ADVERTISEMENT

ಉತ್ತರ ಕನ್ನಡ | ‘ಸ್ವಚ್ಛ ಗ್ರಾಮ’ ಸಾಕಾರಕ್ಕೆ ಹತ್ತಾರು ಸವಾಲು

ಕುಗ್ರಾಮಗಳಿಗೆ ಸಾಗದ ವಾಹನ:ಸ್ವಚ್ಛ ಸಂಕೀರ್ಣ ಇದ್ದರೂ ಬಳಕೆಗೆ ಮೀನಮೇಷ

ಗಣಪತಿ ಹೆಗಡೆ
Published 16 ಜೂನ್ 2025, 6:22 IST
Last Updated 16 ಜೂನ್ 2025, 6:22 IST
ಕಾರವಾರ ತಾಲ್ಲೂಕಿನ ಕಡವಾಡದ ಸ್ವಚ್ಛ ಸಂಕೀರ್ಣದಲ್ಲಿ ಕಸ ಸಂಗ್ರಹಣೆ ವಾಹನ ನಿಲುಗಡೆ ಮಾಡಿರುವುದು
ಕಾರವಾರ ತಾಲ್ಲೂಕಿನ ಕಡವಾಡದ ಸ್ವಚ್ಛ ಸಂಕೀರ್ಣದಲ್ಲಿ ಕಸ ಸಂಗ್ರಹಣೆ ವಾಹನ ನಿಲುಗಡೆ ಮಾಡಿರುವುದು   

ಕಾರವಾರ: ಹಳ್ಳಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ರೂಪಿಸಿದ ‘ಸ್ವಚ್ಛ ಸಂಕೀರ್ಣ’ ಮತ್ತು ಮನೆ ಮನೆಗಳ ಕಸ ಸಂಗ್ರಹಣೆ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ಹೆಚ್ಚುತ್ತಿದೆ.

ಜಿಲ್ಲೆಯ 231 ಗ್ರಾಮ ಪಂಚಾಯಿತಿಗಳ ಪೈಕಿ 224 ಕಡೆಗಳಲ್ಲಿ ಸ್ವಚ್ಛತಾ ಸಂಕೀರ್ಣವಿದೆ ಎಂಬುದಾಗಿ ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷನ್ ವಿಭಾಗ ಮಾಹಿತಿ ನೀಡುತ್ತಿದೆ. ಆದರೆ, ವಾಸ್ತವದಲ್ಲಿ ಹಲವು ಕಡೆ ಕಸ ಸಂಗ್ರಹಣೆ ವಾಹನ ನಿರ್ವಹಣೆ ವಿಚಾರಕ್ಕೆ ಕಸ ಸಂಗ್ರಹ ಸ್ಥಗಿತಗೊಂಡಿದೆ.

ಮಳೆಗಾಲದಲ್ಲಿ ಹದಗೆಡುವ ಗ್ರಾಮೀಣ ರಸ್ತೆಗಳಿಂದ ಬೆರಳೆಣಿಕೆಯಷ್ಟು ಪಂಚಾಯಿತಿ ಹೊರತುಪಡಿಸಿ ಬಹುತೇಕ ಕಡೆ ಕಸ ಸಂಗ್ರಹಣೆ ನಡೆಯುತ್ತಿಲ್ಲ ಎಂಬುದು ಜನರ ದೂರು. ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಮಾತ್ರ ನಿತ್ಯ ಕಸ ಸಂಗ್ರಹಣೆ ನಡೆಯುತ್ತಿದೆ. ಕುಗ್ರಾಮಗಳತ್ತ ವಾಹನ ಸಾಗುವುದೇ ಅಪರೂಪ ಎಂಬ ಸ್ಥಿತಿ ಇದೆ.

ADVERTISEMENT

‘ಲಕ್ಷಾಂತರ ವೆಚ್ಚದಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಿಸಿ, ಕಸ ಸಂಗ್ರಹಣೆಗೆ ವಾಹನ ನೀಡಲಾಗಿದೆ. ಆದರೆ, ಅವುಗಳ ನಿರ್ವಹಣೆಗೆ ಅನುದಾನ ಇಲ್ಲ. ಪ್ರತ್ಯೇಕ ತೆರಿಗೆ ಸಂಗ್ರಹಿಸಲು ಮುಂದಾದರೆ ಜನರಿಂದ ವಿರೋಧ ಎದುರಿಸಬೇಕಾಗುತ್ತದೆ. ವಾಹನ ಹಾಳಾದರೂ ದುರಸ್ತಿಗೆ ಖರ್ಚು ಮಾಡಲು ಪಂಚಾಯಿತಿಗಳಿಗೆ ಅನುದಾನವಿಲ್ಲ’ ಎನ್ನುತ್ತಾರೆ ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದು ನಾಯ್ಕ.

