್.ಎನ್.ಬಗಲಿ ಸಂತಸ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಲಾಕ್‌ಡೌನ್ ಕಾರಣದಿಂದ ಇಂಗ್ಲಿಷ್ ಪರೀಕ್ಷೆ ವಿಳಂಬವಾಗಿ ನೆರವೇರಿತು. ಇದರಿಂದ ವಿದ್ಯಾರ್ಥಿಗಳ ಮನಸ್ಸು ಸ್ವಲ್ಪ ವಿಚಲಿತವಾದಂತೆ ಕಾಣುತ್ತದೆ. ಉತ್ತೀರ್ಣರಾದರೂ ಗರಿಷ್ಠ ಅಂಕಗಳನ್ನು ಗಳಿಸಲು ಸಾಧ್ಯವಾಗಿಲ್ಲ. ಇದರಿಂದ ಎರಡನೇ ಸ್ಥಾನ ತಪ್ಪಿತು’ ಎಂದು ಅವರು ವಿಶ್ಲೇಷಿಸಿದರು.

ವಿಭಾಗವಾರು ಫಲಿತಾಂಶ

ವಿಭಾಗ- ಪರೀಕ್ಷೆ ಬರೆದವರು; ಉತ್ತೀರ್ಣರಾದವರು; ಫಲಿತಾಂಶ (ಶೇಕಡಾ)

ಕಲಾ- 3,948; 2,354; 59.63

ವಾಣಿಜ್ಯ- 6,517; 5,042; 77.37

ವಿಜ್ಞಾನ- 3,766; 3,184; 84.55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.