ADVERTISEMENT

ಜೇನುಹುಳುಗಳಿಂದ ‍ಪರಿಸರ ಸಮತೋಲನ: ಪಾಂಡುರಂಗ ಹೆಗಡೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 14:19 IST
Last Updated 11 ಜೂನ್ 2020, 14:19 IST
ಶಿರಸಿ ತಾಲ್ಲೂಕಿನ ಬಿಸಲಕೊಪ್ಪದಲ್ಲಿ ನಡೆದ ಜೇನುಹಬ್ಬದಲ್ಲಿ ಜೇನನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು
ಶಿರಸಿ ತಾಲ್ಲೂಕಿನ ಬಿಸಲಕೊಪ್ಪದಲ್ಲಿ ನಡೆದ ಜೇನುಹಬ್ಬದಲ್ಲಿ ಜೇನನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು   

ಶಿರಸಿ: ಪ್ರಾಕೃತಿಕ ವೈವಿಧ್ಯ ಸಂರಕ್ಷಣೆ ಜತೆ ಪರಿಸರ ಸಮತೋಲನದಲ್ಲಿ ಜೇನುಹುಳುಗಳ ಪಾತ್ರ ನಿರ್ಣಾಯಕವಾಗಿದೆ ಎಂದು ಪ್ರಕೃತಿ ಸಂಸ್ಥೆ ಮುಖ್ಯಸ್ಥ ಪಾಂಡುರಂಗ ಹೆಗಡೆ ಹೇಳಿದರು.

ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಣಗಿಯ ಜೇನು ಕೃಷಿಕ ನಾಗರಾಜ ಹೆಗಡೆ ಅವರ ಮನೆಯಲ್ಲಿ ಗುರುವಾರ ಸಂಘಟಿಸಿದ್ದ ‘ಜೇನುಹಬ್ಬ’ದಲ್ಲಿ ಅವರು ಮಾತನಾಡಿದರು. ಪರಿಸರವು ಸಮತೋಲನಕ್ಕೆ ಜೇನು ಸಂತತಿ ವ್ಯಾಪಕವಾಗಿರಬೇಕು. ಹಾಗಾದಾಗ ಮಾತ್ರ ಪರಿಸರ ಸುಸ್ಥಿರವಾಗಿರಲು ಸಾಧ್ಯ ಎಂದರು.

ಇತ್ತೀಚೆಗೆ ಜೇನು ಸಂಕುಲದ ನಾಶ ಹೆಚ್ಚಿದೆ. ಕೃಷಿಗೆ ರಾಸಾಯನಿಕ ಸಿಂಪಡಣೆ ಪ್ರಮಾಣ ಹೆಚ್ಚಿದಂತೆ ಜೇನು ಕುಟುಂಬಗಳ ನಾಶ ಹೆಚ್ಚಾಗುತ್ತಿದೆ. ಹೀಗಾಗಿ ವಿವಿಧ ರೀತಿಯಲ್ಲಿ ಪರಿಸರ ಅಸಮತೋಲನ ತಲೆದೋರುತ್ತಿದೆ. ಇವೆಲ್ಲ ಸರಿಯಾಗಲು ಜೇನು ತಳಿಗಳ ರಕ್ಷಣೆ ಆಗಬೇಕು ಎಂದು ಹೇಳಿದರು.

ADVERTISEMENT

ಪ್ರಕೃತಿ ಸಂಸ್ಥೆಯ ಆರ್.ಪಿ.ಹೆಗಡೆ ಮಾತನಾಡಿ, ‘ಜೇನು ಸಾಕಣೆಯನ್ನು ಉಪ ಕೃಷಿಯಾಗಿ ಮಾಡಿಕೊಂಡು ಆದಾಯ ಗಳಿಸಲು ಸಾಧ್ಯವಿದೆ. ರೈತರು ಇಂತಹ ಉಪ ಉತ್ಪನ್ನದತ್ತ ಯೋಚಿಸಬೇಕು’ ಎಂದರು. ಜೇನು ಕೃಷಿಕ ನಾಗರಾಜ ಹೆಗಡೆ ಮಾಹಿತಿ ನೀಡಿದರು.
ಹಬ್ಬದ ಅಂಗವಾಗಿ ಪುಟ್ಟ ಮಕ್ಕಳು, ಕೃಷಿಕರು, ಆಸಕ್ತ ಜೇನು ಸಾಕಣೆದಾರರಿಗೆ ಜೇನು ಸಂತತಿ ರಕ್ಷಣೆ, ತಳಿಗಳ ಮಹತ್ವ, ಜೇನುತುಪ್ಪ, ಜೇನು ಹುಳುಗಳ ಕಾರ್ಯವಿಧಾನ ಸೇರಿದಂತೆ ಹಲವು ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.