‘ಸ್ವಚ್ಛ ಸಂಕೀರ್ಣ, ವಾಹನಗಳ ನಿರ್ವಹಣೆಗೆ ಪ್ರತ್ಯೇಕ ತೆರಿಗೆ ಸಂಗ್ರಹಿಸುವ ನಿರ್ಣಯ ಕೈಗೊಂಡು ಜಿಲ್ಲೆಯ 10ಕ್ಕೂ ಹೆಚ್ಚು ಪಂಚಾಯಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ ಗ್ರಾಮ ಪಂಚಾಯಿತಿಗಳಿಗೂ ನಿರ್ದೇಶನ ನೀಡಿದ್ದೇವೆ’ ಎನ್ನುತ್ತಾರೆ ಸ್ವಚ್ಛ ಭಾರತ ಮಿಷನ್ ಸಂಯೋಜಕ ಸೂರ್ಯನಾರಾಯಣ ಭಟ್.

ಶಿರಸಿ ನಗರಕ್ಕೆ ಸಮೀಪದ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಹುತ್ಗಾರ, ಇಸಳೂರು, ದೊಡ್ನಳ್ಳಿ, ಯಡಳ್ಳಿ ಗ್ರಾಮ ಪಂಚಾಯಿತಿಗಳಿಂದ ಮನೆಗಳಿಂದ ಕಸ ಸಂಗ್ರಹ ಆಗುತ್ತಿದ್ದರೂ, ನಿರೀಕ್ಷಿತ ಪ್ರಗತಿ ಕಾಣುವಲ್ಲಿ ವಿಫಲವಾಗಿವೆ ಎಂಬುದು ಜನರ ದೂರು. ಈ ಭಾಗದಲ್ಲಿನ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದೆ.

ಮುಂಡಗೋಡ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಹುತೇಕರು ಕಸಕಡ್ಡಿ, ತ್ಯಾಜ್ಯವನ್ನು ತಿಪ್ಪೆಗುಂಡಿಗೆ ಹಾಕುವುದು, ಒಣಕಸವನ್ನು ಒಲೆಉರಿಗೆ ಬಳಸುವುದು, ಇಲ್ಲವೇ ರಸ್ತೆ ಪಕ್ಕದಲ್ಲಿ ಸುರಿಯುತ್ತಿದ್ದಾರೆ.

‘ಕಸ ಸಂಗ್ರಹಣೆ ವಾಹನವು ವಾರದಲ್ಲಿ ಎರಡು ದಿನ ಓಣಿ ಓಣಿಯಲ್ಲಿ ಸಂಚರಿಸುತ್ತದೆ. ಕೆಲವರು ಮಾತ್ರ ಕಸವನ್ನು ವಾಹನಕ್ಕೆ ನೀಡುತ್ತಾರೆ. ಸ್ವಚ್ಛತೆಯ ಕುರಿತು ಇನ್ನಷ್ಟು ಜಾಗೃತಿ ಮೂಡುವುದು ಅಗತ್ಯವಿದೆ’ ಎನ್ನುತ್ತಾರೆ ಪಾಳಾ ನಿವಾಸಿ ಶಿವಕುಮಾರ.

ಅಂಕೋಲಾ ಪಟ್ಟಣಕ್ಕೆ ಸಮೀಪವಿರುವ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ವಾರದಲ್ಲಿ 3 ದಿನಗಳಿಗೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ನಿರ್ವಹಣ ಘಟಕಗಳು ಇನ್ನೂ ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಮನೆಗೆ ಕಸವನ್ನು ಸಂಗ್ರಹಿಸಲು ರಸ್ತೆ ಸಮಸ್ಯೆ ಇದೆ.

