ADVERTISEMENT

ಸಂಜೀವಿನಿ: ಜಿಲ್ಲೆಗೆ ಎಂಟು ಪ್ರಶಸ್ತಿಯ ಗರಿ

ಮಾರ್ಚ್ 8ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯಿಂದ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 15:28 IST
Last Updated 4 ಮಾರ್ಚ್ 2022, 15:28 IST
ಎಂ.ಪ್ರಿಯಾಂಗಾ
ಎಂ.ಪ್ರಿಯಾಂಗಾ   

ಕಾರವಾರ: ‘ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ’ಯ ವೈಯಕ್ತಿಕ ಹಾಗೂ ಒಕ್ಕೂಟ ವಿಭಾಗದಲ್ಲಿ 2021– 22ನೇ ಸಾಲಿನಲ್ಲಿ ಉತ್ತಮ ಸಾಧನೆಗಾಗಿ ರಾಜ್ಯಮಟ್ಟದ ಎಂಟು ಪ್ರಶಸ್ತಿಗಳು ಜಿಲ್ಲೆಗೆ ಪ್ರಕಟವಾಗಿವೆ.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳನ್ನು ಒಗ್ಗೂಡಿಸಿಕೊಂಡು ಸರ್ಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಪ್ರಶಸ್ತಿಗಳು ಪ್ರಕಟವಾಗಿದ್ದು, ಮಾರ್ಚ್ 8ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನವಾಗಲಿವೆ ಎಂದು ಜಿಲ್ಲಾ ಪಂಚಾಯಿತಿಯ ಡಿ.ಆರ್.ಡಿ.ಒ ಶಾಖೆಯ ಯೋಜನಾ ನಿರ್ದೇಶಕ ಕರೀಂ ಅಸಾದಿ ತಿಳಿಸಿದ್ದಾರೆ.

ಅಂದು ನಡೆಯುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಪ್ರಶಸ್ತಿ ಪುರಸ್ಕೃತರು:

ಅತ್ಯುತ್ತಮ ಕಾರ್ಯ ಸಾಧನೆ ವಿಭಾಗ:

ಜೊಯಿಡಾ ತಾಲ್ಲೂಕಿನ ರಾಮನಗರ ಗ್ರಾಮ ಪಂಚಾಯಿತಿಯ ಪರಿವಾರ ಗ್ರಾಮ ಪಂಚಾಯಿತಿ.

ವೈಯಕ್ತಿಕ ವಿಭಾಗ:

ಘನತ್ಯಾಜ್ಯ ವಿಲೇವಾರಿ ನಿರ್ವಹಣೆಗಾಗಿ ಜೊಯಿಡಾ ತಾಲ್ಲೂಕಿನ ಗೀತಾ ರವೀಂದ್ರ ಮಿರಾಶಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಕುಣಬಿ ಸಮುದಾಯದ ಮೊದಲ ವಾಹನ ಚಾಲಕಿಯಾಗಿದ್ದಾರೆ.

ಕೃಷಿ ಉತ್ಪಾದಕರ ಗುಂಪು ವಿಭಾಗ:

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ ಸಂಪರ್ಕ ಮಾಡಿ ಸದಸ್ಯರ ಆದಾಯ ಮಟ್ಟವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಮೀನು ಕೃಷಿ ಉತ್ಪಾದಕ ಗುಂಪುಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಅಂಕೋಲಾ ತಾಲ್ಲೂಕಿನ ಹೊನ್ನೆಬೈಲ ಮತ್ತು ಬೇಲೆಕೇರಿ ಗ್ರಾಮ ಪಂಚಾಯಿತಿ ಒಕ್ಕೂಟದ ಬಿಳಿಹೊಂಯ್ಗಿ ಮೀನುಗಾರರ ಉತ್ಪಾದಕ ಗುಂಪು, ಶ್ರೀ ಸಾಯಿ ಮೀನುಗಾರರ ಉತ್ಪಾದಕ ಗುಂಪು ಪ್ರಶಸ್ತಿ ಪಡೆಯಲಿವೆ.

ಪಿ.ಎಂ.ಎಫ್‍.ಎಂ.ಇ ವಿಭಾಗ:

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ಯೋಜನೆಯಡಿ (ಪಿ.ಎಂ.ಎಫ್‍.ಎಂ.ಇ) ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ಉತ್ಪಾದಿಸುವ ಆಹಾರ ಉತ್ಪನ್ನಗಳ ಸಂರಕ್ಷಣೆ ಮಾಡಲಾಗುತ್ತದೆ. ಇದರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಯಲ್ಲಾಪುರ ತಾಲ್ಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿಯ ನಂದಾದೀಪ ಸಂಜೀವಿನಿ ಒಕ್ಕೂಟ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಕೃಷಿಯೇತರ ಜೀವನೋಪಾಯ ವಿಭಾಗ:

‘ಅಜೀವಿಕ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆ’ಯಡಿ ಸಂಚಾರಿ ಲಘು ಉಪಾಹಾರ ವಾಹನ ಖರೀದಿಸಿ ಉತ್ತಮವಾಗಿ ಜೀವನ ನಿರ್ವಹಣೆ ಮಾಡುತ್ತಿರುವ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿಯ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟಕ್ಕೆ ಪ್ರಶಸ್ತಿ ಪ್ರಕಟವಾಗಿದೆ.

ಅಡಿಕೆ ಸಂಸ್ಕರಣಾ ಘಟಕ ವಿಭಾಗ:

ಗ್ರಾಮೀಣ ಪ್ರದೇಶದಲ್ಲಿ ಅಡಿಕೆಯನ್ನು ನೇರವಾಗಿ ಖರೀದಿಸಿ, ಅಡಿಕೆ ಸುಲಿದು, ವಿವಿಧ ಗ್ರೇಡ್‌ಗಳನ್ನಾಗಿ ಬೇರ್ಪಡಿಸಿ ಮಾರಾಟ ಮಾಡುತ್ತಿರುವ ಕಾರಣ ಸಿದ್ದಾಪುರ ತಾಲ್ಲೂಕಿನ ಬೇಡ್ಕಣಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟವು ಪುರಸ್ಕಾರ ಪಡೆಯಲಿದೆ.

ಪರಿಸರ ಪೂರಕ ಪ್ರವಾಸೋದ್ಯಮ ವಿಭಾಗ:

ಹೋಂ ಸ್ಟೇ ಪ್ರಾರಂಭಿಸಿರುವ ಜೊಯಿಡಾ ತಾಲ್ಲೂಕಿನ ರಾಮನಗರ ಗ್ರಾಮ ಪಂಚಾಯಿತಿಯ ಆದಿಶಕ್ತಿ ಮಹಿಳಾ ಸ್ವಸಹಾಯ ಸಂಘ ಕೂಡ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ.

****

* ಅತಿ ಹೆಚ್ಚು ಪುರಸ್ಕಾರಗಳು ಜಿಲ್ಲೆಗೆ ಪ್ರಕಟವಾಗಿರುವುದು ಸಂತಸದ ಸಂಗತಿ. ಮುಂಬರುವ ದಿನಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ.

- ಪ್ರಿಯಾಂಗಾ.ಎಂ, ಜಿ.ಪಂ ಸಿ.ಇ.ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.