ADVERTISEMENT

ಉತ್ತರ ಕನ್ನಡ: ತಗ್ಗಿದ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 17:57 IST
Last Updated 6 ಜುಲೈ 2022, 17:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆಯ ಅಬ್ಬರ ತುಸು ತಗ್ಗಿತ್ತು. ಮುಂಡಗೋಡ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದಲೇ ವರ್ಷಧಾರೆಯಾಯಿತು.

ಉಳಿದಂತೆ, ಭಟ್ಕಳ, ಹೊನ್ನಾವರ, ಕುಮಟಾ ತಾಲ್ಲೂಕುಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿಯಿತು. ಕಾರವಾರದಲ್ಲಿ ಮಧ್ಯಾಹ್ನದ ತನಕ ಮೋಡ ಮತ್ತು ಬಿಸಿಲಿನ ವಾತಾವರಣ ಕಂಡುಬಂತು. ಹೊನ್ನಾವರ ತಾಲ್ಲೂಕಿನ ಎರಡು ಕಡೆ ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದಿವೆ. ಧಾರವಾಡ ವರದಿ: ಜಿಲ್ಲೆಯಲ್ಲಿ ಆಗಾಗ ರಭಸದ ಮಳೆ ಸುರಿಯಿತು. ಮಲೆನಾಡು ಭಾಗದಲ್ಲಿಯೂ ಮಳೆ ಮುಂದುವರಿದಿದೆ. ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದದಲ್ಲಿ ಸಾಧಾರಣ ಮಳೆಯಾಗಿದೆ.

ಗದಗ ಜಿಲ್ಲೆಯ ರೋಣ, ಮುಂಡರಗಿ, ಲಕ್ಷ್ಮೇಶ್ವರ, ಮುಳಗುಂದ ಭಾಗದಲ್ಲಿ ಜಿಟಿಜಿಟಿ ಮಳೆ ಆಗುತ್ತಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ. ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚಾಗುತ್ತ ಇದೆ.

ADVERTISEMENT

ಮೈದುಂಬಿದ ದೂಧಗಂಗಾ,ಕೃಷ್ಣಾ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ):ಮಹಾರಾಷ್ಟ್ರದಕೊಂಕಣಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಾಲ್ಲೂಕಿನಲ್ಲಿ ಹರಿದ ದೂಧಗಂಗಾ ಹಾಗೂ ವೇದಗಂಗಾ ಉಪ ನದಿಗಳು ಮೈದುಂಬಿ ಹರಿಯುತ್ತಿದೆ.

ತಾಲ್ಲೂಕಿನ ಮಲಿಕವಾಡ ಬಳಿಯ ಕಿರು ಸೇತುವೆ ಮೇಲೆ ವೇದಗಂಗಾ ನೀರು ಬರಲು ಇನ್ನು ಒಂದು ಅಡಿ ಮಾತ್ರ ಬಾಕಿ ಇದೆ. ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್‌ ಬಳಿ 37,708 ಕ್ಯುಸೆಕ್‌ ನೀರು ಹರಿಯುತ್ತಿದೆ. ಇದಕ್ಕೆ ದೂಧಗಂಗಾ ನದಿಯ(10,560 ಕ್ಯುಸೆಕ್‌) ನೀರೂ ಸೇರಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್‌ ಬಳಿ ಈ ಎರಡೂ ನದಿಗಳು ಸೇರಿ 48,260 ಕ್ಯುಸೆಕ್‌ ನೀರು ಹರಿವು ಇದೆ. ಮಹಾರಾಷ್ಟ್ರದ ರಾಧಾನಗರಿ ಜಲಾಶಯದಿಂದ 12 ಸಾವಿರ ಕ್ಯುಸೆಕ್‌ ನೀರನ್ನು ಪಂಚಗಂಗಾ ನದಿಗೆ ಬಿಡಲಾಗುತ್ತಿದೆ. ನರಸಿಂಹವಾಡಿ ಎಂಬಲ್ಲಿ ಈ ನೀರು ಕೃಷ್ಣಾ ನದಿ ಸೇರುತ್ತದೆ. ಸಮಾಗಮಗೊಂಡ ನೀರು ಬುಧವಾರ ಬೆಳಿಗ್ಗೆ ರಾಜಾಪುರ ಬ್ಯಾರೇಜ್‌ ಮೇಲೆ ಹರಿದಿದೆ. ಕೊಂಕಣ ಪ್ರದೇಶದಲ್ಲಿ ಮಳೆಯ ಆರ್ಭಟ ತುಸು ಕಡಿಮೆ ಆಗಿದೆ.

ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಬಿರುಸಾದ ಮಳೆ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಮನೆಗಳು ಪೂರ್ಣ ಹಾಗೂ ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಳ್ಳಾಲದ ಕುಂಪಲ ಮೂರುಕಟ್ಟೆಯಲ್ಲಿ ಮನೆ ಅಂಗಳದಲ್ಲಿದ್ದ ಬಾವಿ ಕಟ್ಟೆ ಸಹಿತ ಕುಸಿದಿದೆ. ರಾತ್ರಿ ವೇಳೆ ಘಟನೆ ನಡೆದಿದ್ದರಿಂದ ಅನಾಹುತ ತಪ್ಪಿದೆ. ಉಜಿರೆ ಕೊಯ್ಯೂರಿನಲ್ಲಿ ಶಾಲೆಯ ಕಾಂಪೌಂಡ್‌ ಕುಸಿದಿದೆ. ಉಡುಪಿ ಜಿಲ್ಲೆಯಲ್ಲಿ 27 ಮನೆಗಳಿಗೆ ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ ಭತ್ತದ ಕೃಷಿಗೆ ಹಾನಿಯಾಗಿದೆ. ಕುಂದಾಪುರದಲ್ಲಿ ಮರಬಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಬಣಕಲ್‌ ವಿಲೇಜ್‌, ಗೋಣಿಬೀಡಿನಲ್ಲಿ ಮೂರು ಮನೆಗಳ ಗೋಡೆಗಳು ಕುಸಿದಿವೆ.

ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ, ಹಂತೂರು, ಉಗ್ಗೆಹಳ್ಳಿ, ಊರುಬಗೆ, ಫಲ್ಗುಣಿ ಭಾಗದಲ್ಲಿ ಗದ್ದೆ ನಾಟಿಗಾಗಿ ನಿರ್ಮಿಸಿದ್ದ ಸಸಿಮಡಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಎಸ್ಟೇಟ್ ಕುಂದೂರು, ಬೀಜುವಳ್ಳಿ, ಜನ್ನಾಪುರ ಭಾಗಗಳಲ್ಲಿ ಶುಂಠಿಗದ್ದೆಗೆ ನೀರು ನುಗ್ಗಿ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.