ಭಟ್ಕಳ ತಾಲ್ಲೂಕಿನ ಹೆಬಳೆ ಹಾಗೂ ಯಲ್ವಡಿಕವೂರ ಪಂಚಾಯಿತಿ ಹೊರತು ಪಡಿಸಿ ಉಳಿದ 14 ಕಡೆ ಕಸ ವಿಲೇವಾರಿ ತ್ಯಾಜ್ಯಘಟಕ ಸ್ಥಾಪಿಸಲಾಗಿದೆ. ಮಾವಳ್ಳಿ, ಶಿರಾಲಿ ಹಾಗೂ ಹೆಬಳೆ ಹೊರತು ಪಡಿಸಿ ಉಳಿದ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಕಾಟಾಚಾರಕ್ಕೆ ನಡೆಯುತ್ತದೆ ಎನ್ನುವುದು ಸಾರ್ವಜನಿಕರ ದೂರು.

‘ಕುಮಟಾ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಮನೆ ಮನೆಗಳಿಂದ ಕಸ ಸಂಗ್ರಹಿಸುವ ವಾಹನ ಮಂಜೂರಾಗಿದೆ. ಬಾಡ ಹಾಗು ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿ ಘಟಕ ಇನ್ನಷ್ಟೆ ಆರಂಭವಾಗಬೇಕಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ಭಾಸ್ಕರ ಭಟ್ ಹೇಳಿದರು.

ದಾಂಡೇಲಿ ತಾಲ್ಲೂಕಿನ ಆಲೂರು, ಕೋಗಿಲಬನ ಗ್ರಾಮ ಪಂಚಾಯಿತಿಗಳು ನಗರ ತಾಜ್ಯ ಘಟಕದೊಂದಿಗೆ ಸಂಯೋಜನೆ ಮಾಡಲಾಗಿದೆ. 32 ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ಗ್ರಾಮಗಳಿಗೆ ಮಾತ್ರ ವಾಹನ ಕಸ ಸಂಗ್ರಹಕ್ಕೆ ಹೋಗುತ್ತದೆ. ಇನ್ನುಳಿದ ಕುಗ್ರಾಮಗಳಿಗೆ ಕಸ ಸಂಗ್ರಹಣೆ ವಾಹನ ಬರುತ್ತಿಲ್ಲ ಎಂಬ ಆರೋಪವಿದೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ವಾರಕ್ಕೆ ಒಂದು ಹಳ್ಳಿಗೆ ವಾಹನ ಹೋಗಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಹೆಚ್ಚಿನ ಹಳ್ಳಿಗಳಲ್ಲಿ ಜನರು ಕಸವನ್ನು ನೀಡುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಇಒ ದೇವರಾಜ ಹಿತ್ತಲಕೊಪ್ಪ ಹೇಳುತ್ತಾರೆ.

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ಆವಾರದಲ್ಲಿ ಕಸ ಸಂಗ್ರಹಣಾ ವಾಹನಕ್ಕೆ ತಾಡಪತ್ರೆ ಮುಚ್ಚಿಡಲಾಗಿದೆ. ಉಮ್ಮಚಗಿ ಪಂಚಾಯಿತಿಯಲ್ಲಿ ವಾರಕ್ಕೆ ಎರಡುದಿನ ಕಸ ಸಂಗ್ರಹಿಸಲಾಗುತ್ತದೆ. ಮಾರಾಟವಾಗುವ ಪ್ಲಾಸ್ಟಿಕ್ ಹೊರತುಪಡಿಸಿ ಉಳಿದ ತ್ಯಾಜ್ಯವನ್ನು ಸುಡಲಾಗುತ್ತಿದೆ ಎಂಬ ದೂರುಗಳಿವೆ.

‘ವಜ್ರಳ್ಳಿಯಲ್ಲಿ ಕೆಲ ಅಂಗಡಿಯವರು ವಾಹನಕ್ಕೆ ಕಸ ಹಾಕದೆ ರಾತ್ರಿ ವೇಳೆ ಸುಡುತ್ತಾರೆ. ಇದರಿಂದ ಮನೆಗೆ ಕೆಟ್ಟ ವಾಸನೆ ಬರುತ್ತಿದ್ದು ತೊಂದರೆ ಆಗಿದೆ’ ಎಂದು ಗ್ರಾಮಸ್ಥ ಟಿ.ಸಿ.ಗಾಂವ್ಕರ ದೂರುತ್ತಾರೆ.

ಜೊಯಿಡಾ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಪ್ರಮುಖ ಬೀದಿಗಳಲ್ಲಿ ಮಾತ್ರ ಕಸ ಸಂಗ್ರಹಣೆ ವಾಹನ ಸಂಚರಿಸುತ್ತಿರುವ ದೂರುಗಳಿವೆ. ಕುಂಬಾರವಾಡ, ಆಖೇತಿ, ನಾಗೋಡ, ನಂದಿಗದ್ದೆ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಗಾಗಿ ಸ್ವಚ್ಚತಾ ಸಂಕೀರ್ಣವನ್ನು ನಿರ್ಮಿಸಲಾಗಿದ್ದರೂ ನಿಯಮಿತವಾಗಿ ಕಸ ಸಂಗ್ರಹಣೆ ಆಗುತ್ತಿಲ್ಲ.

‘ಕಸ ಸಂಗ್ರಹಣೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಿಗೆ ಮಾತ್ರ ಸೀಮಿತವಾಗಿದೆ. ಕಸ ವಿಲೇವಾರಿ ಘಟಕ, ವಾಹನದ ಕುರಿತು ಮಾಹಿತಿ ಜನರಿಗೆ ಇಲ್ಲ’ ಎನ್ನುತ್ತಾರೆ ಗಾಂಗೋಡಾ ನಿವಾಸಿ ಮಾರುತಿ ನಾಯ್ಕ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಪ್ರವೀಣಕುಮಾರ ಸುಲಾಖೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ್, ಜ್ಞಾನೇಶ್ವರ ದೇಸಾಯಿ, ಅಜಿತ್ ನಾಯಕ.

ಜೊಯಿಡಾ ತಾಲ್ಲೂಕಿನ ಅಣಶಿಯಲ್ಲಿ ಸ್ವಚ್ಛ ಸಂಕೀರ್ಣದಲ್ಲೇ ಕಸ ಸಂಗ್ರಹಣೆ ವಾಹನ ನಿಲುಗಡೆ ಮಾಡಲಾಗಿದೆ
ದಾಂಡೇಲಿ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈನಾಳ ಗ್ರಾಮದಲ್ಲಿ ಕಸ ಸಂಗ್ರಹಿಸುವ ವಾಹನ ಸಂಚರಿಸುತ್ತಿರುವುದು
ಮುಂಡಗೋಡ ತಾಲ್ಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆ ಕಸವನ್ನು ವಾಹನಕ್ಕೆ ತುಂಬುತ್ತಿರುವುದು
ಅನಗತ್ಯವಾಗಿ ಪ್ಲಾಸ್ಟಿಕ್ ಕಸವನ್ನು ಅತೀ ಹೆಚ್ಚು ತುಂಬುವುದರಿಂದ ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಕೆಲವೇ ಮನೆಗಳಿರುವ ಗ್ರಾಮಗಳಿಗೆ ಸಾಗಲು ವಾಹನದ ಡೀಸೆಲ್ ವೆಚ್ಚ ದುಬಾರಿಯಾಗುತ್ತದೆ. ಅಂತ ಕಡೆ ವಾರಕ್ಕೊಮ್ಮೆ ವಾಹನ ಸಾಗುತ್ತದೆ
ಬಾಲಚಂದ್ರ ಶೆಟ್ಟಿ ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ
ತಿಂಗಳಿಗೆ ಒಮ್ಮೆ ಬಂದು ಕಸ ಕೇಳುತ್ತಾರೆ. ಆದರೆ ಅವರು ಮನೆಗೆ ಬಂದಾಗ ನಾವು ಕೆಲಸಕ್ಕೆ ಹೋಗಿರುತ್ತೇವೆ. ಬಹುತೇಕ ಗ್ರಾಮದ ಪಕ್ಕದ ರೆಸಾರ್ಟ್ ಕಸ ತೆಗೆದುಕೊಂಡು ಹೋಗುತ್ತಾರೆ
ಜಾನು ಥೋರಟ್ ಕರಿಂಪಾಲಿ ಗ್ರಾಮಸ್ಥ
ಬೇಡ್ಕಣಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಕಟ್ಟಡ ನಿರ್ಮಾಣದ ಕೊನೆಯ ಹಂತದ ಕೆಲಸಗಳು ಬಾಕಿ ಇವೆ. ಇಲ್ಲಿ ಕಸ ಸಂಗ್ರಹಣೆ ಆರಂಭಿಸಿಲ್ಲ
ಉಲ್ಲಾಸ್ ಗೌಡರ್ ಬೇಡ್ಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಸ್ವಚ್ಛ ಸಂಕೀರ್ಣ ಕಸ ಸಂಗ್ರಹಣೆ ವಾಹನಗಳು ನಿಯಮಿತವಾಗಿ ಕೆಲಸ ನಿರ್ವಹಿಸಲು ಎಲ್ಲ ಪಿಡಿಒಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಸಮಸ್ಯೆ ಇರುವ ಕಡೆ ಪರಿಶೀಲಿಸಿ ಪರಿಹಾರ ಕಂಡುಕೊಳ್ಳುತ್ತೇವೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ

ವಾಹನವಿದ್ದರೂ ರಸ್ತೆಗೆ ಕಸ ಗೋಕರ್ಣದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆ ಉತ್ತಮವಾಗಿದೆ. ಕಳೆದ ವರ್ಷದಿಂದ ಸಾಕಷ್ಟು ದ್ರವ ತ್ಯಾಜ್ಯ ಪೂರೈಕೆಯಾಗದೇ ದ್ರವ ತ್ಯಾಜ್ಯ ಘಟಕ ಮುಚ್ಚಲ್ಪಟ್ಟಿದೆ. ಪ್ರವಾಸಿಗರೂ ಕಂಡ ಕಂಡಲ್ಲಿ ತ್ಯಾಜ್ಯ ಹಾಕುತ್ತಿರುವುದು ಸ್ವಚ್ಛತೆಗೆ ಸವಾಲಾಗಿದೆ. ‘ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿಯೇ ತ್ಯಾಜ್ಯ ಮಲೀನ ವಸ್ತುಗಳನ್ನು ಹಾಕುತ್ತಿದ್ದು ಸ್ಥಳೀಯ ಆಡಳಿತ ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಸ್ಪಂದಿಸುತ್ತಿಲ್ಲ. ಅಲ್ಲಿಯ ಜನರ ಅನುಕೂಲಕ್ಕೆಂದೇ ಪ್ರತ್ಯೇಕ ಕಸದ ವಾಹನವನ್ನೇ ಸ್ಥಳದಲ್ಲಿ ಇಡಲಾಗಿದೆ. ಆದರೂ ಕೆಲವೊಮ್ಮೆ ರಸ್ತೆಯ ಮೇಲೆ ತ್ಯಾಜ್ಯವನ್ನು ಹಾಕಲಾಗುತ್ತಿದೆ. ಮನಸ್ಸಿಗೆ ಬಂದ ಕಡೆ ಪ್ಲಾಸ್ಟಿಕ್ ಕಸ ಹಾಕುವುದರಿಂದ ಕ್ಷೇತ್ರದ ಎಲ್ಲಾ ಕಡೆ ಕಸದ ರಾಶಿ ಬೀಳುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಸಾದ.

ಕಸದ ದಾಸ್ತಾನಿನ ಚಿಂತೆ ಹೊನ್ನಾವರ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳ ಪೈಕಿ ಒಂದೆರಡು ಗ್ರಾಮ ಪಂಚಾಯಿತಿಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಗ್ರಹಣ ಹಿಡಿದಿದೆ. ‘ಕಸ ಸಂಗ್ರಹಣೆ ವಾಹನಗಳಿಗೆ ಮಹಿಳಾ ಚಾಲಕರನ್ನು ನೇಮಿಸಿ ಅವರಿಗೆ ತರಬೇತಿ ಕೂಡ ಕೊಡಲಾಗಿದೆಯಾದರೂ ಹೆಚ್ಚಿನ ಮಹಿಳಾ ಚಾಲಕರು ಚಾಲನೆ ಮಾಡಲು ಧೈರ್ಯ ತೋರುತ್ತಿಲ್ಲ. ಅಂಗಡಿಕಾರರು ಬೇಡಿಕೆ ಇರುವ ಪ್ಲಾಸ್ಟಿಕ್ ಬಾಟಲಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಉಳಿದ ತ್ಯಾಜ್ಯವನ್ನಷ್ಟೇ ನೀಡುತ್ತಾರೆ. ಗುತ್ತಿಗೆ ಪಡೆದವರು ಕಾಲಕಾಲಕ್ಕೆ ಘನತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತಿಲ್ಲವಾದ ಕಾರಣ ಸಂಗ್ರಹಿಸಿದ ಕಸ ಇಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಒಬ್ಬರು ಸಮಸ್ಯೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.